ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಳಿಕ ಮನ ನೊಂದ ಪತಿಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಸೇವಿಸಿ ಅಸ್ವಸ್ಥನಾಗಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗರಾಳ ಗ್ರಾಮದ 24 ವರ್ಷದ ಉಮಾಶ್ರೀ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದರೆ, ಪತಿ ಲಗಮಣ್ಣ ಹೆಗ್ಗನ್ನವರ್ (27) ವಿಷ ಸೇವಿಸಿದ್ದಾನೆ. ವಿಷ ಸೇವಿಸಿದ್ದ ಲಗಮಣ್ಣನನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಉಮಾಶ್ರೀ ಮತ್ತು ಲಗಮಣ್ಣ ಜಗಳವಾಡಿಕೊಂಡಿದ್ದರು ಎನ್ನಲಾಗಿದೆ. ಸಂಬಂಧಿಗಳಾಗಿದ್ದ ಉಮಾಶ್ರೀ ಹಾಗೂ ಲಗಮಣ್ಣ ಒಂದುವರೆ ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಕೌಟುಂಬಿಕ ಕಲಹದಿಂದ ನೊಂದ ಉಮಾಶ್ರೀ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಸಂಬಂಧಿ ಸತ್ಯಪ್ಪ, ಒಂದುವರೆ ವರ್ಷದ ಹಿಂದೆ ಇಬ್ಬರೂ ಪ್ರೀತಿಸಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಈ ಘಟನೆಗೆ ಕಾರಣ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.


