ಇಂದು ಎಲ್ಲೆಡೆ ಪ್ರಮುಖ ಸಂದೇಶ ವಿನಿಮಯ ವೇದಿಕೆಯಾದ ವಾಟ್ಸಾಪ್ ತೀವ್ರ ಭದ್ರತಾ ಅಪಾಯವನ್ನು ಎದುರಿಸುತ್ತಿದೆ. ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಸ್ಪಂದನಾ ತಂಡ (ಸಿಇಆರ್ಟಿ-ಇನ್) ವಾಟ್ಸಾಪ್ ಡೆಸ್ಕ್ಟಾಪ್ ಆಪ್ ಬಳಕೆದಾರರಿಗೆ ಗಂಭೀರ ಅಪಾಯದ ಎಚ್ಚರಿಕೆ ನೀಡಿದೆ.
ವಿಂಡೋಸ್ ಆಧಾರಿತ ಕಂಪ್ಯೂಟರ್‌ಗಳಲ್ಲಿ ಬಳಸಲಾಗುವ ವಾಟ್ಸಾಪ್ ಡೆಸ್ಕ್ಟಾಪ್ ಆಪ್‌ಗಳಿಗೆ ಸಂಬಂಧಿಸಿದೆ. ಆವೃತ್ತಿ 2.2450.6ಕ್ಕಿಂತ ಹಿಂದಿನ ಆವೃತ್ತಿಗಳಲ್ಲಿ ಗಂಭೀರ ಸೈಬರ್ ಭದ್ರತಾ ದೋಷ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಇಆರ್ಟಿ-ಇನ್ ಪ್ರಕಾರ, ಈ ದೋಷವು ಒIಒಇ ಪ್ರಕಾರ ಮತ್ತು ಫೈಲ್ ಎಕ್ಸ್ಟೆನ್ಶನ್ ನಡುವಿನ ವ್ಯತ್ಯಯದಿಂದ ಉಂಟಾಗಿದೆ. ದುಷ್ಕರ್ಮಿಗಳು ವಿಶೇಷವಾಗಿ ರೂಪಿಸಿದ ಅಪಾಯಕಾರಿ ಫೈಲ್‌ಗಳನ್ನು ಕಳುಹಿಸಿ, ಬಳಕೆದಾರರು ಅದನ್ನು ತೆರೆದಾಗ ದುರುದ್ದೇಶಪೂರಿತ ಕೋಡ್ ಕಾರ್ಯ ಮಾಡಬಹುದಾಗಿದೆ. ಈ ದಾಳಿ ಯಿಂದ ಬಳಕೆದಾರರ ವೈಯಕ್ತಿಕ ಮಾಹಿತಿಗೆ ಅಪಾಯ ಉಂಟಾಗಬಹುದು. ಹೀಗಾಗಿ, ವಾಟ್ಸಾಪ್ ಡೆಸ್ಕ್ಟಾಪ್ ಆಪ್ ಬಳಕೆದಾರರು ತಕ್ಷಣ ತಮ್ಮ ಆಪ್ ಅನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಬೇಕು ಎಂದು ಸೂಚಿಸಲಾಗಿದೆ.
ವಾಟ್ಸಾಪ್ ತನ್ನ ಭದ್ರತಾ ಸಲಹೆ ಪತ್ರಿಕೆಯಲ್ಲಿ ಈ ಶಿಫಾರಸು ಮಾಡಿದ್ದು, ಬಳಕೆದಾರರು ಈ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದೆ. ಭದ್ರತಾ ತಜ್ಞರು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಸಲಹೆ ನೀಡಿದ್ದಾರೆ. ನವೀಕರಣ ಮಾಡದಿದ್ದರೆ ಭದ್ರತಾ ಆತಂಕ ಹೆಚ್ಚಾಗಬಹುದು. ಭಾರತದಲ್ಲಿ 400 ಮಿಲಿಯನ್‌ಗೂ ಅಧಿಕ ಸಕ್ರಿಯ ಬಳಕೆದಾರರಿದ್ದಾರೆ ಎಂಬುದು ಗಮನಾರ್ಹ.