ಪ್ರಧಾನಿ ಮೋದಿ ಕಳೆದರಡು ವರ್ಷದಲ್ಲಿ 44 ಬಾರಿ ವಿದೇಶೀ ಪ್ರವಾಸ ಕೈಗೊಂಡಿದ್ದಾರೆ. ಆದರೆ ಮಣಿಪುರಕ್ಕೆ ಒಂದೂ ಬಾರಿಯೂ ಭೇಟಿ ನೀಡಿಲ್ಲ ಯಾಕೆ ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಸಂಕಷ್ಟದಲ್ಲಿರುವ ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ಮಾಡದೇ ಇರುವುದು ಆಶ್ಚರ್ಯ ಉಂಟುಮಾಡಿದೆ. ಮೋದಿ ರಾಜ್ಯಧರ್ಮ ಪಾಲಿಸುವುದನ್ನು ಮರೆತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
2023 ಮೇ 3ರಂದು ಮಣಿಪುರದಲ್ಲಿ ಹಿಂಸಾಚಾರ ಆರಂಭಗೊಂಡಿದ್ದು, ಅಂದಿನಿಂದ ಇಲ್ಲಿಯವರೆಗೆ ಒಮ್ಮೆಯೂ ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡಿಲ್ಲ ಎಂದು ತಿಳಿಸಿದ್ದಾರೆ.
ಮಣಿಪುರದ ತಮೆಂಗ್ ಲಾಂಗ್ ಪ್ರದೇಶದಲ್ಲಿ ಎರಡು ದಿನಗಳ ಹಿಂದೆಯಷ್ಟೇ ನಡೆದ ಸಂಘರ್ಷದಲ್ಲಿ 25 ಮಂದಿ ಗಾಯಗೊಂಡಿದ್ದಾರೆ. 2022 ಜನವರಿಯಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಮೋದಿ ನಂತರ ಒಂದು ಬಾರಿಯೂ ಭೇಟಿ ನೀಡಿಲ್ಲ ಎಂದು ಅವರು ವಿವರಿಸಿದ್ದಾರೆ.
ಕಳೆದೆರಡು ವರ್ಷದಲ್ಲಿ ಪ್ರಧಾನಿ ಮೋದಿ 250 ದೇಶದ ವಿವಿಧೆಡೆ ಪ್ರವಾಸ ಕೈಗೊಂಡಿದ್ದರೆ, 44 ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ದೇಶ-ವಿದೇಶ ಸುತ್ತಲು ಸಮಯ ಇರುವ ಮೋದಿಗೆ ಮಣಿಪುರಕ್ಕೆ ಹೋಗಲು ಸಮಯವಿಲ್ಲವೇ ಎಂದು ಖರ್ಗೆ ಕೇಳಿದ್ದಾರೆ.