ರಸ್ತೆ, ಚರಂಡಿ ಬೇಡ ಅಂದ ಮೇಲೆ, ತುಮಕೂರಿನವರೆಗೂ ಮೆಟ್ರೋ ಯಾಕೆ ಬೇಕು ಪರಮೇಶ್ವರ್ ಅವರೇ? SCSP/TSP ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವಂತೆ ಮೆಟ್ರೋ ಕಾಮಗಾರಿ ಹಣವನ್ನೂ ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡು ಬಿಡಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಸ್ತೆ, ಚರಂಡಿ ನಿರ್ಮಾಣದಿಂದ ಜನ ಉದ್ಧಾರ ಆಗ್ತಾರಾ ಎಂದು ಪ್ರಶ್ನಿಸುವ ಸಚಿವರ ನಡೆಯನ್ನು ಟೀಕಿಸಿದ ಅವರು, ಸರ್ಕಾರ ನಡೆಸುವುದು, ಅಭಿವೃದ್ಧಿ ಮಾಡುವುದು ಅಂದರೆ 3 ತಿಂಗಳಿಗೋ, 6 ತಿಂಗಳಿಗೋ ಒಮ್ಮೆ ಗೃಹಲಕ್ಷ್ಮಿ ಹಣ ಅಕೌಂಟಿಗೆ ಹಾಕೋದು, ಬಾಕಿ ಸಮಯದಲ್ಲಿ ರಾಜಕೀಯ ಮಾಡೋದು, ಕುರ್ಚಿಗಾಗಿ ಕಿತ್ತಾಡೋದು ಅಂದುಕೊಂಡಿದ್ದಾರೆ ಕಾಂಗ್ರೆಸ್ ನಾಯಕರು ಎಂದು ಕುಟುಕಿದ್ದಾರೆ.
ರಸ್ತೆ, ಚರಂಡಿ, ಮೂಲಸೌಕರ್ಯ ನಿರ್ಮಾಣದಿಂದ ಬಡವರು ಉದ್ಧಾರ ಆಗಿಲ್ಲ ಅನ್ನೋ ಮನಸ್ಥಿತಿ ಇರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಜನತೆ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ, ಒಟ್ಟಿನಲ್ಲಿ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ರಾಜ್ಯದಲ್ಲಿ ಅಭಿವೃದ್ಧಿ ಅಸಾಧ್ಯ. ಇದಂತೂ ಗ್ಯಾರಂಟಿ ಎಂದು ಬರೆದುಕೊಂಡಿದ್ದಾರೆ.
ರಸ್ತೆ, ಚರಂಡಿ ನಿರ್ಮಾಣದಿಂದ ಜನರು ಉದ್ದಾರ ಆಗುತ್ತಾರಾ ಎಂದು ಎರಡು ದಿನಗಳ ಹಿಂದೆ ಗೃಹಸಚಿವ ಡಾ. ಜಿ. ಪರಮೇಶ್ವರ್ ಪ್ರಶ್ನಿಸಿದ್ದರು. ಯಾರು ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮವನ್ನು ಟೀಕೆ ಮಾಡುತ್ತಾರೋ ಅವರಿಗೆ ಒಂದು ಪ್ರಶ್ನೆ. ಆಯ್ತಪ್ತ ನಾವು ಗ್ಯಾರಂಟಿ ಕೊಡೋದಿಲ್ಲ, ನಾಳೆಯಿಂದ ನಿಲ್ಸಿ ಬಿಡೋಣ.ಆದರೆ ನೀವು ರಸ್ತೆ, ಚರಂಡಿ ಮಾಡುವುದರಿಂದ ಇಲ್ಲವೇ ಕಾರ್ಯಕ್ರಮ ಮಾಡುವುದರಿಂದ ಬಡವರ ಜೀವನ ಏನಾಗುತ್ತದೆ, ಉದ್ಧಾರ ಆಗುತ್ತದಾ ಎಂದು ಪ್ರಶ್ನಿಸಿದ್ದರು.
ಹಾಗಂತ ನಾವು ರಸ್ತೆ ಮಾಡೋದನ್ನು, ಮನೆಗಳನ್ನು ಕಟ್ಟೋದನ್ನು ನಿಲ್ಲಿಸ್ತಿವಾ? ಯಾವ ಕಾರ್ಯಕ್ರಮವನ್ನೂ ನಿಲ್ಲಿಸಿಲ್ಲ. ನಿಧಾನ ಆಗಿರಬಹುದು. ಬಹಳ ಮುಖ್ಯವಾಗಿ ಮನುಷ್ಯನ ಜೀವನ ಸಾವಿರಾರು ವರ್ಷದ ಶೋಷಣೆಗೆ ಒಳಗಾಗಿದ್ದು, ಅದು ಮುಂದುವರಿಯಬಾರದು ಅನ್ನುವುದು ನಮ್ಮೆಲ್ಲರ ಉದ್ದೇಶ. ಅದಕ್ಕಾಗಿ ಗ್ಯಾರಂಟಿ ಕೊಡುತ್ತೇವೆ ಎಂದು ಪರಮೇಶ್ವರ್ ಹೇಳಿದ್ದರು.


