Menu

ಸರ್ಕಾರಿಯಲ್ಲಿ ಮುಂದಿರುವ ಕಲ್ಬುರ್ಗಿ ಹಿಂದುಳಿಯಲು ಕಾರಣವೇನು

ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರಿ ಪಡೆಯುವುದರಲ್ಲಿ ಮುಂದಿದೆ. ಆದರೆ ಇತರ ವಿಷಯಗಳಲ್ಲಿ ಹಿಂದೆ ಉಳಿದಿರುವುದಕ್ಕೆ ಕಾರಣವೇನು ಎಂಬುದನ್ನು ಅಲ್ಲಿಯ ರಾಜಕೀಯ ನಾಯಕರೇ ಉತ್ತರಿಸಬೇಕು. ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಒಟ್ಟು ೪.೧೭ ಲಕ್ಷ ಉದ್ಯೋಗ ಸೃಷ್ಟಿಯಾಗಿದ್ದರೆ ಕಲ್ಯಾಣ ಕರ್ನಾಟಕದಲ್ಲಿ ೧.೦೫ ಲಕ್ಷ ಉದ್ಯೋಗ ಸ್ಥಳೀಯರಿಗೆ ಮೀಸಲಾಗಿದೆ. ಇದಲ್ಲದೆ ಜನರಲ್ ಮೆರಿಟ್ ಇದ್ದವರಿಗೆ ಹೊರಗಿನ ರಾಜ್ಯದಲ್ಲೂ ಉದ್ಯೋಗ ಲಭಿಸುತ್ತದೆ. ಹೀಗಿದ್ದರೂ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವುದು ಆಶ್ಚರ್ಯದ ಸಂಗತಿ. ಖರ್ಗೆ ವಿನಾಕಾರಣ ಯಾವುದನ್ನೂ ಪ್ರಸ್ತಾಪಿಸುವುದಿಲ್ಲ. ಈಗ ದಕ್ಷಿಣ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವೇಗದಲ್ಲಿ ಅಸಮಾನತೆ ಕಂಡು ಬರುತ್ತಿದೆ ಎಂದು ಹೇಳಿರುವುದು ನಿಜಕ್ಕೂ ಚಿಂತಿಸಬೇಕಾದ ಸಂಗತಿ.

ಅಭಿವೃದ್ಧಿ ಸೂಚ್ಯಂಕದಲ್ಲಿ ಬೆಂಗಳೂರು ಮೊದಲ ರ್‍ಯಾಂಕ್ ಪಡೆದಿದ್ದರೆ, ಬೀದರ್ ೨೨, ರಾಯಚೂರು ೨೮, ಕಲಬುರ್ಗಿ ೨೯, ಯಾದಗಿರಿ ೩೦ ನೇ ರ್‍ಯಾಂಕ್‌ಗಳಲ್ಲಿದೆ. ತಾಲೂಕುಗಳಲ್ಲಿ ಶಹಪುರ ೧೬೭, ಚಿಂಚೋಳಿ ೧೬೮ ರ್‍ಯಾಂಕ್‌ನಲ್ಲಿದೆ. ಡಾ. ನಂಜುಂಡಪ್ಪ ಆಯೋಗದ ವರದಿಯಂತೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಯಾಯಿತು. ೨೦೧೩ ರಲ್ಲಿ ಕೇಂದ್ರ ಸರ್ಕಾರ ವಿಧಿ ೩೭೧ ಜೆ ಅಡಿಯಲ್ಲಿ ಮೀಸಲಾತಿ ನೀಡಿದೆ. ಆದರೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿದೆ. ಇಡೀರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಕಲಬುರ್ಗಿ, ಯಾದಗಿರಿ, ರಾಯಚೂರು, ಬೀದರ್ ಸೇರಿದೆ. ಎಸ್‌ಎಸ್‌ಎಲ್‌ಸಿ-ಪಿಯುಸಿ ಫಲಿತಾಂಶ ನೋಡಿದರೆ ತಿಳಿಯುತ್ತದೆ. ಅತ್ಯಂತ ಕಡಿಮೆ ತೂಕದ ಮಕ್ಕಳು ಜನಿಸುವುದು ಯಾದಗಿರಿಯಲ್ಲಿ ಎಂಬುದು ನಾಚಿಕೆ ಗೇಡಿನ ಸಂಗತಿ. ಪ್ರಸವದಲ್ಲಿ ಸಾಯುವ ತಾಯಿ ಮತ್ತು ನವಜಾತ ಮಕ್ಕಳ ಸಂಖ್ಯೆ ಕಲ್ಯಾಣ ಕರ್ನಾಟಕದಲ್ಲೇ ಹೆಚ್ಚು. ಇದೆಲ್ಲವನ್ನೂ ನೋಡಿದರೆ ಖರ್ಗೆ ಅವರ ಮಾತು ಸತ್ಯ ಎನಿಸುತ್ತದೆ.
ಬಹುತೇಕ ದಕ್ಷಿಣ ಕರ್ನಾಟಕದ ಸಚಿವರು ಕಲ್ಯಾಣ ಕರ್ನಾಟಕದತ್ತ ಹೆಜ್ಜೆ ಹಾಕುವುದಿಲ್ಲ.

ಖರ್ಗೆ ಅವರು ಉದ್ದೇಶಪೂರ್ವಕವಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಪ್ರಸ್ತಾಪಿಸಿದ್ದಾರೆ. ಮೈಸೂರು ಅರಸರು ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. ಆಗಿನ ಕಾಲದಲ್ಲಿ ಮೈಸೂರಿನ ಸಾಕ್ಷರತೆ ಬ್ರಿಟನ್‌ಗಿಂತ ಹೆಚ್ಚು ಇತ್ತು. ಮಹಿಳೆಯರಿಗಾಗಿ ಪ್ರತ್ಯೇಕ ಶಾಲೆ-ಕಾಲೇಜು ತೆರೆಯಲಾಗಿತ್ತು. ಆದರೆ ಕಲ್ಯಾಣ ಕರ್ನಾಟಕಲ್ಲಿ ಶಾಲೆ-ಕಾಲೇಜು ಆರಂಭವಾಗಿದ್ದು ೧೯೫೬ ನಂತರ ಎಂಬುದನ್ನು ಮರೆಯಬಾರದು. ನಿಜಾಂ ಆಡಳಿತದಲ್ಲಿ ಯಾವ ಸವಲತ್ತು ಲಭ್ಯವಿರಲಿಲ್ಲ. ಈ ಐತಿಹಾಸಿಕ ಸಂಗತಿಯನ್ನು ಅರಿತು ಹಳೆ ಮೈಸೂರಿನ ಜನ ಕಲ್ಯಾಣ ಕರ್ನಾಟಕದ ಬಗ್ಗೆ ಉದಾರ ಭಾವನೆ ತಳೆಯಬೇಕಿತ್ತು. ಈಗಲೂ ಅದು ಕಂಡು ಬರುತ್ತಿಲ್ಲ ಎಂಬುದನ್ನೇ ಖರ್ಗೆ ಹೇಳಿದ್ದಾರೆ. ಅಲ್ಲಿ ಮಧ್ಯಮ ವರ್ಗ ಇಲ್ಲ. ಅತಿ ಶ್ರೀಮಂತರು, ಕಡು ಬಡವರು ಎರಡೇ ವರ್ಗ. ಅದರಿಂದ ಆರ್ಥಿಕ ಅಸಮಾನತೆ ಎದ್ದು ಕಾಣುತ್ತದೆ. ಚಿನ್ನದ ಗಟ್ಟಿ ಇರುವ ಮನೆಗಳೂ ಇವೆ. ತಿನ್ನಲು ಏನೂ ಇಲ್ಲದ ಜೋಪಡಿಗಳು ಇವೆ. ಈ ಅಸಮಾನತೆ ಹೋಗಲಾಡಿಸಬೇಕು ಎಂದರೆ ಸರ್ಕಾರವೇ ಎಲ್ಲ ಮಾಡಬೇಕೆಂದು ಬಯಸುವುದು ಸೂಕ್ತವಲ್ಲ. ಸರ್ಕಾರ ಮೂಲಭೂತ ಸವಲತ್ತು ಕಲ್ಪಿಸಿಕೊಡಬೇಕು. ಉಳಿದದ್ದು ಖಾಸಗಿ ಬಂಡವಾಳದಿಂದ ಬರಬೇಕು.

ಮುಂಬೈ ಕರ್ನಾಟಕ ಪ್ರದೇಶಕ್ಕೆ ೧೭೭೧೦ ಕೋಟಿ ರೂ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ೧೩೪೮೮ ಕೋಟಿ ರೂ.ನೀಡಲಾಗಿದೆ. ಆದರೆ ಅಭಿವೃದ್ಧಿ ಕಂಡು ಬರುತ್ತಿಲ್ಲ ಎಂದರೆ ಅದಕ್ಕೆ ಯಾರು ಹೊಣೆ? ನಮ್ಮಲ್ಲಿ ಬಹುಮತದ ಮೇಲೆ ಸರ್ಕಾರ ನಡೆಯುತ್ತದೆ. ಕಲ್ಯಾಣ ಕರ್ನಾಟಕದ ಜನ ಇನ್ನೂ ಬಡತನದಲ್ಲೇ ಉಳಿದುಕೊಂಡಿದ್ದಾರೆ. ಜನಪ್ರತಿನಿಧಿಗಳು ಶ್ರೀಮಂತರಾಗಿ ಮುಂಬೈ, ಹೈದರಾಬಾದ್, ಬೆಂಗಳೂರಿನಲ್ಲಿ ಬಂಗಲೆ ಕಟ್ಟಿಕೊಂಡಿದ್ದಾರೆ.ಕರ್ನಾಟಕಕ್ಕೆ ಕಳೆದ ೫ ವರ್ಷಗಳಲ್ಲಿ ೧೦.೨೬ ಲಕ್ಷ ಕೋಟಿ ರೂ. ಖಾಸಗಿ ಬಂಡವಾಳ ಬಂದಿದೆ. ಇದರಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಮಾತ್ರ ೧೦೦೦ ಕೋಟಿರೂ ಬಂಡವಾಳ ಹೂಡಿಕೆಆಗಿದೆ. ಬೆಂಗಳೂರು ಒಂದರಲ್ಲೇ ಶೇ.೨೫ ರಷ್ಟು ಬಂಡವಾಳ ಹೂಡಿಕೆ ಆಗಿದೆ. ಇದಕ್ಕೆ ಕಾರಣ ಹುಡುಕುವ ಅಗತ್ಯವಿಲ್ಲ. ಕಣ್ಣಿಗೆ ಕಾಣುವುದು ಅಭಿವೃದ್ಧಿಯ ಕೊರತೆ.

ಬೆಂಗಳೂರು ಸುತ್ತಮುತ್ತ ೧೦೦ ಎಂಜಿನಿಯರಿಂಗ್ ಕಾಲೇಜುಗಳಿವೆ. ಇಲ್ಲಿರುವ ಐಟಿಬಿಟಿ ಕಂಪನಿ ಸೇರಲು ಬೇರೆ ರಾಜ್ಯಗಳಿಂದ ಪ್ರತಿಭಾವಂತರು ಬರುತ್ತಾರೆ. ಕಾರಣವೇನು? ಸರ್ಕಾರದ ಸತ್ತೆ-ಸೊತ್ತುಗಳ ವಿಕೇಂದ್ರೀಕರಣ ಆಗಬೇಕು. ಸರ್ಕಾರದ ಆಸ್ತಿಯ ನಗದೀಕರಣ ನಡೆಯಬೇಕು. ಅಲ್ಲಿಯ ಜನರಲ್ಲಿರುವ ಮಾನಸಿಕ ಜಡತ್ವ ಹೋಗಬೇಕು. ಅಲ್ಲಿಯ ಪ್ರತಿಭಾವಂತರು ಬೆಂಗಳೂರು, ಮೈಸೂರಿನಲ್ಲಿ ನೆಲೆಸಲು ಬಯಸುತ್ತಾರೆಯೇ ಹೊರತು ತಮ್ಮ ಪ್ರದೇಶಕ್ಕೆ ಹಿಂತಿರುವುದಿಲ್ಲ. ದಕ್ಷಿಣ ಕರ್ನಾಟಕದ ಉತ್ತರ ಕರ್ನಾಟಕವನ್ನು ಶೋಷಣೆಯ ಕೇಂದ್ರವಾಗಿ ಬಳಸಿಕೊಂಡಲ್ಲಿ ಅಶ್ಚರ್ಯ ವೇನೂ ಇಲ್ಲ. ವಲಸೆ ಬರುವ ಕೂಲಿಕಾರರಲ್ಲಿ ಕಲಬುರ್ಗಿಯವರೇ ಹೆಚ್ಚು. ಮುಂಬೈನಲ್ಲಿ ಕಲಬುರ್ಗಿ ಗಲ್ಲಿ ಎಂಬ ಕೊಳಚೆ ಪ್ರದೇಶ ಇದೆ.

Related Posts

Leave a Reply

Your email address will not be published. Required fields are marked *