Menu

ಕಿಡಿಗೇಡಿಗಳ ಓಡಿಸಿದ ಗೃಹರಕ್ಷಕಿ ಸರಿಯಾದ ಬಟ್ಟೆ ಹಾಕೆಂದು ಹೇಳಿದ್ದಕ್ಕೆ ಯುವತಿಯಿಂದ ಹಲ್ಲೆ

ಬೆಂಗಳೂರಿನ ರಸ್ತೆಯಲ್ಲಿ ಯುವತಿಯ ಉಡುಪಿನ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಿದ್ದ ಕಿಡಿಗೇಡಿಗಳನ್ನು ಅಲ್ಲಿಂದ ತೆರಳುವಂತೆ ಮಾಡಿ, ಯುವತಿಗೆ ಸಾರ್ವಜನಿಕ ಸ್ಥಳದಲ್ಲಿ ಸರಿಯಾದ ಬಟ್ಟೆ ಹಾಕಿಕೊಳ್ಳುವಂತೆ ಸಲಹೆ ನೀಡಿದ ಗೃಹರಕ್ಷಕ ದಳದ ಲಕ್ಷ್ಮೀ ನರಸಮ್ಮ ಮೇಲೆ ಯುವತಿ ಹಲ್ಲೆ ಮಾಡಿದ್ದು, ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಮಹದೇವಪುರ ನಾರಾಯಣಪುರದ ದಾಮಿನಿ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಗೆ ಸೇರಿದ ಗೃಹರಕ್ಷಕ ದಳದ ಲಕ್ಷ್ಮಿ ನರಸಮ್ಮ ಮೇಲೆ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ.

ಕೆಆರ್ ಪುರಂ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ದಾಮಿನಿಯ ಉಡುಪಿನ ಬಗ್ಗೆ ಕೆಲವರು ಅಶ್ಲೀಲವಾಗಿ ಮಾತನಾಡಿದ್ದರು. ಈ ವೇಳೆ ಬಂದ ಗೃಹರಕ್ಷಕ ದಳದ ಲಕ್ಷ್ಮಿ ನರಸಮ್ಮ ದುಷ್ಕರ್ಮಿಗಳನ್ನು ಅಲ್ಲಿಂದ ಓಡಿಸಿ ಹುಡುಗಿಗೆ ಬಟ್ಟೆಯ ಬಗ್ಗೆ ಸಲಹೆ ನೀಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಸರಿಯಾಗಿರುವ ಬಟ್ಟೆ ಧರಿಸಿ. ಇಲ್ಲಿ ಹೆಚ್ಚು ಜನ ಓಡಾಡುತ್ತಾರೆ. ಇಂತಹ ವ್ಯಕ್ತಿಗಳು ಕಾಯುತ್ತಿರುತ್ತಾರೆ, ಎಚ್ಚರದಿಂದ ಇರಿ ಎಂದು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಯುವತಿ ಲಕ್ಷ್ಮಿ ನರಸಮ್ಮ ಅವರ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಹಲ್ಲೆಯಿಂದ ನರಸಮ್ಮ ಅವರ ಮುಖ ಮತ್ತು ಮೂಗಿನಿಂದ ರಕ್ತ ಬಂದಿದೆ. ಪೊಲೀಸರು ಸ್ಥಳಕ್ಕೆ ಬಂದು ದಾಮಿನಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೋರ್ಟ್‌ ಆಕೆಯನ್ನು ಜೈಲಿಗೆ ಕಳಿಸಿದೆ. ದಾಮಿನಿ ಮಾಲ್ಡೀವ್ಸ್‌ನಲ್ಲಿ ಶಾಲೆಯಲ್ಲಿ ಓದಿದ್ದು, ಬೆಂಗಳೂರಿನ ಖಾಸಗಿ ಕಾಲೇಜಿನಿಂದ ಬಿಬಿಎಂ ಪದವಿ ಪಡೆದಿದ್ದಾಳೆ ಎಂದು ಹೇಳಲಾಗಿದೆ.

Related Posts

Leave a Reply

Your email address will not be published. Required fields are marked *