ಹಾಸನ: ಕಾಂಗ್ರೆಸ್‌ನವರು ರಾಜ್ಯದ 30 ಜಿಲ್ಲೆ ಬಿಟ್ಟು ಹಾಸನದಲ್ಲೇ 2 ವರ್ಷಗಳಲ್ಲಿ 2 ಬಾರಿ ಸಿಎಂ ಸಮಾವೇಶ ನಡೆಸಿರುವುದೇಕೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರಶ್ನಿಸಿದರು.
ಹುಟ್ಟೂರು ಹರದನಹಳ್ಳಿಯ ಮನೆ ದೇವರಿಗೆ ಸೋಮವಾರ ಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಮೇಲೇಕೆ ಇಷ್ಟು ಗುರಿ ಎಂದು ಕೇಳಿದರು.
ನನಗೀಗ 93 ವರ್ಷ. ಕೊನೆಯ ಉಸಿರಿನವರೆಗೂ ಹೋರಾಟ ಮಾಡುತ್ತೇನೆ. ಕಾಂಗ್ರೆಸ್‌ನವರು ಮಾಡಿರುವ ಸಭೆಗಳಿಗಿಂತ ದೊಡ್ಡ ಮಟ್ಟದ ಸಭೆ ಮಾಡುತ್ತೇವೆ ಎಂದು ಸವಾಲು ಹಾಕಿದರು.
ನಾವು ಯಾವ ಸಮಾಜಕ್ಕೆ ಅನ್ಯಾಯ ಮಾಡಿದ್ದೇವೆ, ಯಾರಿಗೆ ಅನ್ಯಾಯವಾಗಿದೆ ಹೇಳಲಿ ಎಂದು ಪ್ರಶ್ನಿಸಿದರು. ಜಿಲ್ಲೆಯ ಪ್ರಗತಿಗೆ ರೇವಣ್ಣ ಮಾಡಿದ ಕೆಲಸಗಳ ಪಟ್ಟಿ ಈಗ ಕೊಡಲ್ಲ, ರೇವಣ್ಣ ವರ್ಚಸ್ಸು ಮುಗಿಸಲು ಏನೇನು ಬೇಕೋ ಮಾಡಿದರು. ಆದರೆ ಆಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ದೇಶದಲ್ಲಿ ಯಾವ ಸ್ಥಿತಿಯಲ್ಲಿದೆ ಎಂದು ಲೇವಡಿ ಮಾಡಿದ ದೇವೇಗೌಡ, ಕೇವಲ 3 ಕಡೆ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ 14 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ ಎಂದರು.
ಅಧಿಕಾರಕ್ಕೆ ಅಂಟಿಕೊಂಡು ಕುಳಿತ ವ್ಯಕ್ತಿ ನಾನು ಅಲ್ಲ. ನನ್ನ ಜೀವನದ ಹೋರಾಟದ ದಾರಿಯೇ ನನ್ನ ರಾಜಕೀಯ ಎಂದು ಹೇಳಿದರು.
ನಾವು ಎನ್‌ಡಿಎ ಜೊತೆ ಇದ್ದೇವೆ. ಪಾರ್ಲಿಮೆಂಟ್ ಸೇರಿ ಎಲ್ಲ ಕಡೆ ಒಟ್ಟಿಗೇ ಇರುತ್ತೇವೆ ಎಂದು ಘೋಷಿಸಿದರು. ನೀವು ನಮ್ಮನ್ನ ಮುಗಿಸಿದ್ದೀರಾ, ನಮಗೆ ಶಕ್ತಿ ಇಲ್ಲ ಅಂತ ಹೇಳಿದರು. ಅದಕ್ಕೇ ನಾವು ಎನ್‌ಡಿಎ ಜೊತೆ ಹೋಗಿದ್ದೇವೆ. ನೀವು ಯಾಕೆ ಸ್ಟಾಲಿನ್ ಮನೆ ಬಾಗಿಲಿಗೆ ಹೋಗ್ತೀರಾ ಎಂದು ಕಾಂಗ್ರೆಸ್ ನಾಯಕರಿಗೆ ಲೇವಡಿ ಮಾಡಿದರು.
ಬಳಿಕ ಹಾಸನದಲ್ಲಿ ನಡೆದ ಜೆಡಿಎಸ್ ಮುಖಂಡರು-ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಗೌಡರು, ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷವಾದರೂ ಜನರ ಶಕ್ತಿಯಿಂದಲೇ ಉಳಿದಿದೆ ಎಂದರು.
ನಮ್ಮ ಪಕ್ಷ ಅನೇಕ ಬಾರಿ ಒಡೆದುಹೋದರೂ, ಇಂದು ಕರ್ನಾಟಕದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಜೆಡಿಎಸ್‌ನ್ನು ಜೀವಂತವಾಗಿ ಉಳಿಸಿ ಬೆಳೆಸಿದವರು ಕಾರ್ಯಕರ್ತರೇ ಎಂದು ಶ್ಲಾಘಿಸಿದರು.
ಹಾಸನ ಜಿಲ್ಲೆ ತಮ್ಮನ್ನು ಹುಟ್ಟಿಸಿ ಬೆಳೆಸಿದ ನೆಲ ಎಂದು ಹೇಳಿದ ದೇವೇಗೌಡರು, 1962ರಿಂದ 2025 ರವರೆಗೆ ಈ ಜಿಲ್ಲೆಯ ಜನರು ತಮ್ಮನ್ನು ಬೆಳೆಸಿದ್ದಾರೆ ಎಂದು ಸ್ಮರಿಸಿದರು.
ತಮ್ಮ ಆರೋಗ್ಯಕ್ಕಾಗಿ ಕುಟುಂಬಸ್ಥರು ಮತ್ತು ಕಾರ್ಯಕರ್ತರು ನಡೆಸಿದ ಪ್ರಾರ್ಥನೆ ಸ್ಮರಿಸಿದ ಅವರು, ನನ್ನ ಅಳಿಯ ಡಾ.ಮಂಜುನಾಥ್ ನನ್ನನ್ನು ಉಳಿಸಲು ಬಹಳ ಪ್ರಯತ್ನ ಮಾಡಿದ್ದಾರೆ. ರೇವಣ್ಣ ನನ್ನ ಆಯಸ್ಸಿಗಾಗಿ ಎಷ್ಟೋ ಪೂಜೆ ಮಾಡಿಸಿದ್ದಾರೆ. ನೀವು ಎಲ್ಲರೂ ನನ್ನ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ್ದೀರಿ, ಇದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.
ಹೋರಾಟ ಮಾಡುವ ಶಕ್ತಿ ಕಾಲಲ್ಲಿ ಇಲ್ಲ, ಆದರೆ ತಲೆಯಲ್ಲಿ ಇದೆ ಎಂದು ಹೇಳಿದ ದೇವೇಗೌಡರು, ನಾನು ಅಕಸ್ಮಿಕವಾಗಿ ಪ್ರಧಾನಿ ಆದೆ. ನಾನು ಎಂದಿಗೂ ಆ ಸ್ಥಾನದ ಕನಸು ಕಾಣಲಿಲ್ಲ. ಜೆ.ಹೆಚ್.ಪಟೇಲ್ ಅವರಿಗೆ ಹೆಚ್.ಕೆ.ಕುಮಾರಸ್ವಾಮಿ ಅವರನ್ನು ಮಂತ್ರಿ ಮಾಡು ಎಂದು ಹೇಳಿದ್ದೆ. ಆದರೆ ಅವರು ರೇವಣ್ಣನಿಗೆ ಕರೆ ಮಾಡಿ ಪ್ರಮಾಣವಚನ ಸ್ವೀಕರಿಸಲು ಹೇಳಿದರು ಎಂದು ವಿವರಿಸಿದರು.
ನಾನು ನನ್ನ ಜೀವನದಲ್ಲಿ ಎಂದೂ ಸುಳ್ಳು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ ದೇವೇಗೌಡರು, ಪಕ್ಷದ ಬಲ ಹಾಗೂ ಹೋರಾಟದ ಶಕ್ತಿಯ ಬಗ್ಗೆ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಿದರು.
ಕುಮಾರಸ್ವಾಮಿ 26 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದರು. ಗ್ಯಾರಂಟಿ ಯೋಜನೆಗಳ ಬಗ್ಗೆ ಈಗ ಕಾಂಗ್ರೆಸ್ ಪಕ್ಷದವರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ನಿರ್ಮಾಣಕ್ಕೆ ಹಣವಿಲ್ಲ ಎಂದು ಅವರದೇ ನಾಯಕರು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಸಭೆಯಲ್ಲಿ ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಎ.ಮಂಜು, ಸಾ.ರಾ.ಮಹೇಶ್, ಶಾಸಕರಾದ ಸಿ.ಎನ್.ಬಾಲಕೃಷ್ಣ, ಹೆಚ್.ಪಿ.ಸ್ವರೂಪ್ ಪ್ರಕಾಶ್, ಸೂರಜ್ ರೇವಣ್ಣ, ಮಾಜಿ ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್, ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ, ಹತ್ತಾರು ಮುಖಂಡರು, ಕಾರ್ಯಕರ್ತರು ಇದ್ದರು.


