ಉತ್ತರ ಕನ್ನಡದ ಜೋಯಿಡಾ ತಾಲೂಕಿನಲ್ಲಿ ಆಸ್ಪತ್ರೆಯ ಕೊರತೆಯ ಬಗ್ಗೆ ಪತ್ರಕರ್ತೆಯೊಬ್ಬರು ಪ್ರಶ್ನಿಸಿದಾಗ, ಶಾಸಕ ಹಾಗೂ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅಸಂಬದ್ಧ ಮತ್ತು ಅವಮಾನಕರವಾಗಿ ಉಡಾಫೆ ಉತ್ತರ ನೀಡಿರುವುದಕ್ಕೆ ಮಾಧ್ಯಮಗಳು ಸೇರಿದಂತೆ ನಾಗರಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ದೇಶಪಾಂಡೆ ಈ ಸಂಬಂಧ ವಿವಾದಾಸ್ಪದ ಹೇಳಿಕೆಯೊಂದಿಗೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾರೆ. ಪತ್ರಕರ್ತೆಯು ನಿಮ್ಮ ಕಾಲಾವಧಿಯಲ್ಲಿ ಜಿಲ್ಲೆಗೆ ಒಂದು ಉತ್ತಮ ಆಸ್ಪತ್ರೆ ನಿರ್ಮಿಸಿಕೊಡಿ ಎಂದು ಮನವಿ ಮಾಡಿದಾಗ, ದೇಶಪಾಂಡೆ, ನಿನ್ನ ಹೆರಿಗೆಗೆ ಆಸ್ಪತ್ರೆ ಮಾಡಿಸೋಣ, ಚಿಂತಿಸಬೇಡ ಎಂದು ಉಡಾಫೆ ಮಾತುಗಳನ್ನಾಡಿ ಅವಮಾನಿಸಿದ್ದಾರೆ.ಈ ವಿಷಯ ರಾಜ್ಯ ಮಾತ್ರವಲ್ಲದೆ ರಾಷ್ಟ್ರೀಯ ವಾಹಿನಿಗಳಲ್ಲೂ ಸುದ್ದಿಯಾಗಿದೆ.
ಜೋಯಿಡಾ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಉತ್ತಮ ಆಸ್ಪತ್ರೆಯ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ನಿಮ್ಮ ಕಾಲಾವಧಿಯಲ್ಲಿ ಜಿಲ್ಲೆಗೆ ಒಂದು ಉತ್ತಮ ಆಸ್ಪತ್ರೆ ನಿರ್ಮಿಸಿಕೊಡಿ ಎಂದು ಪತ್ರಕರ್ತೆ ರಾಧಾ ಹಿರೇಗೌಡರ್, ಶಾಸಕ ದೇಶಪಾಂಡೆಯವರನ್ನು ಮನವಿ ಮಾಡಿದ್ದಾರೆ. ಈ ಮನವಿಗೆ ದೇಶಪಾಂಡೆ, “ನಿನ್ನ ಹೆರಿಗೆ ಆಗಲಿ, ಬೇರೆ ಆಸ್ಪತ್ರೆಗೆ ಸೇರಿಸೋಣ” ಎಂದು ಕೆಟ್ಟ ಮುಖಭಾವದೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ದೇಶಪಾಂಡೆಯ ಈ ವರ್ತನೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ದೇಶಪಾಂಡೆಯ ಕೀಳು ವರ್ತನೆಯನ್ನು ಖಂಡಿಸಿದ್ದಾರೆ. “ಬಿಜೆಪಿ ಅಥವಾ ಜೆಡಿಎಸ್ ಶಾಸಕರು ಇಂತಹ ಹೇಳಿಕೆ ನೀಡಿದ್ದರೆ, ಕಾಂಗ್ರೆಸ್ ನಾಯಕರು ಮೌನವಾಗಿರುತ್ತಿದ್ದರೇ ಎಂದು ಪ್ರತಿಪಕ್ಷಗಳವರು ಕಿಡಿ ಕಾರಿದ್ದಾರೆ.