ಬೆಂಗಳೂರು ಟಿ.ದಾಸರಹಳ್ಳಿಯ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೂಜಾಶ್ರೀ(28) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಮೂರು ವರ್ಷದ ಹಿಂದೆ ಪೂಜಾಶ್ರೀ ಮತ್ತು ನಂದೀಶ್ ಮದುವೆಯಾಗಿದ್ದು ಹೆಣ್ಣು ಮಗುವಿದೆ.
ದಂಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, .ಒಂದು ವರ್ಷದ ನಂತರ ನಂದೀಶ್‌ಗೆ ಅಕ್ರಮ ಸಂಬಂಧ ಇರುವ ವಿಚಾರ ಪೂಜಾಗೆ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನಂದೀಶ್, ನಿಮ್ಮ ತಾಯಿ ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಜಗಳವಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಎರಡು ಮೂರು ಬಾರಿ ಹಿರಿಯರ ಸಮ್ಮುಖದಲ್ಲಿ ಇಬ್ಬರ ಮಧ್ಯೆ ರಾಜಿ ಪಂಚಾಯಿತಿ ನಡೆದಿತ್ತು. ಈ ವೇಳೆ ನಾನು ಪತ್ನಿಗೆ ಕಿರುಕುಳ ನೀಡುವುದಿಲ್ಲ ಎಂದು ನಂದೀಶ್ ಭರವಸೆ ನೀಡಿದ್ದ.
ಮೂರು ದಿನಗಳ ಹಿಂದೆ ಮತ್ತೆ ಜಗಳ ಮಾಡಿ ನಂದೀಶ್ ಹಲ್ಲೆ ಮಾಡಿದ್ದ. ಸಹಿಸದೆ ಪೂಜಾಶ್ರೀ ತವರು ಮನೆಗೆ ಹೋಗಿದ್ದರು. ನಂದೀಶ್ ಅಲ್ಲಿಗೆ ಬಂದು ಮತ್ತೆ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದ. ಭಾನುವಾರ ಬೆಳಗ್ಗೆ ಪೂಜಾಶ್ರೀ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.