ಟಾಟಾ ಸಮೂಹದ ಸಾಫ್ಟವೇರ್ ಕಂಪನಿ ಟಿ.ಸಿ.ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವೀಸ್ ) ದಿಢೀರ್ ಎಂದು ತನ್ನ 12000 ಉದ್ಯೋ ಗಿಗಳಿಗೆ ಪಿಂಕ್ ಸ್ಲಿಪ್ (pink chit) ನೀಡಿ ಮನೆಗೆ ಕಳಿಸಲು ಮುಂದಾಗಿದೆ ಎನ್ನುವ ಮಾಧ್ಯಮ ವರದಿ ಟೆಕ್ ವಲಯದಲ್ಲಿ ಸಂಚಲನ ಮೂಡಿಸಿದೆ ಮತ್ತು ನಡುಕ ಹುಟ್ಟಿಸಿದೆ.
ಈ ಕಂಪನಿಯಲ್ಲಿ 6.75 ಲಕ್ಷ ಉದ್ಯೋಗಿಗಳು ಇದ್ದು,ಸುಮಾರು ಶೇ. 2 ರಷ್ಟು ಉದ್ಯೋಗಿಗಳಿಗೆ ಮನೆ ಬಸ್ಸನ್ನು ಹತ್ತಿಸುತ್ತಿದೆ.ಕಂಪನಿಗಳು ಉದ್ಯೋಗಿಗಳ ಸಂಖ್ಯೆಯನ್ನು ಈ ರೀತಿ ಕಡಿಮೆ ಮಾಡುವಾಗ ಸಾಮಾನ್ಯವಾಗಿ ಕೆಳಹಂತದ ಉದ್ಯೋಗಿಗಳನ್ನು ಟಾರ್ಗೆಟ್ ಮಾಡುತ್ತಾರೆ.ಅದರೆ,ಈ ಬಾರಿ ಕೆಳಹಂತದ ಉದ್ಯೋಗಿಗಳೊಡನೆ ಮದ್ಯಮ ಮತ್ತು ಉನ್ನತದರ್ಜೆಯ ಅಧಿಕಾರಿಗಳನ್ನೂ ಕೈಬಿಡುತ್ತಿರುವದು ವಿಶೇಷ ಎನ್ನುವ ಮಾತು ಟೆಕ್‌ವಲಯ ದಲ್ಲಿ ಕೇಳುತ್ತಿದೆ.ಇದು ಕೃತ್ರಿಮ ಬುದ್ದಿಮತ್ತೆ ( Artificial Inteligence-AI) ಮತ್ತು ಅಟೋಮೇಷನ್ ಪರಿಣಾಮ ಎಂದು ಕೆಲವು ವಿಶ್ಲೇಷಕರು ಭಾವಿಸುತ್ತಿದ್ದಾರೆ. ಈ ಕಂಪನಿ ಕ್ರಮೇಣ ಅಟೊಮೇಷನ್ ದಾರಿ ಹಿಡಿಯುವುದರ ಸುಳಿವು ಎನ್ನಲಾಗುತ್ತದೆ.
ಮನೆ ಗೆ ಕಳಿಸುವ ಉದ್ಯೋಗಿಗಳಿಗೆ ಸಮಾಧಾನಕರ ಬಿಡುಗಡೆಯ ಪರಿಹಾರ, ವಿಮೆ ಮುಂದುವರಿಕೆ, ಮತ್ತು ಉದ್ಯೋಗ ಹುಡುಕಲು ಸಹಾಯ ನೀಡಲಾಗುತ್ತದೆ ಎನ್ನುವ ಸಮಾಧಾನವನ್ನು ಮತ್ತು ಅಭಯ ಹಸ್ತವನ್ನು ಕಂಪನಿ ನೀಡಿದೆಯಂತೆ.ಅನುಭವಿಗಳು ,ಸಾಫ್ಟವೇರ್ ಕ್ಷೇತ್ರದಲ್ಲಿ ಮುಂದಿನ ಬೆಳವಣಿಗೆಯ ಬಗೆಗೆ, ತಿರುವುಗಳ ನಿಟ್ಟಿನಲ್ಲಿ ಸುಳಿವು ಹೊಂದಿದವರು,ಇದು ಅರಂಭವಷ್ಟೇ “ಮುಂದೈತೆ ಮಾರಿ ಹಬ್ಬ”ಎಂದು ಎಚ್ಚರಿಸುತ್ತಿದ್ದಾರೆ.ಈ ಬೆಳವಣಿಗೆಯನ್ನು ಕಂಪನಿಯು ಲಘುವಾಗಿ ಪರಿಗಣಿಸಿದ್ದು,ಇದು ಅಂತರಿಕ ಪುನರ್ವ್ಯವಸ್ಥೆಯ ಭಾಗ ಮತ್ತು ಭವಿಷ್ಯದ ದಿನಗಳಲ್ಲಿ ಕೃತಕ ಬುದ್ದಿ ಮತ್ತೆಯನ್ನುಅಳವಡಿಸಿಕೊಳ್ಳಲು ಹೆಚ್ಚು ಜನರನ್ನು ನೇಮಕಾತಿ ಮಾಡಲಾಗುತ್ತದೆ ಎನ್ನುತ್ತಿದೆಯಂತೆ. ಈ ಹೇಳಿಕೆಯನ್ನು ಟೆಕ್ಕಿಗಳು ಮುಖಬೆಲೆಯಲ್ಲಿ ಸ್ವೀಕರಿಸುತ್ತಿಲ್ಲ.ಮನೆಗೆ ಕಳಿಸುವವರಿಗೆ ನೀಡುವ ಪರಿಹಾರ ಮತ್ತು ಇನ್ನಿತರ ಬಿಡುಗಡೆಯ ಸೌಲಭ್ಯಗಳು ಉಧ್ಯೋಗಕ್ಕೆ ಸಾಟಿಯಾಗಬಹುದೇ ಎನ್ನುವುದುಮಿ ಲಿಯನ್ ಡಾಲರ್ ಪ್ರಶ್ನೆ. ಇದಕ್ಕೂ ಮಿಗಿಲಾಗಿ ತನ್ನ ಉನ್ನತ ಅಧಿಕಾರಿಗಳಿಗೆ ಕೋಟಿ -ಕೋಟಿಯಲ್ಲಿ ಸಂಬಳ ಸೌಲಭ್ಯನೀಡುವ ಟೆಕ್ ಕಂಪನಿಗಳು, ವೆಚ್ಚ ಕಡಿತ ಹೆಸರಿಲ್ಲಿ ಸಿಬ್ಬಂದಿಗಳ ಬದುಕಿಗೆ ಕೊಳ್ಳಿ ಇಡಬಹುದೇ ಎನ್ನುವ ಟೀಕೆ ಟೆಕ್‌ವಲ ಯದಲ್ಲಿ ಬರುತ್ತಿದೆ.
ವೆಚ್ಚ ನಿಯಂತ್ರಿಸುವ ಇಂಥಹ ಕ್ರಮಗಳು ಒಂದು ರೀತಿಯಲ್ಲಿ ಸಮೂಹ ಸನ್ನಿಯಂತೆ. “ಈ ಮನೆ ಕೋಳಿ ಕೂಗಿದರೆ, ಪಕ್ಕದ ಗಲ್ಲಿಯ ಕೋಳಿಯೂ ಕೂಗುತ್ತದೆ” ಎನ್ನುವಂತೆ ಎಲ್ಲಾ ಟೆಕ್ ಕಂಪನಿಗಳು ಇದೇ ಮಾದರಿಯನ್ನು ಅನುಸರಿಸಿದರೆ ಎನ್ನುವ ಪ್ರಶ್ನೆ ಟೆಕ್ಕಿಗಳನ್ನು ಚುಚ್ಚುತ್ತಿದೆಯಂತೆ. ಭಾರತದಲ್ಲಿ ಈ ವಲಯ ಸುಮಾರು 5.40 ಮಿಲಿಯನ್ ನೇರ ಉಧ್ಯೋಗಿಗಳನ್ನು ನೀಡಿದ್ದು, ,ದೇಶದ ಜಿಡಿಪಿಗೆ ಗಮನಾರ್ಹ ಕೊಡುಗೆ ನೀಡುತ್ತಿದೆ.ಈ ಉಧ್ಯಮ ದೇಶದಲ್ಲಿ 16713.00ಮಿಲಿಯನ್ ಡಾಲರ್ ಅದಾಯ ಗಳಿಸಿದ್ದು,2030ರ ಹೊತ್ತಿಗೆ ಇದು 18.80% ಬೆಳವಣಿಗೆಯಲ್ಲಿ 47574.20 ಮಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ.ಅರ್ಥಿಕ ತ ಜ್ಞರ ಪ್ರಕಾರ ಟೆಕ್ ಉದ್ಯಮ ಒಂದು ರೀತಿಯಲ್ಲಿ ಚಿನ್ನದ ಮೊಟ್ಟೆ ಇಡುವ ಉದ್ಯಮವಾಗಿದ್ದು,ದೇಶದ ಜಿಡಿಪಿಗೆ 7.50%ಕೊಡುಗೆ ನೀಡುತ್ತಿದ್ದು, 2025-26 ಹೊತ್ತಿಗೆ ಇದು 10% ಗೆ ತಲುಪುವ ನಿರೀಕ್ಷೆಯಲ್ಲಿದೆ.ಅಂತೆಯೇ ಈ ಉದ್ಯಮದಲ್ಲಿ ಸ್ವಲ್ಪತಲ್ಲಣವಾದರೂ ಅದು ದೇಶದ ಅರ್ಥಿಕ ವ್ಯವಸ್ಥೆಗೆ ಮಾರ್ಮಿಕ ಪೆಟ್ಟು ನೀಡುತ್ತದೆ.ಯಾವುದೇ ಉದ್ಯಮದಲ್ಲಿ ಹೊಸ ಅಯಾಮಗಳು ಅನಿವಾರ್ಯ. ಉದ್ಯಮ ನಿಂತ ನೀರಲ್ಲ. ಬದಲಾವಣೆ ಅನಿವಾರ್ಯ.ಅದರೆ, ಬದಲಾವಣೆ ಮತ್ತು ಹೊಸ ಅಯಾಮಗಳನ್ನು ಅಳವಡಿಸಿಕೊಳ್ಳುವ ಧಾವಂತದಲ್ಲಿ, ಆ ಹೆಸರಿನಲ್ಲಿ ದುಡಿಯುವ ಕೈಗಳಿಗೆ ವಿರಾಮ ನೀಡುವುದು ಎಷ್ಟು ಸೂಕ್ತ, ಲಾಭವೇ ಮುಖ್ಯವಾಗಿರುವ ಉದ್ಯಮಮದಲ್ಲಿ ಮಾನವ ಸಂಪನ್ಮೂಲಗಳನ್ನು ಬದಿಗೊತ್ತಿ ಎಲ್ಲವನ್ನು ಯಂತ್ರಗಳ ಮೂಲಕ ನಡೆಸಿದರೆ, ದುಡಿಯುವ ಕೈಗಳಿಗೆ ಕೆಲಸವೆಲ್ಲಿ? ಟೆಕ್ ಉದ್ಯಮ ದೇಶದಲ್ಲಿ ಅತಿ ದೊಡ್ಡ ಉದ್ಯೋಗದಾತ ವಾಗಿದ್ದು, ಅದು ಈ ನಿಟ್ಟಿನಲ್ಲಿ ಭಾರತೀಯ ರೈಲ್ವೆಯನ್ನು ಹಿಂದೂಡಿದೆ ಎನ್ನಲಾಗುತ್ತ ದೆ.ಇದು ನೀಡಿದ ನೇರ ಉದ್ಯೋಗವೇ 5.40ಮಿಲಿಯನ್.ಪರೋಕ್ಷ ಉದ್ಯೋಗಗಳು ಬೇರೆ ಲೆಕ್ಕ.
ತೊಂಬತ್ತರ ದಶಕದಲ್ಲಿ ಬ್ಯಾಂಕುಗಳ ಗಣಕೀಕರಣಕ್ಕೆ ಮುಂದಾದಾಗ,ಸಿಬ್ಬಂದಿಗಳು ವರ್ಷಗಳ ಕಾಲ ಸರ್ಕಾರದ ನೀತಿಯನ್ನು ವಿರೋಧಿಸಿ “ಉದ್ಯೋಗ ನಾಶ” ಹೆಸರಿನಲ್ಲಿ ಗಣಕೀಕರಣವನ್ನು ನಿಲ್ಲಿಸಿದ್ದರು. ಕೊನೆಗೆ ಯಾವುದೋ ರಾಜಿ ಸೂತ್ರದಡಿಯಲ್ಲಿ, ಕೊಟ್ಟು ತೆಗೆದುಕೊಳ್ಳುವ ತತ್ವ ಆಧಾರದಲ್ಲಿ ಗಣಕೀಕರಣಕ್ಕೆ ಒಪ್ಪಿಗೆ ನೀಡಲಾಯಿತು.ಇದರ ಪರಿಣಾಮ ಎಷ್ಟಾಗಿದೆ ಎಂದರೆ, ನೂರಾರು ಸಿಬ್ಬಂದಿಗಳು ಕೆಲಸ ಮಾಡುತ್ತಿರುವ ಶಾಖೆಗಳು 10-20 ಸಿಬ್ಬಂದಿಗಳಿಗೆ ಇಳಿದಿದೆ.ಟೆಂಟ್ ಸಿನೆಮಾದಷ್ಟು ದೊಡ್ಡ ಇರುವ ಕಚೇರಿಗಳು 800-1200 ಚ.ಅಡಿಗೆ ಇಳಿದಿವೆ. ಬಹುತೇಕ ಗ್ರಾಹಕರು ತಾವು ಕುಳಿತಲ್ಲಿನಿಂದಲೇ, ಮೊಬೈಲ್ ಅಥವಾ ಲ್ಯಾಪ್ ಟಾಪ್ ಮೇಲೆ ಬೆರಳಾಡಿಸಿ ತಮ್ಮ ಬ್ಯಾಂಕಿಂಗ್ ವ್ಯವಹಾರವನ್ನು ಮಾಡಬಹುದಾಗಿದೆ. ಬಹುತೇಕ ಕೆಲಸಗಳು ಮಷಿನ್‌ದಲ್ಲಿ ಅಗುತ್ತಿದ್ದು ಸಾಲ ಮತ್ತು ಲಾಕರ್ ಗ್ರಾಹಕರು ಮಾತ್ರ ಹೆಚ್ಚಾಗಿ ಬ್ಯಾಂಕ್‌ನಲ್ಲಿ ಕಾಣುತ್ತಾರೆ ಎನ್ನಲಾಗುತ್ತದೆ.ಬ್ಯಾಂಕುಗಳು ಉದ್ಯೋಗ ಹುಡುಕುವವರ ನೆಚ್ಚಿನ ತಾಣ ಎನ್ನುವ ಭಾವನೆ ಕೂಡಾ ಈಗ ಇಲ್ಲವಾಗಿದೆ. ಇದರ ಪರಿಣಾಮವೋ ಏನೋ ಮುಂದಿನ ದಿನಗಳಲ್ಲಿ ಬ್ಯಾಂಕುಗಳಿಗೆ ಬ್ರಿಕ್ & ಮಾರ್ಟರ್ ಕಟ್ಟಡಗಳು ಇತಿಹಾಸದ ಪುಟ ಸೇರುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯ ಕೂಡಾ ಕೇಳಿಬರುತ್ತಿದೆ.ಗಣಕೀಕರಣ ದಶಕಗಳ ನಂತರ ಬ್ಯಾಂಕ್ ಕಾರ್ಮಿಕ ಧುರೀಣರು ಪಶ್ಚಾತ್ತಾಪ ಪಡುತ್ತಿದ್ದಾರಂತೆ. ಐಟಿ ಸೆಕ್ಟರ್ ಕೂಡಾ ಬ್ಯಾಂಕಿಂಗ್ ಉದ್ಯಮದ ಹಾದಿ ಹಿಡಿಯಬಹುದೇ?
ವರ್ಷಗಳ ಹಿಂದಿನ ಮಾತು. ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುವ ಟೆಕ್ಕಿಯೊಬ್ಬ ಯಾವುದೋ ಕೆಲಸಕ್ಕೆ ಬ್ಯಾಂಕಿಗೆ ಬಂದಿದ್ದ. ಆ ದಿನ ಬ್ಯಾಂಕ್ ಮುಷ್ಕರದಲ್ಲಿದ್ದು, ಸಿಬ್ಬಂದಿಗಳು ಗೇಟ್ ಹೊರಗೆ ನಿಂತು ಕೆಂಪು ಧ್ವಜ ಹಿಡಿದು ಮುಷ್ಟಿ ಎತ್ತಿ ಮುರ್ದಾ ಬಾದ್-ಜಿಂದಾಬಾದ್ ಘೋಷಣೆ ಕೂಗುತ್ತಿದ್ದರು. ಟೆಕ್ಕಿಯು ಬ್ಯಾಂಕನಲ್ಲಿ ತನ್ನ ಕೆಲಸ ಅಗದಿರುವುದಕ್ಕೆ ಬ್ಯಾಂಕ ಸಿಬ್ಬಂದಿಗಳನ್ನು ಉದ್ದೇಶಿಸಿ ಸ್ವಲ್ಪ ಲಘುವಾಗಿ ಮಾತನಾಡಿದ್ದ. ಇದನ್ನು ಕೇಳಿದ ಸಿಬ್ಬಂದಿಯೊಬ್ಬ,” ಸಾರ್ , ಏನೇ ಅಗಲಿ ನಮ್ಮನ್ನು ಕೆಲಸದಿಂದ ಮಾತ್ರ ಅಷ್ಟು ಸುಲಭವಾಗಿ ತೆಗೆಯಲಾಗದು.ನಿಮಗೆ ವಾಪಸ್ಸು ಮನೆಗೆ ಹೋಗುವ ಹೊತ್ತಿಗೆ ಪಿಂಕ್ ಚೀಟಿಯ ಸ್ವಾಗತದ ಸಾಧ್ಯತೆ ತೆ ಇರುತ್ತದೆ” ಎಂದು ಛೇಡಿಸಿದ್ದ. ಟೆಕ್ ವಲಯದಲ್ಲಿನ ಸದ್ಯದ ಬೆಳವಣಿಗೆ ನೋಡಿದರೆ, ಅವನೆಷ್ಟು ಸತ್ಯ ಹೇಳಿದ್ದ ಎಂದು ಅನಿಸದೇ ಇರದು.
ವಿಪರ್ಯಾಸವೆಂದರೆ, ಟಿಸಿಎಸ್ ಕಂಪನಿಯಲ್ಲಿ ಉದ್ಯೋಗಿಗಳನ್ನು ಅಪಾರ ಪ್ರಮಾಣದಲ್ಲಿ ಲಾಗೌಟ್ ಮಾಡುತ್ತಿದ್ದು,ಟೆಕ್‌ವ ಲಯದಲ್ಲಿ ಒಂದು ರೀತಿಯ ಕಾರ್ಮೋಡ ಕಾಣುತ್ತಿದ್ದರೆ, ಬೆಂಗಳೂರು ಮೂಲದ ಎನ್.ಅರ್.ನಾರಾಯಣ ಮೂರ್ತಿ ಪ್ರಾ ಯೋಜತ್ವದ 323788 ಉದ್ಯೋಗಿಗಳನ್ನು ಹೊಂದಿದ ಇನ್ಫೋಸಿಸ್ ಈ ವರ್ಷ(2025) 20000 ನೇಮಕಾತಿಗಳನ್ನು ಮಾಡಲು ಮುಂದಾದರೆ,ಫ್ರಾನ್ಸ್ ಮೂಲದ ಕೇಪ್ ಜೆಮಿನಿ ಎನ್ನುವ ಟೆಕ್ ಕಂಪನಿ 2025-26 ರಲ್ಲಿ 45000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆಯಂತೆ. ಸುಮಾರು 50 ದೇಶಗಳಲ್ಲಿ ಕಾರ್ಯ ನಿರ್ವಹಿಸುವ 349000 ಉದ್ಯೋಗಿಗಳನ್ನು ಹೊಂದಿರುವ ಈ ಕಂಪನಿ ಬೆಂಗಳೂರು ಸಹಿತ ಭಾರತದಲ್ಲಿರುವ 13 ಕೇಂದ್ರಗಳಲ್ಲಿ ಒಟ್ಟೂ 175000 ಉದ್ಯೋಗಿಗಳನ್ನು ಹೊಂದಿದೆ. ಈ ಕಂಪನಿ ಕೃತ್ರಿಮ ಬುದ್ಧಿಮತ್ತೆಯ ಮೇಲೆ ಹೆಚ್ಚಿನ ಗಮನ ನೀಡಲು ಈ ನೇಮಕಾತಿ ಮಾಡಿಕೊಳ್ಳುತ್ತಿದೆಯಂತೆ. ಒಂದು ಕಡೆ ಮೈನ ಸ್ ಅದರೆ ಇನ್ನೊಂದು ಕಡೆ ಪ್ಲಸ್. ಈ ಗಣಿತವೇ ಅರ್ಥವಾಗುತ್ತಿಲ್ಲ ಎಂದು ಕೆಲವರು ತಲೆಕೆಡಿಸಿಕೊಳ್ಳುತ್ತಿದ್ದಾರೆ.
ಟೆಕ್ ವಲದಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಒಂದು ಕಂಪನಿ ಸ್ವಲ್ಪವೂ ಕರುಣೆ ಇಲ್ಲದೆ ಉದ್ಯೋಗಿಗಳಿಗೆ ಪಿಂಕ್ ಚೀಟಿ ನೀಡಿ ಅವರನ್ನು ಕಂಪನಿಯಿಂದ ಲಾಗೌಟ್ ಮಾಡಿದರೆ,ಇನ್ನೊಂದು ಕಂಪನಿ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನ ಕಂಪನಿಗೆ ಲಾಗ್ ಇನ್ ಮಾಡಿಕೊಳ್ಳು ತ್ತಿದೆ.ವಾಸ್ತವದಲ್ಲಿ ಈ ಬೆಳವಣಿಗೆ ಹಿಂದಿನ ಕಥೆ ಏನು ಎಂದು ಜನಸಾಮಾನ್ಯರಿಗೇಕೆ, ಪ್ರಜ್ಞಾವಂತರಿಗೂ ಅರ್ಥವಾಗುತ್ತಿಲ್ಲ. ಟ್ರಂಪ್ ಸುಂಕಾಸ್ತ್ರದಿಂದ ಐಟಿ ವಲಯದ ಮೇಲೆ ಸದ್ಯ ಅಂತಹ ಪರಿಣಾಮ ಇರದಿದ್ದರೂ, ಅದರ ಸೈಡ್ಎಫೆಕ್ಟ್ ನಿಂದ ಈ ವಲಯ ತೊಂದರೆ ಅನುಭವಿಸುವುದು ಗ್ಯಾರಂಟಿ ಮತ್ತು ಇದು ಇನ್ನಷ್ಟು ಪಿಂಕ್‌ಚೀಟಿಗಳಿಗೆ ಕಾರಣವಾಗಬಹುದು.ಈ ವರೆಗೆ ಟೆಕ್ ವಲಯದಲ್ಲಿ ಕಾರ್ಮಿಕ ಸಂಘಟನೆ ಇರುವುದಿಲ್ಲ. ಇದ್ದರೂ ಅದು ಕೆಂಬಾವುಟ ಹಾರಿಸಿ ಜಿಂದಾಬಾದ್ ಮುರ್ದಾಬಾದ್ ಎಂದು ಧ್ವನಿ ಏರಿಸಿ ಕೂಗುವ ಮಟ್ಟಕ್ಕೆ ತಲುಪಿಲ್ಲ.ಪಿಂಕ್ ಚೀಟಿ ನೀಡುವ ಪ್ರಕ್ರಿಯೆ ಮುಂದುವರೆದರೆ,ಇನ್ನಿತರ ಉದ್ಯಮಗಳಂತೆ ಟೆಕ್ ಉಧ್ಯಮದಲ್ಲೂ ಕಾರ್ಮಿಕ ಸಂಘಟನೆಗಳು ಚುರುಕುಗೊಳ್ಳಬಹುದು. ಈ ನಿಟ್ಟಿನಲ್ಲಿ ಅಲ್ಲಲ್ಲಿ ಸ್ವಲ್ಪ ಚಟುವಟಿಕೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಅಗುವ ಸಾಧ್ಯತೆ ಕಾಣುತ್ತಿದೆ.