ಮದುವೆಯಾಗಿ ಎರಡು ತಿಂಗಳಾಗಿದ್ದು, ಪತ್ನಿ ಬೇರೊಬ್ಬನ ಜತೆ ಪರಾರಿಯಾಗಿದ್ದಕ್ಕೆ ನೊಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದಲ್ಲಿ ನಡೆದಿದೆ.
ಹರೀಶ್ (32) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೂ ಮುನ್ನ ಹರೀಶ್ ಡೆತ್‍ನೋಟ್ ಬರೆದಿಟ್ಟಿದ್ದು, ಹೆಂಡತಿ ಬೇರೊಬ್ಬನ ಜೊತೆ ಹೋಗಿರುವುದನ್ನು ಉಲ್ಲೇಖಿಸಿದ್ದಾರೆ. ತನ್ನ ಸಾವಿಗೆ ಹೆಂಡತಿ, ಅತ್ತೆ, ಮಾವ ಹಾಗೂ ಹೆಂಡತಿಯನ್ನು ಕರೆದುಕೊಂಡು ಹೋದ ಯುವಕ ಕಾರಣ ಎಂದು ಆರೋಪಿಸಿದ್ದಾರೆ.
ಪತ್ನಿಯು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಳು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ತನ್ನ ಅಂತ್ಯ ಸಂಸ್ಕಾರವನ್ನು ಬಸವ ಧರ್ಮ ಪ್ರಕಾರವಾಗಿ ನೆರವೇರಿಸುವಂತೆ ಡೆತ್‍ನೋಟ್‍ನಲ್ಲಿ ಬರೆದಿಟ್ಟಿದ್ದಾಎ. ಬಳಿಕ ಜಮೀನಿಗೆ ಹೋಗಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೀಶ್ ಸಾವಿನಿಂದ ನೊಂದು, ಮುಂದೆ ನಿಂತು ಮದುವೆ ಮಾಡಿಸಿದ್ದ ಮಹಿಳೆಯ ಸೋದರ ಮಾವ ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹಾಸನದಲ್ಲೂ ಇಂಥದ್ದೇ ಕೇಸ್
ಹೊಳೆನರಸೀಪುರ ತಾಲೂಕಿನ ಮಾಕವಳ್ಳಿ ಗ್ರಾಮದ ಬಳಿ ಪ್ರಿಯಕರನ ಜೊತೆ ಪತ್ನಿ ಪರಾರಿಯಾಗಿದ್ದಕ್ಕೆ ಬೇಸತ್ತ ಪತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ಮಾರ್ಚ್‌ನಲ್ಲಿ ನಡೆದಿದೆ. ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದ ರವಿ (38) ಆತ್ಮಹತ್ಯೆ ಮಾಡಿಕೊಂಡಿದ್ದರು.
ರವಿಯ ಪತ್ನಿ ಗಂಡನನ್ನು ಬಿಟ್ಟು ಮಗುವಿನೊಂದಿಗೆ ಹೊನ್ನವಳ್ಳಿ ಗ್ರಾಮದ ಪ್ರದೀಪ್ ಜೊತೆ ಹೋಗಿದ್ದಳು. ರವಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸರಿಯಾಗಿ ಸ್ಪಂದಿಸದ ಕಾರಣ ಎಸ್ಪಿಗೂ ದೂರು ನೀಡಿದ್ದರು. ಆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ರವಿ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.


