Menu

ಪರೀಕ್ಷೆಗೊಂದು ಪರೀಕ್ಷೆ ನಡೆಸಿದಾಗ ಕಾಣೋದೇನು?

ಇಂದಿನ ಮಕ್ಕಳಿಗೆ ಪರೀಕ್ಷೆ ಎಂದರೆ ಅಷ್ಟೊಂದು ಒಲವಿಲ್ಲ. ಯಾರಪ್ಪ ಈ ಪರೀಕ್ಷೆ ಕಂಡು ಹಿಡಿದವರು ಎಂದು ಆಗಾಗ್ಗೆ ಕೇಳುತ್ತಿರುತ್ತಾರೆ. ಇನ್ನೊಂದು ವಿಶೇಷವೆಂದರೆ, ಪ್ರತಿಯೊಬ್ಬರು ಈ ಪರೀಕ್ಷೆ ದಾಟಿ ಮುಂದೆ ಬಂದಿರುತ್ತಾರೆ. ಐತಿಹಾಸಿಕ ಪುರಾವೆಗಳ ಪ್ರಕಾರ, ಈ ಪರೀಕ್ಷೆಯನ್ನು ಈ ಜಗತ್ತಿಗೆ ಪರಿಚಯಿಸಿದವರು ಹೆನ್ರಿ ಫಿಶೆಲ್ ಎಂದು ಹೇಳಲಾಗುತ್ತದೆ. ಇವರು ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಪರೀಕ್ಷಿಸಲು ಪರೀಕ್ಷೆ ಪ್ರಾರಂಭಿಸಿದರು. ನಂತರ, ಚೀನಾ ಈ ಪರೀಕ್ಷೆಯ ಪರಿಕಲ್ಪನೆ ಅಳವಡಿಸಿಕೊಂಡ ಮೊದಲ ದೇಶವಾಯಿತು. ಕ್ರಿಶ ೬೦೫ರಲ್ಲಿ ಸುಯಿ ರಾಜವಂಶವು ಕೆಲವು ಸರ್ಕಾರಿ ಹುದ್ದೆಗಳನ್ನು ಆಯ್ಕೆ ಮಾಡಲು ಪರೀಕ್ಷೆಗಳನ್ನು ನಡೆಸಿದರು. ಇದನ್ನು ದಿ ಇಂಪೀರಿಯಲ್ ಪರೀಕ್ಷೆ ಎಂದು ಹೆಸರಿಸಲಾಯಿತು.

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪರೀಕ್ಷೆ ಎನ್ನುವ ಪದ ತುಂಬಾ ಪ್ರಭಾವ ಬೀರಿರುತ್ತದೆ. ಪರೀಕ್ಷೆ ಪರೀಕ್ಷಾರ್ಥಿಗಳ ಜ್ಞಾನ ನಿರ್ಣಯಿಸಲು ಬಳಸುವ ಒಂದು ರೀತಿಯ ಮೌಲ್ಯಮಾಪನ. ಅಷ್ಟೇ ಅಲ್ಲದೆ, ಜ್ಞಾನದ ಜೊತೆ ಕೌಶಲ, ಸಾಮರ್ಥ್ಯ, ದೈಹಿಕ ಅರ್ಹತೆ ಅಥವಾ ಇತರೆ ಅಗತ್ಯತೆ ಅಳೆಯಲು ಉಪಯೋಗಿಸುವ ಒಂದು ಸಾಧನವೂ ಹೌದು. ಎಲ್ಲಾ ಪರೀಕ್ಷೆಗಳನ್ನು ಬರವಣೆಗೆಯ ಮೂಲಕವೇ ಮಾಡಬೇಕೆಂದಿಲ್ಲ. ಕೆಲವು ಪರೀಕ್ಷೆಗಳನ್ನು ಮಾತಿನ ಮೂಲಕ, ಕಾಗದದ ಮೇಲೆ ಮತ್ತು ಗಣಕಯಂತ್ರದ ಮೂಲಕವೂ ನಡೆಸಲಾಗುತ್ತದೆ. ಆದರೆ, ಬರವಣೆಗೆ ಮೂಲಕ ನಡೆಸುವ ಪರೀಕ್ಷೆಗಳಿಗೆ ಹೆಚ್ಚು ಮಾನ್ಯತೆಯಿದೆ. ಪರೀಕ್ಷೆಯನ್ನು ಔಪಚಾರಿಕ ವಾಗಿ ಅಥವಾ ಅನೌಪಚಾರಿಕವಾಗಿ ನಡೆಸಬಹುದು. ತಂದೆ ಅಥವಾ ತಾಯಿ ಮಗುವಿನ ಮೇಲೆ ನಡೆಸುವ ಓದುವ ಪರೀಕ್ಷೆ ಅನೌಪಚಾರಿಕ ಪರೀಕ್ಷೆಗೆ ಉದಾ ಹರಣೆ. ಶಿಕ್ಷಕ ತರಗತಿಯಲ್ಲಿ ನಡೆಸುವ ಪರೀಕ್ಷೆ ಒಂದು ಔಪಚಾರಿಕೆ ಪರೀಕ್ಷೆಗೆ ಉದಾಹರಣೆಯಾಗಿದೆ. ಒಟ್ಟಾರೆಯಾಗಿ, ಎಲ್ಲಾ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಬೆಳವಣಿಗೆಯ ಭಾಗವಾಗಿದೆ. ಜ್ಞಾನ ಮತ್ತು ಸಾಮರ್ಥ್ಯ ಅಳೆಯಲು ಪರೀಕ್ಷೆಗಳು ಅತ್ಯಗತ್ಯ.

ಇಂದಿನ ಕಲಿಕಾರ್ಥಿಗಳಿಗೆ ಪರೀಕ್ಷಾ ಮನಸ್ಥಿತಿ ದುರ್ಬಲವಾಗಿದೆ. ಪರೀಕ್ಷೆಗಳನ್ನು ರದ್ದುಗೊಳಿಸಬೇಕು. ಇಂದಿನ ಪರೀಕ್ಷೆಗಳು ಪ್ರತಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತಿದೆ. ಉತ್ತಮವಾದ ಅಂಕಗಳನ್ನು ಪಡೆಯಲು ಹೆಚ್ಚು ಒತ್ತಡ ಪಡಬೇಕಾಗುತ್ತಿದೆ. ಈ ಹಾದಿಯಲ್ಲಿ ವೈಫಲ್ಯಗಳು ಭಯವನ್ನು ಉಂಟು ಮಾಡುತ್ತಿದೆ. ಇನ್ನೂ ಒಂದು ಹಂತ ಮುಂದೆ ಹೋಗಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಪಡೆದರೆ ಅಥವಾ ಅನುತ್ತೀರ್ಣವಾದರೆ ಜೀವನವೇ ಮುಗಿದು ಹೊಯಿತು ಎಂದು ಅತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಪರೀಕ್ಷೆಗಳು ಮಕ್ಕಳ ಮಧ್ಯೆ ತೀವ್ರವಾದ ಸ್ಫರ್ಧೆಯು ಒತ್ತಡದ ಮಟ್ಟವನ್ನು ಹೆಚ್ಚಿಸುತ್ತಿದೆ. ಇಂದಿನ ಶಿಕ್ಷಣವು ಪರೀಕ್ಷೆಯಲ್ಲಿಯೇ ಅಂತ್ಯಗೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎನ್ನುವುದೇ ಶಿಕ್ಷಣ ಎನ್ನುವುದರ ಮಟ್ಟಕ್ಕೆ ಬಂದು ಬಿಟ್ಟಿದೆ. ಆಧುನಿಕ ಶಿಕ್ಷಣ ಪದ್ಧತಿಯು ಪರೀಕ್ಷೆಯಿಂದ ದೊರವಿರಬೇಕು. ಎರಡು ಮೂರು ಗಂಟೆಯಲ್ಲಿ ಒಂದು ವರ್ಷದಲ್ಲಿ ಓದಿದ್ದನ್ನು ಮೌಲ್ಯಮಾಪನ ಮಾಡುವುದು ಸರಿಯೇ?

ಗುಣಾತ್ಮಕ ಶಿಕ್ಷಣ ಹೆಚ್ಚಿಸಲು ಪರೀಕ್ಷೆ ಅಳತೆಗೋಲು ಅಲ್ಲ, ಪರೀಕ್ಷೆಯ ನೆಪದಲ್ಲಿ ಮಕ್ಕಳು ಮಾನಸಿಕ ಹಿಂಸೆಗೆ ಬಲಿಯಾಗುತ್ತಿದ್ದಾರೆ. ಪರೀಕ್ಷೆಗಳನ್ನು ರದ್ದುಪಡಿಸಿ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಇಂದು ಕಾಡುತ್ತಿರುವ ಒಂದು ದೊಡ್ಡ ಪ್ರಶ್ನೆಯಂದರೆ, ಶಿಕ್ಷಣದಲ್ಲಿ ಪರೀಕ್ಷೆ ಬೇಕೇ? ಪರೀಕ್ಷೆ ಯಾವಾಗ ಹುಟ್ಟಿಕೊಂಡಿ ತ್ತು? ಎನ್ನುವುದನ್ನು ಒಮ್ಮೆ ಹುಡಿಕಿಕೊಂಡು ಹೋಗುವುದು ಅತೀಮುಖ್ಯ. ಇತಿಹಾಸದಲ್ಲಿ ಪರೀಕ್ಷೆಗೆ ಯಾವ ಅರ್ಥವಿತ್ತು? ಇಂದು ಅದು ಹೇಗೆ ಬದಲಾವಣೆ ಕಂಡಿದೆ ಎನ್ನುವುದನ್ನು ಮೇಲುಕು ಹಾಕುವುದು ಇಂದಿನ ಅಗತ್ಯ.

ಇಂದಿನ ಅಂಕ ಮತ್ತು ರ್ಯಾಂಕ್ಗಳ ಭರಾಟೆಯಲ್ಲಿ ಶಿಕ್ಷಣ ಕೊಚ್ಚಿ ಹೋಗಿದೆ. ಪರೀಕ್ಷೆಯನ್ನು ಅಸ್ತ್ರವಾಗಿಸಿಕೊಂಡು ಮಕ್ಕಳಿಗೆ ಒತ್ತಡ ಹಾಕಬೇಡಿ ಎನ್ನುವ ತಜ್ಞರು, ಎಸ್ಎಸ್ಎಲ್ಸಿ ಫಲಿತಾಂಶ ಕುಸಿತವಾಗಿದೆ ಎನ್ನುವ ನೆಪ ಹೇಳಿಕೊಂಡು ಮಕ್ಕಳಿಗೆ ಪರೀಕ್ಷಾ ಸುಧಾರಣೆ ಎಂಬ ಹಣೆಪಟ್ಟಿಯಲ್ಲಿ ಹೊಸ ಹೊಸ ಕಾರ್ಯಕ್ರಮ ಗಳನ್ನು ಜಾರಿಗೊಳಿಸುತ್ತಿದ್ದಾರೆ. ಈ ಗೊಂದಲಗಳ ನಡುವೆ ಪ್ರಾಥಮಿಕ ಹಂತಕ್ಕೆ ತೆರೆದ ಪುಸ್ತಕ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಇನ್ನೊಂದು ದೃಷ್ಟಿಕೋನದಲ್ಲಿ ಕನಿಷ್ಠ ಪಕ್ಷ ೫ನೇ ತರಗತಿ ಮತ್ತು ಎಂಟನೆಯ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲೇಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಕರ್ನಾಟಕಲ್ಲಿ ಈ ಪ್ರಯೋಗ ಮಾಡಲಾಗಿತ್ತು. ಮುಂದೆ ಈ ವಿಚಾರ ಸುಪ್ರೀಂಕೋರ್ಟ್‌ಗೆ ಹೋಗಿದ್ದನ್ನು ನಾವು ಇಲ್ಲಿ ನೆನಸಿಕೊಳ್ಳಬೇಕು. ಈ ವಿಚಾರಣೆ ವೇಳೆ ವಿದ್ಯಾರ್ಥಿಗಳಿಗೆ ಏಕೆ ಕಿರುಕುಳ ನೀಡುತ್ತಿದ್ದೀರಿ ಎಂದು ಸುಪ್ರೀಂಕೋರ್ಟ್ ಹೇಳಿತ್ತು.

ಇಂದಿನ ಮಕ್ಕಳಿಗೆ ಪರೀಕ್ಷೆ ಎಂದರೆ ಅಷ್ಟೊಂದು ಒಲವಿಲ್ಲ. ಯಾರಪ್ಪ ಈ ಪರೀಕ್ಷೆ ಕಂಡು ಹಿಡಿದವರು ಎಂದು ಆಗಾಗ್ಗೆ ಕೇಳುತ್ತಿರುತ್ತಾರೆ. ಇನ್ನೊಂದು ವಿಶೇಷವೆಂದರೆ, ಪ್ರತಿಯೊಬ್ಬರು ಈ ಪರೀಕ್ಷೆ ದಾಟಿ ಮುಂದೆ ಬಂದಿರುತ್ತಾರೆ. ಐತಿಹಾಸಿಕ ಪುರಾವೆಗಳ ಪ್ರಕಾರ, ಈ ಪರೀಕ್ಷೆಯನ್ನು ಈ ಜಗತ್ತಿಗೆ ಪರಿಚಯಿಸಿ ದವರು ಹೆನ್ರಿ ಫಿಶೆಲ್ ಎಂದು ಹೇಳಲಾಗುತ್ತದೆ. ಇವರು ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಪರೀಕ್ಷಿಸಲು ಪರೀಕ್ಷೆ ಪ್ರಾರಂಭಿಸಿದರು. ನಂತರ, ಚೀನಾ ಈ ಪರೀಕ್ಷೆ ಯ ಪರಿಕಲ್ಪನೆ ಅಳವಡಿಸಿಕೊಂಡ ಮೊದಲ ದೇಶವಾಯಿತು. ಕ್ರಿಶ ೬೦೫ರಲ್ಲಿ ಸುಯಿ ರಾಜವಂಶವು ಕೆಲವು ಸರ್ಕಾರಿ ಹುದ್ದೆಗಳನ್ನು ಆಯ್ಕೆ ಮಾಡಲು ಪರೀಕ್ಷೆ ಗಳನ್ನು ನಡೆಸಿದರು. ಇದನ್ನು ದಿ ಇಂಪೀರಿಯಲ್ ಪರೀಕ್ಷೆ ಎಂದು ಹೆಸರಿಸಲಾಯಿತು. ೧೯ನೇ ಶತಮಾನದಲ್ಲಿ ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ಸಾಮರ್ಥ್ಯಗಳನ್ನು ಅಳೆಯುವಲ್ಲಿ ಏಕರೂಪತೆ ಹೊಂದಲು ಪ್ರಮಾಣಿತ ಪರೀಕ್ಷೆಗಳನ್ನು ರಚಿಸಲಾಯಿತು. ಜಪಾನ್ ಮತ್ತು ಕೊರಿಯನ್ ರಾಜವಂಶಗಳಲ್ಲಿ ಸಾಮ್ರಾಜ್ಯಶಾಹಿ ಪರೀಕ್ಷೆಯು ಜನಪ್ರಿಯವಾಗಿತ್ತು. ೧೮೪೫ರಲ್ಲಿ ಅಮೇರಿಕನ್ ಶೈಕ್ಷಣಿಕ ಸುಧಾರಕ ಹೊರೇಸ್ ಮಾನ್ ಬೋಸ್ಟನ್ ಶಾಲೆಗಳಲ್ಲಿ ಮೌಖಿಕ ಪರೀಕ್ಷೆಯ ಬದಲಿಗೆ ಗ್ರೇಡಿಂಗ್ ಪರೀಕ್ಷೆಗಳಲ್ಲಿ ಸ್ಥಿರತೆ ಮತ್ತು ವಸ್ತುನಿಷ್ಠತೆ ಖಚಿತಪಡಿಸಿಕೊಳ್ಳಲು ಲಿಖಿತ ಪರೀಕ್ಷೆಗಳನ್ನು ಪರಿಚ ಯಿಸಿದರು. ನಂತರ ಇದು ವಿದ್ಯಾರ್ಥಿಗಳ ಕಾರ್ಯಕ್ಷಮತೆ ಅಲೆಯುವ ಮತ್ತು ಪರೀಕ್ಷಿಸುವ ಸಾಮಾನ್ಯ ಸಾಧನವಾಯಿತು.

ಭಾರತದಲ್ಲಿ ಪರೀಕ್ಷಾ ವ್ಯವಸ್ಥೆಯು ಪ್ರಾಚೀನ ಕಾಲದಿಂದಲೂ ಸುರ್ದೀಘ ಇತಿಹಾಸ ಹೊಂದಿದೆ. ೧ನೇ ಶತಮಾನದಲ್ಲಿ ಒಡಿಶಾ ರಾಜ್ಯದ ಕಳಿಂಗ ರಾಜವಂಶದಲ್ಲಿ ಖಾರವೇಲ ಪರೀಕ್ಷೆ ಎಂದು ನಡೆಸಲಾಗಿತ್ತು. ಇದನ್ನು ಸರ್ಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವಿನ್ಯಾಸಗೊಳಿಸಲಾಯಿತು. ಮಧ್ಯಕಾಲೀನ ಅವಧಿಯಲ್ಲಿ, ನಳಂದಾ ಮತ್ತು ತಕ್ಷಶಿಲೆಯಂತಹ ವಿಶ್ವವಿದ್ಯಾಲಯಗಳ ಸ್ಥಾಪನೆಯೊಂದಿಗೆ ಪರೀಕ್ಷಾ ವ್ಯವಸ್ಥೆಯು ಹೆಚ್ಚು ಪ್ರಾಮುಖ್ಯತೆ ಪಡೆಯಿತು. ಈ ವಿಶ್ವವಿದ್ಯಾ ಲಯಗಳಲ್ಲಿನ ಪರೀಕ್ಷಾ ವ್ಯವಸ್ಥೆಯು ಪ್ರಾಥಮಿಕವಾಗಿ ಮೌಖಿಕ ಮತ್ತು ಲಿಖಿತ ಪರೀಕ್ಷೆಗಳನ್ನು ಆಧರಿಸಿದೆ ಮತ್ತು ವಿದ್ಯಾರ್ಥಿಗಳು ವಿವಿಧ ವಿಷಯಗಳ ಜ್ಞಾನ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸುವ ನಿರೀಕ್ಷೆಯಿತ್ತು. ೧೮೫೩ರಲ್ಲಿ ಭಾರತದಲ್ಲಿ ಪರೀಕ್ಷೆಗಳನ್ನು ಪರಿಚಯಿಸಲಾಯಿತು. ಇಂಗ್ಲೀಷರು ಪರೀಕ್ಷೆಗಳ ಮೂಲಕ ಅಧಿಕಾರಿ ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ತದನಂತರದಲ್ಲಿ ಭಾರತದಲ್ಲೂ ಇಂಗ್ಲೀಷ್ ಶಿಕ್ಷಣ ಜಾರಿಯಾಯಿತು. ನಂತರ ಇಲ್ಲಿನ ವಿಶ್ವವಿದ್ಯಾಲಯಗಳು ವಿವಿಧ ವಿಷಯಗಳಲ್ಲಿ ಪರೀಕ್ಷೆಗಳನ್ನು ನಡೆಸಿ ಯಶಸ್ವಿ ಅಭ್ಯರ್ಥಿಗಳಿಗೆ ಪದವಿಗಳನ್ನು ನೀಡಲಾರಂಭಿಸಿದವು. ಭಾರತವು ೧೯೪೭ರಲ್ಲಿ ಸ್ವಾತಂತ್ರ್ಯ ಪಡೆದ ನಂತರ, ಪರೀಕ್ಷಾ ವ್ಯವಸ್ಥೆ ಸುಧಾರಿಸಲಾಯಿತು ಮತ್ತು ವ್ಯಾಪಕ ಶ್ರೇಣಿಯ ವಿಷಯಗಳು ಮತ್ತು ಶಿಕ್ಷಣ ಮಟ್ಟಗಳನ್ನು ಸೇರಿಸಲು ವಿಸ್ತರಿಸಲಾಯಿತು.

ಒಟ್ಟಿನಲ್ಲಿ ಈ ಪರೀಕ್ಷೆಗಳ ಗುರಿ ವಿಷಯ ಮತ್ತು ಪರಿಕಲ್ಪನೆಗಳ ಬಗ್ಗೆ ವಿದ್ಯಾರ್ಥಿಯ ತಿಳವಳಿಕೆ ಅಳೆಯುವುದಾಗಿದೆ. ವಿದ್ಯಾರ್ಥಿಗಳು ಯಾವ ವಿಭಾಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಎಲ್ಲಿ ಕೊರತೆಯಿದೆ ಎಂಬುದನ್ನು ಪರೀಕ್ಷೆಗಳು ನಿರ್ಧರಿಸುತ್ತವೆ. ಇದರಿಂದ ಶಿಕ್ಷಕರಿಗೆ ಕಲಿಕೆಯ ಯಾವ ತಂತ್ರಗಳನ್ನು ಬಳಸಿದರೆ ಈ ಕೊರತೆಗಳನ್ನು ನೀಗಿಸಬಹುದು ಎಂಬುದಕ್ಕೆ ಮಾರ್ಗದರ್ಶನ ನೀಡುತ್ತದೆ. ಶೈಕ್ಷಣಿಕ ಕೌಶಲ್ಯಗಳನ್ನು ಪರೀಕ್ಷಿಸುವುದರ ಹೊರತಾಗಿ, ನೈಜಜೀವನದ ಸವಾಲುಗಳನ್ನು ಎದುರಿಸಲು ವ್ಯಕ್ತಿಗಳನ್ನು ಶಕ್ತ ಮಾಡುವುದಾಗಿರುತ್ತದೆ.

ಪರೀಕ್ಷಾ ವ್ಯವಸ್ಥೆಯು ಮಾನವ ಇತಿಹಾಸದ ಪ್ರಮುಖ ಆವಿಷ್ಕಾರಗಳಲ್ಲಿ ಒಂದಾಗಿದೆ. ಇದು ನಾವು ಯೋಚಿಸುವ ಮತ್ತು ಕಲಿಯುವ ವಿಧಾನವನ್ನು ರೂಪಿಸಲು ಸಹಾಯ ಮಾಡಿದೆ. ಪರೀಕ್ಷೆಗಳು ಮಾನವನ ಪ್ರಗತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಪರೀಕ್ಷೆಗಳು ಪ್ರಪಂಚದಾದ್ಯಂತಹ ಶೈಕ್ಷಣಿಕ ವ್ಯವಸ್ಥೆಗಳ ಅವಿಭಾಜ್ಯ ಅಂಗವಾಗಿದೆ. ಇಂದಿನ ಪರೀಕ್ಷೆಗಳು ಜ್ಞಾಪಕಶಕ್ತಿಗೆ ಸೀಮಿತವಾಗಿದೆ. ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ಪರೀಕ್ಷಾ ವ್ಯವಸ್ಥೆಗೆ ಒಂದು ಪರ್ಯಾಯವೆಂದರೆ ಪೋರ್ಟ್ಪೋಲಿಯೊ ಮೌಲ್ಯಮಾಪನ ವ್ಯವಸ್ಥೆ ಅಥವಾ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ. ಈ ವ್ಯವಸ್ಥೆಯು ಒಂದೇ ಪರೀಕ್ಷೆಯ ಬದಲಿಗೆ ವರ್ಷವಿಡೀ ವಿದ್ಯಾರ್ಥಿಗಳ ಕಲಿಕೆಯ ಸಮಗ್ರ ಮೌಲ್ಯಮಾಪನಕ್ಕೆ ಒತ್ತು ನೀಡುತ್ತದೆ. ಇದನ್ನು ಹೊರತುಪಡಿಸಿ ತೆರೆದ ಪುಸ್ತಕ ಪರೀಕ್ಷೆಗಳ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ.

ಪರೀಕ್ಷೆಗಳು ಅಂಕಗಳ ಪರದೆಯಿಂದ ಹೊರಬರಬೇಕಾಗಿದೆ. ಪರೀಕ್ಷೆಗಳು ನಾವು ಎಲ್ಲಿ ನಿಂತಿವೆ. ನಾವು ನಿಜವಾಗಿ ಎಷ್ಟು ಕಲಿತಿzವೆ. ನಾವು ವಿಷಯವನ್ನು ಎಷ್ಟು ಅರ್ಥ ಮಾಡಿಕೊಂಡಿವೆ ಎನ್ನುವುದನ್ನು ತಿಳಿಯಲು ಸಹಾಯವಾಗಬೇಕು. ಪರೀಕ್ಷೆಗಳು ನಾವು ನಿರ್ದಿಷ್ಟ ಸಮಯದಲ್ಲಿ ಕಲಿಯದ್ದನ್ನು  ಮತ್ತೆ ಕಲಿಯಲು ಅವಕಾಶ ಮಾಡಿಕೊಡುವ ವ್ಯವಸ್ಥೆಯಾಗಬೇಕು. ಹೊರಗಿನ ಪ್ರಪಂಚವನ್ನು ತರಗತಿಯಲ್ಲಿಯೇ ಹೇಳಿಕೊಡುವಂತಹ ಮತ್ತು ಅವುಗಳನ್ನು ಪರೀಕ್ಷೆಗಳು ಅರ್ಥ ಮಾಡಿಸಿ ಕೊಡುವಂತಿರಬೇಕು. ಪರೀಕ್ಷೆಗಳು ಒಂದು ರೀತಿಯಲ್ಲಿ ಹಬ್ಬದಂತಿರಬೇಕು. ಏಕೆಂದರೆ ಈ ಪರೀಕ್ಷೆಯ ಇತಿಹಾಸವನ್ನು ಅವಲೋಕಿಸಿದಾಗ ಮೊದಲಿಗೆ ಪರೀಕ್ಷೆ ಗಳನ್ನು ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಬಳಸಲಾಗುತ್ತಿತ್ತೇ ವಿನಾಃ ಅಂಕಗಳನ್ನು ಗಳಿಸುವ ಯಾವುದೇ ಉದ್ದೇಶಗಳು ಅದರ ಹಿಂದೆ ಇರಲಿಲ್ಲ ಎಂದೆನಿಸುತ್ತದೆ. ಆದ್ದರಿಂದ, ಭವಿಷ್ಯದಲ್ಲಿ ಪರೀಕ್ಷೆಗಳು ಎಂದರೆ ಅಂಕಗಳು ಎನ್ನುವ ವ್ಯಾಖ್ಯಾನವನ್ನು ಬದಲಾಯಿಸಬೇಕಾಗಿದೆ.

– ದಿಲೀಪ್ ಕುಮಾರ್ ಸಂಪಡ್ಕ
ಹವ್ಯಾಸಿ ಬರಹಗಾರ
ಮೊ:  94486 58503  

Related Posts

Leave a Reply

Your email address will not be published. Required fields are marked *