Menu

ಮತ ಕಳವು ವಿರುದ್ಧ ನಮ್ಮ ಹೋರಾಟದಿಂದ ಬಿಜೆಪಿಯವರಿಗೆ ನೋವು ಏಕೆ: ಡಿಕೆ ಸುರೇಶ್

ಪ್ರಜಾಪ್ರಭುತ್ವ ಉಳಿಸಲು ಇರುವ ಮತದಾನದ ಹಕ್ಕನ್ನು ಕಸಿದು, ದುರುಪಯೋಗಪಡಿಸಿಕೊಳ್ಳುವ ಕೆಲಸ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೇ ನಡೆಯುತ್ತಿದೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹರಿಹಾಯ್ದರು. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.

ನಾವು ಹೋರಾಟ ಮಾಡಿದರೆ ಬಿಜೆಪಿಗೆ ಏಕೆ ನೋವು. ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಯಾರ್ಯಾರನ್ನೋ ಮತದಾರರನ್ನು ಪಟ್ಟಿಯಲ್ಲಿ ಸೇರಿಸಿ ಅವರು ಇಲ್ಲದೇ ಇದ್ದರೂ ಮತದಾನ ಗುರುತಿನ ಚೀಟಿಯನ್ನು ನೀಡಲಾಗಿದೆ. ಅದಕ್ಕೆ ಒಂದಷ್ಟು ಸಾಕ್ಷಿಗಳನ್ನು ಇಟ್ಟುಕೊಂಡು ಹೋರಾಟವನ್ನು ರೂಪಿಸಲಾಗಿದೆ ಎಂದರು.

ಎಲ್ಲೆಲ್ಲಿ ಮತದಾರರಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬುದು ದೇಶದ ಜನರಿಗೆ ತಿಳಿಯಬೇಕು ಹಾಗೂ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಬೇಕು ಎಂದು ಕಾಂಗ್ರೆಸ್ ಪಕ್ಷ ಬೆಂಗಳೂರಿನಿಂದ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹೋರಾಟ ರೂಪಿಸಿದೆ.ಬಿಹಾರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ. ಇದರ ವಿರುದ್ಧ ರಾಹುಲ್ ಗಾಂಧಿ ಅವರು ಹೋರಾಟ ಕೈಗೊಂಡಿದ್ದಾರೆ. ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ. ಚುನಾವಣಾ ಆಯೋಗಕ್ಕೆ ಅಕ್ರಮಗಳನ್ನು ಗಮನಕ್ಕೆ ತಂದರು ಬಿಜೆಪಿಯ ಅಣತಿಯಂತೆ ಕೆಲಸ ಮಾಡುತ್ತಿದೆ. ಕರ್ನಾಟಕದ ಕೆಲವೊಂದು ಕ್ಷೇತ್ರಗಳಲ್ಲಿಯೂ ಸಹ ಅಕ್ರಮ ನಡೆದಿದೆ. ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡುವುದು, ಕೆಲವರ ಹೆಸರನ್ನು ಕೈ ಬಿಡುವುದು ಹಾಗೂ ಮತದಾನ ಪ್ರಕ್ರಿಯೆ ವೇಳೆ ಗೊಂದಲಗಳನ್ನು ಉಂಟುಮಾಡುವುದು ನಡೆದಿದೆ ಎಂದು ಹೇಳಿದರು‌.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಚಿಲುಮೆ ಎನ್ನುವ ಸಂಸ್ಥೆಯನ್ನು ಬಳಸಿಕೊಂಡು ಅಕ್ರಮಗಳನ್ನು ನಡೆಸುತ್ತಿತ್ತು. ಬಿಜೆಪಿ ಮತದಾರರ ಪಟ್ಟಿಯ ಮೇಲೆ ಕಣ್ಣಿಟ್ಟು ಚುನಾವಣಾ ಪ್ರಕ್ರಿಯೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದೇ ಅದರ ದುರುದ್ದೇಶವಾಗಿದೆ ಎಂದರು. ಕಾಂಗ್ರೆಸ್ ಹೋರಾಟದಿಂದ ಚುನಾವಣಾ ಆಯೋಗ ಹಿಕ್ಕಟ್ಟಿಗೆ ಸಿಲುಕಲಿದೆಯೇ ಎಂದು ಕೇಳಿದಾಗ, ಚುನಾವಣಾ ಆಯೋಗ ಒಂದು ಸ್ವಾಯತ್ತ ಸಂಸ್ಥೆ. ಇಂತಹ ಸಂಸ್ಥೆ ಒಂದು ಸರ್ಕಾರದ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿರುವುದು ನಮ್ಮೆಲ್ಲರಲ್ಲಿ ಇರುವ ಆತಂಕ ಎಂದು ಉತ್ತರಿಸಿದರು.

ಚುನಾವಣಾ ಅಕ್ರಮಗಳನ್ನು ಪರಿಚಯಿಸಿದ್ದೆ ಕಾಂಗ್ರೆಸ್ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷ ಅಥವಾ ಸರ್ಕಾರ ಇದುವರೆಗೂ ಚುನಾವಣಾ ಆಯೋಗ ಸೇರಿದಂತೆ ಯಾವುದೇ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿಲ್ಲ. ಆರ್ ಬಿಐ, ಸಿಬಿಐ, ಇಡಿ ಸೇರಿದಂತೆ ಯಾವುದೇ ಸಂಸ್ಥೆಗಳ ಮೇಲೆ ಪ್ರಭಾವ ಬೀರಿಲ್ಲ. ಈ ಸಂಸ್ಥೆಗಳು ತಮ್ಮ ಇಚ್ಛೆಯಂತೆ ಕೆಲಸ ಮಾಡುತ್ತಿದ್ದವು. . ಆದರೆ ಬಿಜೆಪಿಯು ತನ್ನ ಕೈಗೊಂಬೆಯಾಗಿ ಪರಿವರ್ತನೆ ಮಾಡಿಕೊಂಡಿದೆ. ಅನೇಕ ಬಾರಿ ಸುಪ್ರೀಂ ಕೋರ್ಟ್ ಸ್ವಾಯುಕ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಛೀಮಾರಿ ಹಾಕಿದರು ಇವರಿಗೆ ನಾಚಿಕೆಯಾಗುವುದಿಲ್ಲ, ಮಾನ ಮರ್ಯಾದೆ ಇಲ್ಲ. ಏನೇ ಆದರೂ ಕಾಂಗ್ರೆಸ್ ಪಕ್ಷದ ಕಡೆ ಕೈ ತೋರಿಸುತ್ತಾರೆ” ಎಂದು ಹೇಳಿದರು.

ಬೆಂಗಳೂರಿನಲ್ಲೂ ಸಹ ಮತಗಳಾವು ಆಗಿದೆ ಎಂದು ನಾನು ಎರಡು ಮೂರು ಬಾರಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆ. ಕೇಂದ್ರ ಚುನಾವಣಾ ಆಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದರು ತನಿಖೆ ನಡೆಸಲಿಲ್ಲ. ಕೆಲವೊಂದು ಕಡೆ ಮನೆಗಳೇ ಇಲ್ಲ. ಆದರೆ ಮತಗಳು ಮಾತ್ರ 50 ಕ್ಕಿಂತ ಹೆಚ್ಚಿವೆ. ರಾಹುಲ್ ಗಾಂಧಿಯವರು ಎತ್ತಿರುವ ದನಿಯನ್ನು ನಾವು ಗಟ್ಟಿಗೊಳಿಸಬೇಕು. ಅದಕ್ಕಾಗಿ ಈ ಹೋರಾಟ. ಈಗ ಯಾವುದೇ ಚುನಾವಣೆಗಳು ಇಲ್ಲ. ಆದರೆ ಪ್ರಜಾಪ್ರಭುತ್ವ ಉಳಿಯಬೇಕು ಎನ್ನುವುದು ನಮ್ಮ ಆಶಯ.” ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಈ ಹಕ್ಕನ್ನು ಉಳಿಸಬೇಕಾಗಿರುವುದು ವಿರೋಧ ಪಕ್ಷವಾಗಿ ನಮ್ಮ ಉದ್ದೇಶ. ವಿರೋಧ ಪಕ್ಷದ ನಾಯಕರಾಗಿ ಇದು ರಾಹುಲ್ ಗಾಂಧಿಯವರ ಕರ್ತವ್ಯ ಈ ಕಾರಣಕ್ಕಾಗಿ ಅವರು ಹೋರಾಟವನ್ನು ರೂಪಿಸಿದ್ದಾರೆ ಎಂದರು. ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ಮಾಡಬಹುದಲ್ಲವೇ ಎಂದು ಕೇಳಿದಾಗ, ಚುನಾವಣಾ ಆಯೋಗಕ್ಕೆ ಮೊದಲು ನಾವು ಮನವಿಯನ್ನು ಕೊಡುತ್ತೇವೆ ಅವರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಿದ ಮೇಲೆ ನಾವು ಮುಂದಿನ ಹೋರಾಟವನ್ನು ರೂಪಿಸುತ್ತೇವೆ. ನ್ಯಾಯಾಲಯಗಳು ಇವೆ ಎಂದು ಪ್ರತಿಯೊಂದು ಅದರ ಮುಂದೆ ಹೋಗಲು ಸಾಧ್ಯವೇ? ಮೊದಲು ಆಯಾಯ ಸಂಸ್ಥೆ ಗಮನಕ್ಕೆ ತರಬೇಕಾಗುತ್ತದೆ ನಂತರ ಮುಂದಿನದ್ದು ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಆರೋಪಿ ಎಂದು ನ್ಯಾಯಾಲಯ ತೀರ್ಮಾನಿಸಿದೆ ಎಂದು ಕೇಳಿದಾಗ, “ಇದು ನ್ಯಾಯಾಲಯದ ತೀರ್ಪು. ನಮ್ಮ ತೀರ್ಪಲ್ಲ. ನ್ಯಾಯಾಲಯ ನೀಡುವ ತೀರ್ಪಿಗೆ ನಾವೆಲ್ಲರೂ ತಲೆಬಾಗಬೇಕು ಎಂದು ತಿಳಿಸಿದರು.

ಧರ್ಮಸ್ಥಳ ಪ್ರಕರಣದಲ್ಲಿ ಮಾನವನ ಅಸ್ತಿಪಂಜರಗಳು ಸಿಕ್ಕಿವೆ ಎಂದು ಕೇಳಿದಾಗ, “ನನಗಿಂತ ಇದರ ಬಗ್ಗೆ ಹೆಚ್ಚು ಮಾಹಿತಿ ಇರುವುದು ಮಾಧ್ಯಮಗಳ ಬಳಿ. ಇಡೀ ದಿನ ಈ ಪ್ರಕರಣವನ್ನು ವರದಿ ಮಾಡುತ್ತಿದ್ದೀರಿ. ತನಿಖೆ ಪ್ರಾರಂಭವಾಗಿದೆ ಅದು ಮುಕ್ತಾಯವಾಗುವ ತನಕ ಕಾದು ನೋಡಬೇಕಾಗಿರುವುದು ನಮ್ಮ ಕೆಲಸ. ಎಂಟು ಕಡೆ ಶೋಧ ನಡೆಸಲಾಗಿದೆ ಇದರಲ್ಲಿ ಒಂದು ಕಡೆ ಅಸ್ತಿಗಳು ಸಿಕ್ಕಿವೆ. ದೂರುದಾರ 13 ಸ್ಥಳವನ್ನು ಗುರುತಿಸಿದ್ದಾನೆ. ರಾಜ್ಯದ ಜನರಿಗೆ ಸತ್ಯವನ್ನು ತೋರಿಸಿ ಎಂದು ಮಾಧ್ಯಮಗಳ ಬಳಿ ಮನವಿ ಮಾಡುತ್ತೇನೆ. ಧರ್ಮಸ್ಥಳ ಪವಿತ್ರವಾದ ಕ್ಷೇತ್ರ ಈ ಕ್ಷೇತ್ರದ ಮೇಲೆ ಕೋಟ್ಯಾಂತರ ಜನ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಈ ನಂಬಿಕೆಗೆ ಧಕ್ಕೆ ಬರೆದ ರೀತಿಯಲ್ಲಿ ನಮ್ಮ ಹಾಗೂ ಮಾಧ್ಯಮಗಳ ನಡೆ ಇರಬೇಕು ಎಂದು ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಕೇಂದ್ರ ಸೇವೆಗೆ ಹೋಗುತ್ತಾರೆ ಹಾಗೂ ಎಸ್ಐಟಿ ತಂಡದಲ್ಲಿರುವ ಬೆದರಿಕೆ ಹಾಕಿದ್ದಾರೆ ಎನ್ನುವ ಬಗ್ಗೆ ಕೇಳಿದಾಗ, “ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಹೋಗುತ್ತಾರೆ ಎಂದು ಹೇಳಿದವರು ಯಾರು? ಇದೆಲ್ಲವೂ ಗಾಳಿ ಸುದ್ದಿ. ಪ್ರಣಬ್ ಮೊಹಂತಿ ಅವರು ಈಗಾಗಲೇ ಸ್ಥಳಕ್ಕೆ ತೆರಳಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸೇವೆಗೆ ಹೋಗುವುದು ಕೇವಲ ಒಂದು ದಿನದ ಕೆಲಸವಲ್ಲ ಸುಮಾರು 6 ರಿಂದ 1 ವರ್ಷದ ಪ್ರಕ್ರಿಯೆ. ಎಸ್ಐಟಿ ರಚನೆ ಆಗಿರುವುದು ಈಗ. ತನಿಖೆಗೆ ಯಾವುದೇ ರೀತಿಯ ಧಕ್ಕೆ ಬರದಂತೆ ನೋಡಿಕೊಳ್ಳುವುದು ಸರ್ಕಾರದ ಕೆಲಸ. ಇದರ ಬಗ್ಗೆ ಈಗಾಗಲೇ ಗೃಹ ಸಚಿವರು ಸ್ಪಷ್ಟನೆ ನೀಡಿರುವುದರಿಂದ ನಾವು ಮಾತನಾಡುವುದು ಸೂಕ್ತವಲ್ಲ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *