ಬೆಂಗಳೂರು: ಕಾಂಗ್ರೆಸ್ಸಿನವರು ಯಾವ ಪುರುಷಾರ್ಥಕ್ಕಾಗಿ ಮತ್ತು ಯಾವ ನೈತಿಕತೆ ಇಟ್ಟುಕೊಂಡು ವಿಬಿ-ಜಿ ರಾಮ್ ಜಿ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸವಾಲು ಹಾಕಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ವಿಬಿ-ಜಿ ರಾಮ್ ಜಿ) ಇದರ ಬಗ್ಗೆ ಕಾಂಗ್ರೆಸ್ ಪಕ್ಷವು 10ರಿಂದ ಹೋರಾಟ ಮಾಡಲು ಕರೆ ನೀಡಿದೆ. 20 ವರ್ಷಗಳ ಹಿಂದೆ ಯೋಜನೆ ಮಾಡಿದಾಗ ವಿಕಸಿತ ಭಾರತ, ಆಸ್ತಿ ನಿರ್ಮಾಣದ ಕಲ್ಪನೆಯೇ ಇರಲಿಲ್ಲ. ಆಗ, ದೇಶ- ಜನರ ಆರ್ಥಿಕ ಸ್ಥಿತಿ ಅತ್ಯಂತ ಕಠಿಣವಾಗಿತ್ತು ಎಂದು ವಿವರಿಸಿದರು.
ವಿಕಸಿತ ಭಾರತ ಆದಾಗ ಮೂಲಭೂತ ಸೌಕರ್ಯ, ದೀರ್ಘಾವಧಿಯ ಆಸ್ತಿಗಳಿರುವ ವಿಕಸಿತ ಗ್ರಾಮವೂ ಆಗದೇ ಇದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಹಳ್ಳಿಗಳು ಖಾಲಿ ಆಗಲಿವೆ ಎಂಬ ಮಹತ್ವದ ಅಂಶವೂ ಇದರಲ್ಲಿದೆ ಎಂದು ತಿಳಿಸಿದರು. ಕಾಲಕಾಲಕ್ಕೆ ಈ ಯೋಜನೆಯಡಿ ಬದಲಾವಣೆಗಳನ್ನು ಅವರೂ ಮಾಡಿದ್ದಾರೆ ಎಂದು ಹೇಳಿದರು.
ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಇದು ಕಸಿಯಲಿದೆ ಎಂಬ ಸುಳ್ಳನ್ನು ಅವರು ಹೇಳುತ್ತಿದ್ದಾರೆ. ಇದು ಶುದ್ಧಾಂಗ ಸುಳ್ಳು. ಇದು ಯಾವುದೇ ರೀತಿಯ ಕೇಂದ್ರದ ಯೋಜನೆ ಅಥವಾ ಕೇಂದ್ರ ಪ್ರಾಯೋಜಿತ ಯೋಜನೆ ಮಾಡಲು ಕಾನೂನಿನ ಅಗತ್ಯವಿಲ್ಲ. ವಿಬಿ-ಜಿ ರಾಮ್ ಜಿ ಎಂಬುದು ಸಂಸತ್ತಿನ ಕಾಯ್ದೆ ಎಂದು ತಿಳಿಸಿದರು. ಇದು ಕೆಲಸದ ಹಕ್ಕನ್ನು ಕಸಿಯುವುದಿಲ್ಲ; ಇದನ್ನು 125 ದಿನಕ್ಕೆ ಏರಿಸಿದ್ದೇವೆ ಎಂದು ಹೇಳಿದರು.
ಸರಿಯಾಗಿ ಕೆಲಸ ಕೊಟ್ಟು ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡುವ ಪ್ರತಿ ರಾಜ್ಯಕ್ಕೆ 17 ಸಾವಿರ ಕೋಟಿ ರೂ. ಸಿಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಅಂದಾಜು ಮೂಲಕ ಮಾಹಿತಿ ಸಿಕ್ಕಿದೆ. ಕಾಂಗ್ರೆಸ್ ಆಡಳಿತದಲ್ಲಿ ಮನ್‍ರೇಗಾ ಇದ್ದಾಗಲೂ ಬೇರೆ ಬೇರೆ ರಾಜ್ಯ ಸರಕಾರಗಳ ಅಡಿಯಲ್ಲಿ ಸರಾಸರಿ 50 ದಿನ ಮಾತ್ರ ಉದ್ಯೋಗ ಕೊಟ್ಟಿದ್ದರು ಎಂದು ಅವರು ತಿಳಿಸಿದರು. ಜೆಸಿಬಿ ಮೂಲಕ ಕೆಲಸ ಮಾಡಿಸಿದ್ದ ಬಹಳಷ್ಟು ಉದಾಹರಣೆಗಳಿವೆ ಎಂದರು.
ಹಿಂದೆ ಕೇಂದ್ರ ಸರಕಾರದ ದುಡ್ಡು ತಿನ್ನುವ ವ್ಯವಸ್ಥೆ
ಹಿಂದೆ ಒಂದು ಪೈಸೆಯನ್ನೂ ರಾಜ್ಯ ಸರಕಾರ ಕೊಡುತ್ತಿರಲಿಲ್ಲ; ಮನ ಬಂದಂತೆ ಕೆಲಸ ಮಾಡಿ ಕೇಂದ್ರ ಸರಕಾರದ ದುಡ್ಡು ತಿನ್ನುವ ವ್ಯವಸ್ಥೆ ಇದರಲ್ಲಿ ಇತ್ತು. ಗುರಿ ತಲುಪದ ಅಧಿಕಾರಿಗಳ ಮೇಲೆ ಕ್ರಮ ಆಗುತ್ತಿದ್ದುದು ನಿಮಗೂ ತಿಳಿದಿದೆ ಎಂದು ನುಡಿದರು. ಈಚೆಗೆ ನೇರ ಕೂಲಿ ಪಾವತಿ ಆಗುತ್ತಿದ್ದರೂ, ಮೇಲ್ವಿಚಾರಣಾ ವ್ಯವಸ್ಥೆ ಇರಲಿಲ್ಲ ಎಂದು ಆಕ್ಷೇಪಿಸಿದರು. ಆ ಮೇಲ್ವಿಚಾರಣಾ ವ್ಯವಸ್ಥೆ ಮೂಲಕ ಕೇಂದ್ರೀಕೃತ ಪಾವತಿ ಮಾಡಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಬಹಳ ವಿಸ್ತøತವಾಗಿ ಮಾಡಲಾಗಿದೆ ಎಂದು ವಿವರಿಸಿದರು.
ಈ ಯೋಜನೆಯ ನಿರ್ಧಾರದ ಹಕ್ಕುಗಳನ್ನು ಕೇಂದ್ರ ಸರಕಾರ ಇಟ್ಟುಕೊಂಡಿದೆ ಎಂಬುದು ಅತ್ಯಂತ ದೊಡ್ಡ ಸುಳ್ಳು ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳೇ ನಮ್ಮನೆ ದೇವರು ಎಂಬುದು ಕಾಂಗ್ರೆಸ್ ಪಕ್ಷ ಎಂದು ಟೀಕಿಸಿದರು. ಯುಪಿಎ ಕಾಲದ 10 ವರ್ಷದಲ್ಲಿ 12 ಲಕ್ಷ ಕೋಟಿ ರೂ. ಭ್ರಷ್ಟಾಚಾರ ಆಗಿದೆ ಎಂದು ಸಂಸತ್ತಿನಲ್ಲಿ ಅಮಿತ್ ಶಾ ಅವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಅದನ್ನು ಅಲ್ಲಗಳೆದಿಲ್ಲ ಎಂದು ತಿಳಿಸಿದರು.
ಈ ಯೋಜನೆಯಲ್ಲೂ ಹಗರಣ ಮುಂದುವರೆಸುವ ಇಚ್ಛೆ ಇದ್ದುದರಿಂದ ಅವರು ವಿರೋಧಿಸುತ್ತಿದ್ದಾರೆ. ಈ ವ್ಯವಸ್ಥೆಯನ್ನು ಪಾರದರ್ಶಕ ಮಾಡಿದ್ದಕ್ಕಾಗಿ ಅವರ ಹೋರಾಟ ಎಂದು ದೂರಿದರು. ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯಿತಿಗಳೇ ನಿರ್ಧಾರ ಮಾಡುತ್ತವೆ ಎಂದು ನುಡಿದರು.
ಯಾವ ಹಳ್ಳಿಯಲ್ಲಿ ಯಾವ ಮೂಲಭೂತ ಸೌಕರ್ಯ ನಿರ್ಮಾಣ ಆಗಲಿದೆ ಎಂದು ತಿಳಿದುಕೊಳ್ಳುವ ಅವಕಾಶ ಇರುವ ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿ ಇದನ್ನು ತರಲಾಗಿದೆ. ಗತಿ ಶಕ್ತಿ ಯೋಜನೆಯಡಿ ಬೇರೆ ಬೇರೆ ಉದ್ದೇಶದ 85 ಲಕ್ಷ ಕೋಟಿ ಹೂಡಿಕೆಯ ವಿಭಿನ್ನ ಯೋಜನೆಗಳು ಮಂಜೂರಾಗಿವೆ. ಇಲ್ಲವಾದರೆ ಅವು ಹಾಗೇ ಬಿದ್ದಿರುತ್ತಿದ್ದವು ಎಂದು ತಿಳಿಸಿದರು.


