ಪತಿಯನ್ನು ಉಳಿಸಿಕೊಳ್ಳಲೇಬೇಕೆಂದು ನಿರ್ಧರಿಸಿದ್ದ ಮಹಿಳೆ ತಾನೇ ಲಿವರ್ ದಾನ ಮಾಡಿದ್ದರು. ಲಿವರ್ ಕಸಿ ಶಸ್ತ್ರ ಚಿಕಿತ್ಸೆ ದಿನವೇ ಪತಿ ಮೃತಪಟ್ಟಿದ್ದು, ಕೆಲವು ದಿನಗಳ ಬಳಿಕ ಪತ್ನಿಯೂ ಅಸು ನೀಗಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ಪುಣೆಯಲ್ಲಿ ನಡೆದಿದ್ದು, ಮಹಾರಾಷ್ಟ್ರ ಆರೋಗ್ಯ ಇಲಾಖೆ ಸಂಬಂಧಿಸಿದ ಖಾಸಗಿ ಆಸ್ಪತ್ರೆಗೆ ನೋಟಿಸ್ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆ ಸಹ್ಯಾದ್ರಿಗೆ ನೋಟಿಸ್ ನೀಡಲಾಗಿದ್ದು, ಅಂಗಾಂಗ ಕಸಿ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಲ್ಲಿಸುವಂತೆ ನಿರ್ದೇಶಿಸಲಾಗಿದೆ ಎಂದು ಆರೋಗ್ಯ ಸೇವೆಗಳ ಉಪ ನಿರ್ದೇಶಕ ಡಾ. ನಾಗನಾಥ್ ಯೆಂಪಲ್ಲೆ ತಿಳಿಸಿದ್ದಾರೆ. ಸ್ವೀಕರಿಸುವವರು ಮತ್ತು ದಾನಿಯ ವಿವರಗಳು, ಸಂಬಂಧಿಸಿದ ವೀಡಿಯೊ ರೆಕಾರ್ಡ್‌ಗಳನ್ನು ಕಳುಹಿಸುವಂತೆ ಕೇಳಲಾಗಿದೆ ಎಂದು ಹೇಳಿದ್ದಾರೆ.
ಬಾಪು ಕೊಮ್ಕರ್ ಎಂಬವರಿಗೆ ಪತ್ನಿ ಕಾಮಿನಿ ತಮ್ಮ ಲಿವರ್ ಭಾಗವನ್ನು ದಾನ ಮಾಡಿದ್ದು, ಆಗಸ್ಟ್ 15 ರಂದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ಕಸಿ ಶಸ್ತ್ರಚಿಕಿತ್ಸೆಯ ನಂತರ ಬಾಪು ಕೊಮ್ಕರ್ ಆರೋಗ್ಯ ಹದಗೆಟ್ಟು 17 ರಂದು ನಿಧನರಾದರು.
ಕಾಮಿನಿ ಆಗಸ್ಟ್ 21 ರಂದು ಸೋಂಕು ತಗುಲಿ ಚಿಕಿತ್ಸೆಯ ಸಮಯದಲ್ಲಿ ನಿಧನರಾದರು. ವೈದ್ಯಕೀಯ ನಿರ್ಲಕ್ಷ್ಯ ಎಂದು ಆರೋಪಿಸಿರುವ ಕುಟುಂಬ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ. ಪ್ರಮಾಣಿತ ವೈದ್ಯಕೀಯ ಶಿಷ್ಟಾಚಾರಗಳ ಪ್ರಕಾರ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ. ತನಿಖೆಗೆ ಅಗತ್ಯವಿರುವ ಎಲ್ಲಾ ಮಾಹಿತಿ ಒದಗಿಸಲು ಬದ್ಧರಾಗಿದ್ದೇವೆ ಎಂದು ಆಸ್ಪತ್ರೆಯು ತಿಳಿಸಿದೆ. ಬಾಪುಗೆ ಹಲವು ಆರೋಗ್ಯ ಸಮಸ್ಯೆಗಳಿದ್ದವು. ಶಸ್ತ್ರಚಿಕಿತ್ಸೆಯ ಅಪಾಯಗಳ ಬಗ್ಗೆ ಕುಟುಂಬ ಮತ್ತು ದಾನಿಗೆ ಮುಂಚಿತವಾಗಿ ಸಂಪೂರ್ಣ ಸಲಹೆ ನೀಡಲಾಗಿತ್ತು ಎಂದು ಆಸ್ಪತ್ರೆ ತಿಳಿಸಿದೆ.