ನವದೆಹಲಿ: ಭಾರತದಲ್ಲಿ ಮತದಾನವನ್ನು ಉತ್ತೇಚಿಸುವ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಅಮೆರಿಕ ಸರ್ಕಾರದ ನೆರವಿನ ಕುರಿತು ಮೋದಿ ಸರ್ಕಾರವು ಶ್ವೇತಪತ್ರ ಹೊರಡಿಸಲಿ ಎಂದು ಕಾಂಗ್ರೆಸ್ ಗುರುವಾರ ಆಗ್ರಹಿಸಿದೆ.
ಭಾರತದಲ್ಲಿ ನಡೆಯುವ ಮತದಾನಕ್ಕೆ ನಾವು 182 ಕೋಟಿ (21 ದಶಲಕ್ಷ ಡಾಲರ್) ವ್ಯಯಿಸುವ ಅಗತ್ಯವೇನಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದರು. ಹಾಗೆಯೇ, ಹಿಂದಿನ ಅಧ್ಯಕ್ಷ ಜೋ ಬೈಡನ್ ಸರ್ಕಾರವು, ಭಾರತದಲ್ಲಿ ಬೇರೊಬ್ಬರು ಅಧಿಕಾಕ್ಕೇರುವುದನ್ನು ಬಯಸಿತ್ತು ಎನಿಸುತ್ತದೆ. ಈ ಕುರಿತು ಭಾರತ ಸರ್ಕಾರಕ್ಕೆ ತಿಳಿಸಬೇಕಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ, ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ಅಮೆರಿಕದ ನೆರವಿನ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘1961ರ ನವೆಂಬರ್ 3ರಂದು ಸ್ಥಾಪಿಸಲಾದ ಅಮೆರಿಕ ನೆರವು (ಯುಎಸ್ಎಐಡಿ) ನಿಧಿ ಇತ್ತೀಚಿನ ದಿನಗಳಲ್ಲಿ ತುಂಬಾ ಸುದ್ದಿಯಲ್ಲಿದೆ. ಅಮೆರಿಕದ ಅಧ್ಯಕ್ಷರು ನೀಡುತ್ತಿರುವ ಹೇಳಿಕೆ ತೀರಾ ಅಸಂಬದ್ಧವಾಗಿದೆ’ ಎಂದಿದ್ದಾರೆ.
‘ಭಾರತದಲ್ಲಿನ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಅಮೆರಿಕ ನೀಡಿರುವ ನೆರವಿನ ಕುರಿತು ಕೇಂದ್ರ ಸರ್ಕಾರವು ಶ್ವೇತಪತ್ರ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. ಇತ್ತೀಚೆಗೆ, ಯುಎಸ್ಎಐಡಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಅಮೆರಿಕ ಆಡಳಿತವು, ಭಾರತ ಸೇರಿದಂತೆ ಇತರ ದೇಶಗಳಲ್ಲಿನ ಯೋಜನೆಗಳಿಗೆ ಹಣ ನೀಡುವುದನ್ನು ತಡೆಹಿಡಿದಿದೆ.
ಭಾರತದಲ್ಲಿ ಮತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ ಅಮೆರಿಕ ನೀಡುತ್ತಿದ್ದ 182 ಕೋಟಿ ನೆರವನ್ನು ಕಡಿತಗೊಳಿಸಲಾಗಿದೆ. ವೆಚ್ಚ ನಿಯಂತ್ರಣದ ಭಾಗವಾಗಿ ಈ ಕ್ರಮ ಕೈಗೊಂಡಿರುವುದಾಗಿ ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಉಸ್ತುವಾರಿ ಎಲಾನ್ ಮಸ್ಕ್ ಅವರು ಕಳೆದ ವಾರ ಘೋಷಿಸಿದ್ದರು. ಇದರ ಬೆನ್ನಲ್ಲೇ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದ ಬಿಜೆಪಿ, ‘ಅಮೆರಿಕವು ನೆರವು ಸ್ಥಗಿತಗೊಳಿಸುವುದಾಗಿ ಹೇಳಿದೆ.
ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರವು, ದೇಶವನ್ನು ದುರ್ಬಲಗೊಳಿಸಲು ಯತ್ನಿಸುವ, ರಾಷ್ಟ್ರೀಯ ಹಿತಾಶಕ್ತಿಗೆ ವಿರುದ್ಧವಾದ ಶಕ್ತಿಗಳು ಭಾರತದ ಸಂಸ್ಥೆಗಳ ಒಳಗೆ ನುಸುಳಲು ವ್ಯವಸ್ಥಿತವಾಗಿ ಅವಕಾಶ ಮಾಡಿಕೊಟ್ಟಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.
ನೆಹರೂ-ಗಾಂಧಿ ಕುಟುಂಬದೊಂದಿಗೆ ನಂಟು ಹೊಂದಿರುವ ಅಮೆರಿಕದ ಉದ್ಯಮಿ ಜಾರ್ಜ್ ಸೊರೋಸ್ ಅವರು ಭಾರತದ ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರುತ್ತಿದ್ದಾರೆ’ ಎಂದು ಆರೋಪಿಸಿತ್ತು.