ಮೈಸೂರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಸರಾದ ಎರಡನೇ ದಿನವಾದ ಮಂಗಳವಾರ ಸೂತಕ ಆವರಿಸಿದೆ. ಸೋಮವಾರ ತಡ ರಾತ್ರಿ ಚಾಮುಂಡಿಬೆಟ್ಟದ ಶಿವಾರ್ಚಕ ರಾಜು
ಮೃತಪಟ್ಟಿದ್ದು, ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಅವಕಾಶ ಇಲ್ಲವಾಗಿದೆ. ಸಾರ್ವಜನಿಕರಿಗೆ ಇಂದು ಬೆಳಗ್ಗೆಯಿಂದ ರಾತ್ರಿಯವರೆಗೂ ದೇವಿಯ ದರ್ಶನ ಇಲ್ಲದಂತಾಗಿದೆ.
ಈ ಸೂತಕದ ಕಾರಣ ನವರಾತ್ರಿಯ 2ನೇ ದಿನ ದೇವಿಗೆ ಯಾವುದೇ ಪೂಜಾ ಕಾರ್ಯ ಇಲ್ಲ ಹಾಗೂ ಭಕ್ತರಿಗೆ ಮೂಲ ವಿಗ್ರಹ ದರ್ಶನಕ್ಕೆ ಅವಕಾಶವಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಚಾಮುಂಡಿ ಬೆಟ್ಟದಲ್ಲಿ ಶಿವಾರ್ಚಕರಾಗಿದ್ದ ರಾಜು, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಓಮವಾರ ತಡರಾತ್ರಿ ಹೃದಯಾಘಾತದಿಂದ ಅಸು ನೀಗಿದ್ದಾರೆ. ಬೆಟ್ಟದಲ್ಲಿ ಸೂತಕದ ಕಾರಣ ಚಾಮುಂಡಿದೇವಿಯ ಮೂಲ ವಿಗ್ರಹವಿರುವ ಗರ್ಭ ಗುಡಿಗೆ ಸಂಪೂರ್ಣವಾಗಿ ತೆರೆ ಎಳೆಯಲಾಗಿದೆ. ಮಾಹಿತಿ ತಿಳಿಯದೆ ದೇವಸ್ಥಾನಕ್ಕೆ ಬರುವವರಿಗೆ ಉತ್ಸವಮೂರ್ತಿ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಬೆಟ್ಟಕ್ಕೆ ಭಕ್ತ ಸಾಗರವೇ ಬರುತ್ತಿದ್ದು, ದೇವಿ ದರ್ಶನಕ್ಕೆ ನಿರ್ಬಂಧ ಹಿನ್ನೆಲೆ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ದರ್ಶನ ಪಡೆಯಲು ಬಂದವರು ದೇವಿಯ ದರ್ಶನವಿಲ್ಲದೆ ವಾಪಸ್
ಹೋಗುತ್ತಿದ್ದಾರೆ.
ದೇಗುಲ ಶುಚಿಗೊಳಿಸಿದ ಬಳಿಕ ದೇವಿಗೆ ವಿಶೇಷ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಲಿದೆ. ಅರಮನೆಯಲ್ಲಿ ಎರಡನೇ ದಿನದ ಖಾಸಗಿ ದರ್ಬಾರ್ ನಡೆಯುತ್ತಿದ್ದು, ಪಟ್ಟದ ಆನೆ ಪಟ್ಟದ ಕುದುರೆ ಪಟ್ಟದ ಹಸುಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆಯಾಗಿದೆ. ಅರಮನೆ ಅಂಗಳದಲ್ಲಿ ಪಟ್ಟದ ಆನೆ, ಕುದುರೆ, ಹಸುಗಳು ಒಂದು ಸುತ್ತು ಸುತ್ತಿಕೊಂಡು ಬಂದಿವೆ. ಅರಮನೆ ಅಂಗಳದ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದಿದ್ದು, ಇಂದು ಜೆಕೆ ಮೈದಾನದಲ್ಲಿ ಮಹಿಳಾ ದಸರಾಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದ್ದಾರೆ.