ಮಂಡ್ಯ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಒಪ್ಪದಿದ್ದರಿಂದ ಆಕ್ರೋಶಗೊಂಡು ಪತ್ನಿ ಹಾಗೂ ಅತ್ತೆ ಮೇಲೆ ಅಳಿಯ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿ ಶ್ರೀಕಾಂತ್ ತನ್ನ ಪತ್ನಿ ಲಕ್ಷ್ಮೀ ಮತ್ತು ಅತ್ತೆ ಶೃತಿ ಮೇಲೆ ರಾಡ್ನಿಂದ ಹಲ್ಲೆ ಮಾಡಿದ್ದಾನೆ.ಹಲ್ಲೆಗೊಳಗಾದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ
ಲಾಗಿದೆ.
15 ವರ್ಷದ ಹಿಂದೆ ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಗ್ರಾಮದ ಲಕ್ಷ್ಮೀ ಜೊತೆ ಶ್ರೀಕಾಂತ್ ವಿವಾಹವಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಶ್ರೀಕಾಂತ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾರೆ. ಬಳಿಕ, ಪತ್ನಿ ಲಕ್ಷ್ಮೀ ಮತ್ತು ಅತ್ತೆ ಶೃತಿ ಅವರಿಗೂ ಕೂಡ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗುತ್ತಿತ್ತು.
ಪತಿಯ ಕಿರುಕುಳ ತಾಳಲಾರದೆ ಲಕ್ಷ್ಮೀ ಕಳೆದ ಮೂರು ದಿನಗಳ ಹಿಂದೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರದಂದು ರಾಜಿಗೆಂದು ಕರೆದು ಲಕ್ಷ್ಮೀ ಮತ್ತು ಶೃತಿಯವರ ತಲೆ ಭಾಗಕ್ಕೆ ಶ್ರೀಕಾಂತ್ ಹಾಗೂ ಕುಟುಂಬಸ್ಥರು ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಗಾಯಾಳುಗಳನ್ನು ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಲಕ್ಷ್ಮೀ ಸಹೋದರ ರವಿಕಿರಣ್ ದೂರು ಆಧರಿಸಿ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಶ್ರೀಕಾಂತ್ ಸೇರಿದಂತೆ 9 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಚರ್ಚ್ ನಿರ್ಮಿಸಿ, ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಹಲವರನ್ನು ಮತಾಂತರ ಮಾಡಿದ್ದಾರೆ. ಮತಾಂತರಕ್ಕೆ ಒಪ್ಪದಿದ್ದಕ್ಕೆ ತವರು ಮನೆಯಿಂದ ಹಣ ತರುವಂತೆ ಲಕ್ಷ್ಮೀ ಅವರಿಗೆ ನಿತ್ಯ ಕಿರುಕುಳ ನೀಡಿದ್ದಾರೆ. ಈಗಾಗಲೇ 25 ಲಕ್ಷ ಹಣ ನೀಡಲಾಗಿದೆ. ಇದೇ ಹಣದಲ್ಲಿ ಚರ್ಚ್ ಕಟ್ಟಿಸಿಕೊಂಡು ಮತಾಂತರ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಪಾಲಹಳ್ಳಿ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ನಿರಂತರವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ನಡೆಯುತ್ತಿದೆ. ಗ್ರಾಮದಲ್ಲಿ ಒಕ್ಕಲಿಗರು, ವಿಶ್ವಕರ್ಮ, ಮರಾಠಿಗಳು ಸೇರಿದಂತೆ ಎಲ್ಲ ಜನಾಂಗದವರನ್ನು ಮತಾಂತರ ಮಾಡುತ್ತಾ ಬಂದಿದ್ದಾರೆ. ಕಷ್ಟದಲ್ಲಿ ಇರುವವರನ್ನು ಗುರಿಯಾಗಿಸಿಕೊಂಡು ಹಣದ ಆಮಿಷ ತೋರಿಸಿ ಮತಾಂತರ ಮಾಡುತ್ತಿದ್ದಾರೆ. ಎಲ್ಲಿಂದಲೋ ಅವರಿಗೆ ಹಣ ಬರುತ್ತಿದೆ. ಮತಾಂತರ ಆದವರಿಗೆ ಲಕ್ಷ ಲಕ್ಷ ಹಣ ಕೊಡುತ್ತಾರೆ. ಇದಕ್ಕೆ ಅಂತಲೇ ಅವರು ಮತಾಂತರ ಮಾಡುತ್ತಾ ಬಂದಿದ್ದಾರೆ. ಇದು ಗ್ರಾಮದ ಮುಖಂಡರುಗಳಿಗೂ ಗೊತ್ತಿದೆ. ನಾವು ಮತಾಂತರಕ್ಕೆ ಒಪ್ಪದಿದ್ದಾಗ ರಾಜಿ ಪಂಚಾಯತಿಗೆ ಕರೆದು ನನ್ನ ಹಾಗೂ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಲಕ್ಷ್ಮಿ ತಾಯಿ ಶೃತಿ ಹೇಳಿದ್ದಾರೆ.
ಸರ್ಕಾರಿ ಸೌಲಭ್ಯಕ್ಕೆ ಹಿಂದೂ ಹೆಸರು, ಆದರೆ ಮಾನಸಿಕವಾಗಿ ಎಲ್ಲರೂ ಮತಾಂತರವಾಗಿದ್ದಾರೆ. ಆರೋಪಿಗಳ ಪಡಿತರ ಚೀಟಿ, ಆಧಾರ್ ಕಾರ್ಡ್ ಸೇರಿ ಎಲ್ಲ ದಾಖಲೆಗಳಲ್ಲಿ ಹಿಂದೂ ಹೆಸರು ಇದೆ. ಆದರೆ ಹೊರಗೆ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಕ್ರಿಶ್ಚಿಯನ್ ಹೆಸರಿನಲ್ಲಿ ಎಂದು ಹಲ್ಲೆಗೊಳಗಾದ ಲಕ್ಷ್ಮಿ ಹೇಳಿದ್ದಾರೆ.