ನಮ್ಮ ಸರ್ಕಾರ ಪಾರದರ್ಶಕವಾಗಿದ್ದು, ಧರ್ಮಸ್ಥಳ ಪ್ರಕರಣವನ್ನು ಈ ಹಿಂದೆ ಸಿಬಿಐ ತನಿಖೆಗೆ ಕೊಡಲಾಗಿತ್ತು. ಈಗ ಎಸ್‌ಐಟಿಗೆ ವಹಿಸಲಾಗಿದೆ. ಬಿಜೆಪಿಯವರು 4 ವರ್ಷ ಅಧಿಕಾರದಲ್ಲಿದ್ದರೂ ಯಾಕೆ ಸರಿಯಾದ ತನಿಖೆ ಮಾಡಿಸಲಿಲ್ಲ, ಈಗ ತನಿಖೆ ಆಗುತ್ತಿದೆ. ಹೀಗಾಗಿ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಬಿಜೆಪಿಯವರ ಮಾತಿಗೆ ಬೆಲೆ ಕೊಡುವುದಕ್ಕೆ ಹೋಗಬೇಡಿ, ತನಿಖೆ ಆಗುತ್ತಿರುವಾಗ ಮಾತನಾಡುವುದು ತಪ್ಪಾಗುತ್ತದೆ. ತನಿಖೆ ಆಗಲಿ, ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಲಿ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಮತಕಳ್ಳತನದ ಬಗ್ಗೆ ರಾಹುಲ್ ಗಾಂಧಿ ದಾಖಲೆ ನೀಡಿದ್ದು, ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದವರು, ಈಗ ನಮಗೆ ನೋಟೀಸ್ ಕೊಟ್ಟಿದ್ದಾರೆ. ದೇಶದಲ್ಲಿ ಇಡಿ, ಐಟಿ, ಎಲೆಕ್ಷನ್ ಕಮೀಷನ್ ದುರುಪಯೋಗ ಆಗುತ್ತಿದೆ. ಟಿಎನ್ ಶೇಷನ್ ಈ ಹಿಂದೆ ಇದ್ದರು. ಚುನಾವಣೆ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದರು. ಅವರಂಥ ಅಧಿಕಾರಿಗಳಿದ್ದರೆ ಪಕ್ಷಾತೀತವಾಗಿ ನಡೆದುಕೊಳ್ಳುತ್ತಾರೆ ಎಂದರು. ಒಳಮೀಸಲಾತಿ ಅನುಷ್ಠಾನ ವಿಚಾರವಾಗಿ ಆಗಸ್ಟ್ 16ರಂದು ಸಂಪುಟ ಸಭೆ ನಡೆಯಲಿದೆ. ಈ ಒಂದೇ ವಿಚಾರವಾಗಿ ಅಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಬಿಜೆಪಿ ನಾಯಕರಿಗೆ ಕೆಲಸಕ್ಕಿಂತ ಪ್ರಚಾರದ ಹುಚ್ಚು ಆಸ್ತಿ. ಏನೂ ಮಾಡದಿದ್ದರೂ ಪ್ರಚಾರ ಪಡೆಯುತ್ತಾರೆ. ಬೇರೆಯವರ ಕೆಲಸ ತಾವೇ ಮಾಡಿದ್ದಾಗಿ ಹೇಳುತ್ತಾರೆ. ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲೂ ಅದೇ ಕೆಲಸ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಡೀ ಮೆಟ್ರೋ ಯೋಜನೆಯನ್ನೇ ಕೇಂದ್ರದ ಬಿಜೆಪಿ ಸರ್ಕಾರ ಮಾಡಿದೆ ಎಂದು ಪ್ರಚಾರ ಮಾಡುತ್ತಾ, ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. 2006ರಲ್ಲಿ ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಶಂಕುಸ್ಥಾಪನೆ ನೆರವೇರಿಸಿದ್ದರು. ಮೆಟ್ರೋ ಸಂಸ್ಥೆ ಯಾವುದೇ ಪಕ್ಷದ ಸ್ವತ್ತಲ್ಲ. ಆದರೆ ಬಿಜೆಪಿ ನಾಯಕರು ಮಾತ್ರ ಕೆಲಸ ಮಾಡದಿದ್ದರೂ ಪ್ರಚಾರ ಪಡೆಯುತ್ತಾರೆ ಎಂದರು.