ರಾಜಸ್ಥಾನದ ಝಲಾವರ್ ಜಿಲ್ಲೆಯ ಬಕಾನಿ ಪಟ್ಟಣದಲ್ಲಿ ಪತ್ನಿ ಕೋಪದಲ್ಲಿ ತನ್ನ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿ ಸಿರುವ ಸುದ್ದಿಯೊಂದು ವೈರಲ್ ಆಗ್ತಿದೆ. ಆದರೆ ಈ ಘಟನೆಯು ನಂಬಲರ್ಹವೇ ಎಂಬ ಪ್ರಶ್ನೆ ಕೂಡ ಹಲವರನ್ನು ಕಾಡಿದೆ. ಪತ್ನಿಯು ಗಂಡನ ನಾಲಗೆ ಕಚ್ಚಿ ತುಂಡರಿಸಲು ಹೇಗೆ ಸಾಧ್ಯ, ಆತ ನಾಲಗೆಯನ್ನು ಹೊರಚಾಚಿ ನೀಡಿದ್ದನೇ ಏನು ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ.
ಈ ದಂಪತಿ ಯಾವುದೋ ವಿಷಯಕ್ಕೆ ಜಗಳವಾಡಿದ್ದರು. ಈ ಜಗಳ ತಾರಕಕ್ಕೇರಿ ಕೋಪಗೊಂಡ ಹೆಂಡತಿ ಗಂಡನ ನಾಲಿಗೆಯನ್ನು ಕಚ್ಚಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಬಕಾನಿ ಪಟ್ಟಣದ ಕನ್ಹಯ್ಯಾಲಾಲ್ ಸೈನ್ ಮತ್ತು ಸುನೆಲ್ ಗ್ರಾಮದ ರವಿನಾ ಸೈನ್ ಒಂದೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ದೊಡ್ಡ ಜಗಳವೇ ನಡೆದಿದ್ದು, ಕೋಪದಲ್ಲಿ ಹೆಂಡತಿ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ್ದಾಳೆ. ಗಾಯಗೊಂಡ ಕನ್ಹಯ್ಯಾಲಾಲ್‌ನನ್ನು ಕುಟುಂಬ ಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ತುಂಡಾದ ನಾಲಿಗೆಯನ್ನು ಹೊಲಿದು ಸರಿ ಮಾಡಬಹುದು ಎಂದು ವೈದ್ಯರು ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.
ಗಂಡನ ನಾಲಗೆ ತುಂಡರಿಸಿದ ಬಳಿಕ ರವೀನಾ ತನ್ನ ಕೋಣೆಯ ಬಾಗಿಲು ಮುಚ್ಚಿ ಮಣಿಕಟ್ಟನ್ನು ಕತ್ತರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕನ್ಹಯ್ಯಾಲಾಲ್ ಸಹೋದರ ನೀಡಿದ ದೂರಿನ ಅನ್ವಯ ಪೊಲೀಸರು ಆಕೆಯ ವಿರುದ್ಧ ಸ್ವಯಂಪ್ರೇರಣೆ ಯಿಂದ ಗಾಯಗೊಳಿಸಿದ ಮತ್ತು ಗಂಭೀರ ಗಾಯವನ್ನುಂಟುಮಾಡಿದ ಆರೋಪದಡಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 115(2) ಮತ್ತು 118(2) ರ ಅಡಿ ಪ್ರಕರಣ ದಾಖಲಿಸಿದ್ದಾರೆ.