Menu

ಕಲ್ಯಾಣ ಕರ್ನಾಟಕ ಜನರಿಗೆ ಬೇಕಿರುವುದು ವೈಮಾನಿಕ ಸಮೀಕ್ಷೆಯ ಫೋಟೋ ಶೂಟ್ ಅಲ್ಲ, ತುರ್ತು ಪರಿಹಾರ: ಆರ್‌ ಅಶೋಕ

ಸಿಎಂ ಸಿದ್ದರಾಮಯ್ಯ ಅವರೇ ಗಾಢ ನಿದ್ದೆಯಲ್ಲಿದ್ದ ನಿಮ್ಮ ಸರ್ಕಾರಕ್ಕೆ, ಕಲ್ಯಾಣ ಕರ್ನಾಟಕದ ಪ್ರವಾಹ ಪರಿಸ್ಥಿತಿಯ ಬಗ್ಗೆ ಈಗಲಾದರೂ ನೆನಪಾಯಿತಲ್ಲ ಅದೇ ದೊಡ್ಡ ಪುಣ್ಯ. ಆದರೆ ಪ್ರವಾಹದಿಂದ ತತ್ತರಿಸಿರುವ ಕಲ್ಯಾಣ ಕರ್ನಾಟಕದ ಜನರಿಗೆ ಬೇಕಿರುವುದು ನಿಮ್ಮ ವೈಮಾನಿಕ ಸಮೀಕ್ಷೆಯ “ಫೋಟೋ ಶೂಟ್” ಅಲ್ಲ, ತುರ್ತು ಪರಿಹಾರ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ್‌  ಟೀಕಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್‌ ಮಾಡಿರುವ ಅವರು, ಕಲ್ಯಾಣ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳ ನಿಮ್ಮ ವೈಮಾನಿಕ ಸಮೀಕ್ಷೆ ಮತ್ತೊಂದು ‘ಕಾಟಾಚಾರದ ಸಮೀಕ್ಷೆ’ ಆಗಬಾರದು ಎನ್ನುವುದು ಅಲ್ಲಿನ ಜನರ ನಿರೀಕ್ಷೆ.
ಈ ನಿಟ್ಟಿನಲ್ಲಿ ನಿಮ್ಮ ವಿಮಾನ ಟೇಕಾಫ್ ಆಗುವ ಮುನ್ನ, ಪರಿಹಾರ ಕಾರ್ಯ ಟೇಕಾಫ್ ಆಗಲಿ ಎನ್ನುವ ಉದ್ದೇಶದಿಂದ ನಿಮ್ಮ ಸರ್ಕಾರಕ್ಕೆ ನನ್ನ ಆಗ್ರಹಗಳು ಹೀಗಿವೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷಗಳಂತೆ ‘ಸಾಫ್ಟ್‌ವೇರ್ ಲೋಪ’, ‘ಸರ್ವರ್ ಡೌನ್’, ಇನ್ನೊಂದು ಮತ್ತೊಂದು ಕುಂಟು ನೆಪ ಹೇಳುವುದನ್ನು ಬಿಟ್ಟು, ಕಾಳಜಿ ಕೇಂದ್ರಗಳಲ್ಲಿರುವ ಪ್ರತಿ ಸಂತ್ರಸ್ತ ಕುಟುಂಬಕ್ಕೆ ಈ ಕೂಡಲೇ ₹50,000 ತುರ್ತು ಪರಿಹಾರ ಹಣ ಬಿಡುಗಡೆ ಮಾಡಿ. ಪರಿಹಾರ ವಿಳಂಬ ಮಾಡಿ ನೆರೆ ಸಂತ್ರಸ್ತರು ದೀಪಾವಳಿಯನ್ನು ಕತ್ತಲೆಯಲ್ಲಿ ಕಳೆಯುವಂತೆ ಮಾಡಬೇಡಿ.

ನೆರೆ ಕಡಿಮೆಯಾದ ಕೂಡಲೇ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಅಧಿಕಾರಿಗಳ ತಂಡ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ, ಬೆಳೆ, ಆಸ್ತಿಪಾಸ್ತಿ, ಜಾನುವಾರು ನಷ್ಟದ ಸಮಗ್ರ ಸಮೀಕ್ಷೆ ನಡೆಸಬೇಕು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ ಅಂದಿನ ಸಿಎಂ ಯಡಿಯೂರಪ್ಪನವರು ಸ್ಥಳದಲ್ಲೇ ಚೆಕ್ ವಿತರಣೆ ಮಾಡಿದ್ದರು. ಕಾಂಗ್ರೆಸ್ ಸರ್ಕಾರವೂ ಅದೇ ರೀತಿ ಮಾಡಿ ಸ್ಥಳದಲ್ಲೇ ಚೆಕ್ ವಿತರಣೆ ಮಾಡಬೇಕು.

ಪ್ರವಾಹ ಇಳಿದ ಮೇಲೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿರುತ್ತದೆ. ಆದ್ದರಿಂದ ಆರೋಗ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕು. ಮೊಬೈಲ್ ಆರೋಗ್ಯ ವ್ಯಾನ್‌ಗಳನ್ನು ಪ್ರತಿ ಗ್ರಾಮಕ್ಕೆ ಕಳುಹಿಸುವ ಮೂಲಕ ಅರಿವು ಮೂಡಿಸಬೇಕು, ಅಗತ್ಯ ಔಷಧಿಗಳ ಬೃಹತ್ ಶೇಖರಣೆ ಮಾಡಿಕೊಳ್ಳುವ ಜೊತೆಗೆ ಸಾಂಕ್ರಾಮಿಕ ರೋಗಗಳು ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

ಕಲ್ಯಾಣ ಕರ್ನಾಟಕದ ಜನ ಸಂಕಷ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಈ ಭಾಗದ ಜನರ ನೋವಿಗೆ ಸ್ಪಂದಿಸಬೇಕು. ಕಲ್ಯಾಣ ಕರ್ನಾಟಕಕ್ಕೆ 10,000 ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು. ಘೋಷಣೆ ಮಾಡುವುದು ಮಾತ್ರವಲ್ಲ ಅದನ್ನು ಬಿಡುಗಡೆ ಮಾಡಿ ಪುನರ್ನಿರ್ಮಾಣ, ಪುನರ್ವಸತಿ ಕೆಲಸಗಳಿಗೆ ಬಳಸಿಕೊಳ್ಳಬೇಕು.

ಕಳೆದ ಎರಡು ವರ್ಷಗಳಲ್ಲಿ ನೆರೆ, ಬರ ಪರಿಸ್ಥಿತಿಗಳು ಉಂಟಾದಾಗ ಪರಿಹಾರ ವಿತರಣೆಯಲ್ಲಿ ಹಲವಾರು ಸಂತ್ರಸ್ತರು ಬಿಟ್ಟುಹೋಗಿರುವ, ಸಂತ್ರಸ್ತರು ಪರಿಹಾರಕ್ಕಾಗಿ ವರ್ಷಗಟ್ಟಲೆ ಕಚೇರಿಗಳಿಗೆ ಅಲೆದಾಟ ನಡೆಸಿರುವ ಅನೇಕ ಉದಾಹರಣೆಗಳು ಇವೆ. ಈ ಬಾರಿಯಾದರೂ ಯಾರೂ ಪರಿಹಾರದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು. ಅರ್ಹ ಸಂತ್ರಸ್ತರಿಗೆ ಪರಿಹಾರ ತಲುಪಿದ ಬಗ್ಗೆ ಸಂಪೂರ್ಣ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗಬೇಕು ಪರಿಹಾರ ಕಾರ್ಯಗಳಲ್ಲಿ ಯಾವುದೇ ರಾಜಕೀಯ ದುರುಪಯೋಗ, ಭ್ರಷ್ಟಾಚಾರ ಆಗದಂತೆ ಎಚ್ಚರವಹಿಸಬೇಕು.

ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ವೈಮಾನಿಕ ಸಮೀಕ್ಷೆಯ ‘ಫ್ಲೈಟ್ ಟೇಕ್ ಆಫ್’ ಆಗುವ ಮುನ್ನ, ನಿಮ್ಮ ಪರಿಹಾರ ಕಾರ್ಯ ‘ಟೇಕ್ ಆಫ್’ ಆಗಲಿ. ಇದೇ ಉತ್ತರ ಕರ್ನಾಟಕದ ಜನರ ಆಗ್ರಹ ಎಂದು ಅಶೋಕ್‌ ಬರೆದುಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *