Menu

ಗಾಂಧಿ ಹೆಸರನ್ನು ಯೋಜನೆಯಿಂದ ತೆಗೆದ ಮೇಲೆ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗೆ ಡಿಕೆ ಶಿವಕುಮಾರ್‌ ಪ್ರಶ್ನೆ

“ಗಾಂಧಿ ಹೆಸರನ್ನು ಯೋಜನೆಯಿಂದ ತೆಗೆದ ಮೇಲೆ ನಿಮಗೆ ಯಾವ ನೈತಿಕತೆ ಇದೆ, ಬಿಜೆಪಿ ನಾಯಕರು ಗಾಂಧೀಜಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ತಮ್ಮ ಕಚೇರಿಗಳಲ್ಲಿ ಗಾಂಧೀಜಿ ಅವರ ಫೋಟೋ ಇಟ್ಟುಕೊಳ್ಳುವ ಯೋಗ್ಯತೆ ಕೂಡ ಅವರು ಉಳಿಸಿಕೊಂಡಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹರಿಹಾಯ್ದಿದ್ದಾರೆ.

ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜತೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಮಾತನಾಡಿದರು. ಬಿಜೆಪಿ ನಾಯಕರು  ಮಹಾತ್ಮಾ ಗಾಂಧಿ  ಪ್ರತಿಮೆ ಮುಂದೆ ಕೂತು ಹೋರಾಟ ಮಾಡುವ ಹಕ್ಕನ್ನು ಕಳೆದುಕೊಂಡಿ ದ್ದಾರೆ. ಮಹಾತ್ಮಾ ಗಾಂಧಿ ಫೋಟೋಗಳನ್ನು ತಮ್ಮ ಕಚೇರಿಗಳಲ್ಲಿ ಹಾಕಿಕೊಳ್ಳುವ ಅರ್ಹತೆ ಕಳೆದುಕೊಂಡಿದ್ದಾರೆ. ಅವರ ಫೋಟೋ ಹಾಕಿಕೊಳ್ಳುವ ಯೋಗ್ಯತೆ ನಿಮಗಿಲ್ಲ. ಅವರ ಹೆಸರನ್ನು ಯೋಜನೆಯಿಂದ ತೆಗೆದ ಮೇಲೆ ನಿಮಗೆ ಯಾವ ನೈತಿಕತೆ ಇದೆ?  ನಿಮ್ಮ ಬಳಿ ಇರುವ ಮಹಾತ್ಮಾ ಗಾಂಧೀಜಿ ಅವರ ಫೋಟೋಗಳನ್ನು ನಮಗೆ ಕೊಟ್ಟುಬಿಡಿ, ನಾವು ಅವುಗಳನ್ನು  ಗಾಂಧಿಜಿಯನ್ನು ಗೌರವಿಸುವ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ” ಎಂದರು.

“ರಾಜ್ಯದ ಕೂಲಿ ಕಾರ್ಮಿಕರ ಬದುಕು ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮಾರಕವಾಗಿರುವ ವಿಬಿ ಜಿ ರಾಮ್ ಜಿ ಮಸೂದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವವರೆಗೂ ಪಕ್ಷತೀತವಾಗಿ ಆಂದೋಲನ ರೂಪಿಸಲಾಗುವುದು. ಈ ಮಸೂದೆ ವಿರುದ್ಧದ ಹೋರಾಟ ಕೇವಲ ಪಕ್ಷ ಅಥವಾ ಸರ್ಕಾರಕ್ಕೆ ಮಾತ್ರ ಸೀಮಿತವಲ್ಲ. ಪ್ರತಿ ಪಂಚಾಯ್ತಿಯಲ್ಲಿ ಪ್ರತಿಯೊಬ್ಬರನ್ನು ಆಹ್ವಾನ ನೀಡಿ ನಮ್ಮ ನಾಯಕರು ಸೇರಿ ಸಮಾವೇಶ ಹಾಗೂ ಗ್ರಾಮ ಸಭೆ ನಡೆಸುತ್ತೇವೆ. ಅಲ್ಲಿ ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ನಂತರ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರ ಹೇಗೆ ಕೃಷಿ ಕರಾಳ ಕಾಯ್ದೆ ಹಿಂಪಡೆಯಿತೋ ಅದೇ ರೀತಿ ಈ ಮಸೂದೆಯನ್ನು ಹಿಂಪಡೆಯುವಂತೆ ಮಾಡಲು ಆಂದೋಲನ ಮಾಡುತ್ತೇವೆ, ಹೋರಾಟ ರೂಪಿಸುತ್ತೇವೆ ಎಂದು ಹೇಳಿದರು.

20 ವರ್ಷಗಳಿಂದ ಹಳ್ಳಿ ಜನ ಬೆವರು ಸುರಿಸಿ ತಮ್ಮ ಹಳ್ಳಿಗಳ ಅಭಿವೃದ್ಧಿ ಮಾಡುವ ಪ್ರಯತ್ನಕ್ಕೆ ಅಂತ್ಯ ಹಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಹೊಸ ಮಸೂದೆ  ಕರಾವಳಿ ಭಾಗದ ಮೀನುಗಾರರಿಗೂ ಅನ್ಯಾಯವಾಗಲಿದೆ. ಮನರೇಗಾ ಯೋಜನೆಯಲ್ಲಿ ಮೀನುಗಾರರಿಗೂ ಕೂಲಿ ಪಡೆಯುವ ಅವಕಾಶವಿತ್ತು. ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆಯನ್ನು ಸರಿ ಎಂದು ಸ್ವಾಗತಿಸುತ್ತಿಲ್ಲ, ತಪ್ಪು ಎಂದು ವಿರೋಧ ಮಾಡುತ್ತಿಲ್ಲ. ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ ಯಾಕೆ ಎಂದು ಪ್ರಶ್ನಿಸಿದರು.

“ಮನರೇಗಾ ಪ್ರತಿ ಕೂಲಿ ಕಾರ್ಮಿಕರ ಕುಟುಂಬಕ್ಕೆ ಶಕ್ತಿ ತುಂಬಿತ್ತು. ಇಂದಿರಾ ಆವಾಸ್, ರಾಜ್ಯ ಹಾಗೂ ಕೇಂದ್ರ ವಸತಿ ಯೋಜನೆ ಸೇರಿದಂತೆ ವಸತಿ ಯೋಜನೆಗಳಲ್ಲಿ ತಾನು ತನ್ನ ಮನೆ ಕಟ್ಟಿಕೊಳ್ಳಲು ಮನರೇಗಾ ಯೋಜನೆ ಕೂಲಿ ನೀಡುತ್ತಿತ್ತು. ರೈತರು ತಮ್ಮದೇ ಜಮೀನನ್ನು ಮಟ್ಟು ಮಾಡಿಕೊಳ್ಳಲು, ಇಂಗು ಗುಂಡಿ ನಿರ್ಮಿಸಲು, ವಿವಿಧ ಬೆಳೆ ಹಾಕಲು ಮನರೇಗಾ ಯೋಜನೆಯಲ್ಲಿ ಕೂಲಿ ಪಡೆದುಕೊಳ್ಳಬಹುದಾಗಿತ್ತು. ಇದು ತೋಟಗಾರಿಗೆ, ರೇಷ್ಮೆ ಮೂಲಕ ಜೀವನೋಪಾಯಕ್ಕೆ ದಾರಿ ಮಾಡಿಕೊಳ್ಳಲಾಗಿತ್ತು. ಈಗ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಇಂದಿರಾ ಅವಾಸ್, ರಾಜ್ಯ ಹಾಗೂ ಕೇಂದ್ರ ಅವಾಸ್ ಯೋಜನೆಗಳ ಮನೆ ನಿರ್ಮಾಣಕ್ಕೆ ನೀಡಲಾಗುತ್ತಿದ್ದ ಕೂಲಿಯನ್ನು ತೆಗೆದುಹಾಕಲಾಗಿದೆ. ಕೇವಲ ಪ್ರಧಾನಮಂತ್ರಿ ಅವಾಸ್ ಯೋಜನೆ ಮಾತ್ರ ಅವಕಾಶ ನೀಡಿದ್ದಾರೆ” ಎಂದು ಕಿಡಿ ಕಾರಿದರು.

ದನದ ಕೊಟ್ಟಿಗೆ, ಹಂದಿ, ಕುರಿ ಶೆಡ್ ಸೇರಿದಂತೆ ಮೂಲಸೌಕರ್ಯ ನಿರ್ಮಾಣಕ್ಕೆ ಮನರೇಗಾದಲ್ಲಿ ಯೋಜನೆ ರೂಪಿಸಲಾಗಿತ್ತು. ಮಾಧ್ಯಮಗಳಿಗೆ ವಾಹನ ವ್ಯವಸ್ಥೆ ಮಾಡಿಕೊಡುತ್ತೇನೆ.  ಕನಕಪುರ ತಾಲೂಕಿಗೆ ಹೋಗಿ ನೋಡಿ. ಇಡೀ ದೇಶದಲ್ಲಿ ಅತಿ ಹೆಚ್ಚು ನರೇಗಾ ಯೋಜನೆ ಅನುದಾನ ಬಳಸಿದ ತಾಲೂಕು. ಈ ಯೋಜನೆಯಲ್ಲಿ ವಂಚನೆ  ಆಗಿದೆ ಎಂದು ಕೇಂದ್ರದಿಂದ ಹತ್ತು ತಂಡಗಳನ್ನು ಕಳುಹಿಸಿ ತನಿಖೆ ಮಾಡಿಸಿದ್ದರು. ನಾವು ಅರ್ಕಾವತಿ ನದಿಗೆ ಚೆಕ್ ಡ್ಯಾಂ ನಿರ್ಮಿಸಿದ್ದೇವೆ. 50 ಸಾವಿರ ದನದ ಕೊಟ್ಟಿಗೆ ಕಟ್ಟಿಸಿದ್ದೇವೆ. ಪಂಚಾಯ್ತಿ ಕಟ್ಟಡ, ಉದ್ಯಾನವನ, ಆಟದ ಮೈದಾನ ನಿರ್ಮಿಸಿದ್ದೇವೆ. ಇದೆಲ್ಲವನ್ನು ನೋಡಿ, ತಮ್ಮ ಮತಬ್ಯಾಂಕಿಗೆ ಧಕ್ಕೆಯಾಗುತ್ತದೆ. ಎಂದು ಪಂಚಾಯ್ತಿಗಳು ಹಾಗೂ ಪಂಚಾಯ್ತಿ ಸದಸ್ಯರಿಗೆ ಕೊಟ್ಟಂತಹ ಅಧಿಕಾರವನ್ನು ಕೇಂದ್ರ ಸರ್ಕಾರ ಕಸಿದುಕೊಂಡಿದೆ ಎಂದು ಹರಿಹಾಯ್ದರು.

ಹಾವೇರಿ ಜಿಲ್ಲೆಗೆ ಹೋಗಿ ನೋಡಿ, ಪ್ರತಿ ತಾಲೂಕಿನಲ್ಲಿ 5-10 ಸಾವಿರ ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಈ ಯೋಜನೆ ಇಡೀ ದೇಶದ ಗ್ರಾಮೀಣ ಅಭಿವೃದ್ಧಿಗೆ ಮಾರಕವಾಗಿದೆ. ಗ್ರಾಮೀಣ ಪ್ರದೇಶದ ಬದುಕಿಗೆ ಮಾರಕವಾದ ಮತ್ತೊಂದು ಮಸೂದೆ ಬೇರೋಂದಿಲ್ಲ. ರಾಜೀವ್ ಗಾಂಧಿ ಅವರು ಪಂಚಾಯ್ತಿಗಳಿಗೆ ಶಕ್ತಿ ತುಂಬಲು ಸಂವಿಧಾನಕ್ಕೆ 73, 74ನೇ ತಿದ್ದುಪಡಿ ತರುವಾಗ ನಮ್ಮ ರಾಜ್ಯಕ್ಕೆ ಬಂದು ವಿಚಾರ ಸಂಕೀರ್ಣ ನಡೆಸಿದ್ದರು. ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿ ದ್ದಾಗ ನಮ್ಮಲ್ಲಿ ಬೇಲೂರು ನಿರ್ಣಯ ಕೈಗೊಳ್ಳಲಾಯಿತು. 25 ಇಲಾಖೆಗಳಲ್ಲಿ ಪಂಚಾಯ್ತಿಗಳಿಗೆ ಶಕ್ತಿ ತುಂಬಲು ತೀರ್ಮಾನ ಮಾಡಿದೆವು. ಅಂಗನವಾಡಿ, ಗ್ರಾಮ ಪಂಚಾಯ್ತಿ, ಸ್ವಸಾಹಯ ಗುಂಪು, ಸೈಕ್ಲೋನ್ ಶೆಟ್ಲರ್, ಗೋದಾಮು, ಸಮುದಾಯ ಭವನ, ಕಟ್ಟಡ ನಿರ್ಮಾಣಕ್ಕೆ, ಚರಂಡಿ ನಿರ್ಮಾಣ, ಜಮೀನು ರಸ್ತೆ ನಿರ್ಮಾಣ ಮಾಡಲು ಅವಕಾಶವಿತ್ತು. ಈ ಹೊಸ ಮಸೂದೆಯಿಂದ ಇದೆಲ್ಲದಕ್ಕೂ ಅಂತ್ಯ ಹಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ರೈತರು ಅಥವಾ ಕೂಲಿ ಕಾರ್ಮಿಕರು ತಮ್ಮ ಜಮೀನಿನಲ್ಲಿ ಮಾಡುವ ಕಾಮಗಾರಿಗೆ ಅರ್ಜಿ ಹಾಕಿ ಅನುದಾನ ಪಡೆಯಬಹುದಾಗಿತ್ತು, ಈಗ ಇದನ್ನು ತಪ್ಪಿಸಿ ಈ ಯೋಜನೆ ಕಾಮಗಾರಿಗಳನ್ನು ಗುತ್ತಿಗೆದಾರರ ಕೈಗೆ ಕೊಟ್ಟಿದ್ದಾರೆ. ಎಲ್ಲಿ ಯಾವ ಕೆಲಸ ಆಗಬೇಕು ಎಂಬುದನ್ನು ಕೇಂದ್ರ ಸರ್ಕಾರದಿಂದ ನಿರ್ದೇಶನದ ಮೇರೆಗೆ ನಿರ್ಧಾರ ಮಾಡಲಾಗುವುದು. ಈ ಯೋಜನೆ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಬಿಜೆಪಿ ಆಡಳಿತ ಯಾವ ರಾಜ್ಯಗಳಲ್ಲೂ ಯಶಸ್ವಿಯಾಗುವುದಿಲ್ಲ. ಕೇಂದ್ರದ ಸಚಿವರು ಹಾಗೂ ರಾಜ್ಯದಿಂದ ಕೇಂದ್ರ ಪ್ರತಿನಿಧಿಸುತ್ತಿರುವ ಯಾವುದೇ ಸಚಿವರು ಇದನ್ನು ಸ್ವಾಗತಿಸಿಯೂ ಇಲ್ಲ. ವಿರೋಧಿಸುತ್ತಲೂ ಇಲ್ಲ, ಯಾಕೆ  ಎಂದು ಪ್ರಶ್ನಿಸಿದರು.

Related Posts

Leave a Reply

Your email address will not be published. Required fields are marked *