ಬೆಂಗಳೂರು: ವಿಧಾನಸೌಧದಲ್ಲಿ ಉಗ್ರರು ಇದ್ದಾರೆ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ , ನಾನು ಹೇಳಿದ್ದು ರಾಜಕೀಯ ಟೆರಿರಿಸ್ಟ್ ಗಳ ಬಗ್ಗೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಸೋಮವಾರ ಸಂಜೆ ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೈತರನ್ನು ಹೆದರಿಸಿ ಒಕ್ಕೆಲೆಬ್ಬಿಸುವವರನ್ನು, ರೈತರನ್ನು ಹೆದರಿಸಲು ಜಿಲ್ಲಾಧಿಕಾರಿ ಕಚೇರಿ ಬಳಿಗೆ ಬಸ್ಸುಗಳಲ್ಲಿ ಗೂಂಡಾಗಳನ್ನು ಕರೆದುಕೊಂಡು ಬರುವವರನ್ನು ಭಯೋತ್ಪಾದಕರು ಎನ್ನದೇ ಬೇರೆ ಏನೆನ್ನಬೇಕು ಎಂದು ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಈಗ ಇರುವವರು ಯಾವುದರಲ್ಲಾದರೂ ದಾಖಲೆ ಕೊಟ್ಟಿದ್ದಾರಾ? ಹಿಂದಿನ ಸರ್ಕಾರದ ವಿರುದ್ಧ 40% ಸರ್ಕಾರ ಅಂದ್ರು, ಇವರು ಏನಾದರೂ ದಾಖಲೆ ಕೊಟ್ಟರಾ? ಯಾವ ರೀತಿ ದುರಹಂಕಾರದಿಂದ ಹೆದರಿಸುವ ಕೆಲಸ ಮಾಡ್ತಿದ್ದಾರೆ ಎಂಬುದನ್ನು ನಾವು ನೀವೆಲ್ಲರೂ ನೋಡುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸಲು ಬಂದ ಮುಗ್ಧ ರೈತರನ್ನು ಹೆದರಿಸಿ ಬೆದರಿಸಿದ್ದನ್ನು ಏನೆಂದು ಕರೆಯಬೇಕು? ಆ ದೃಶ್ಯಗಳನ್ನು ಮಾಧ್ಯಮಗಳೇ ದಿನಗಟ್ಟಲೆ ತೋರಿಸಿದರು. ಅದಕ್ಕಿಂತ ಟೆರಿರಿಸ್ಟ್ ಆಕ್ಟಿವಿಸ್ಟ್ ಬೇರೆ ಯಾರಾದರೂ ಬೇಕಾ? ರೈತರ ಮೇಲೆ ದಬ್ಬಾಳಿಕೆಯನ್ನು ಮಾಡಿದರು.
ಭೂಸ್ವಾಧೀನಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯುವ ಸಂದರ್ಭದಲ್ಲಿ ಬಾಡಿಗೆ ಗೂಂಡಾಗಳನ್ನ ಕರೆದುಕೊಂಡು ಬಂದರು. ನಿಜವಾದ ರೈತರನ್ನ ಬಿಟ್ಟು, ಗೂಂಡಾಗಳನ್ನ ಡಿಸಿ ಕಚೇರಿಗೆ ಕರೆದುಕೊಂಡು ಬಂದಿದ್ದರು! ಇದು ಟೆರಿರಿಸ್ಟ್ ಸಂಸ್ಕೃತಿನಾ? ಅಥವಾ ಇನ್ನಾವ ಸಂಸ್ಕೃತಿ? ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಬಿಡದಿ ಟೌನ್ ಶಿಪ್ ಕುಮಾರಸ್ವಾಮಿ ಕೂಸು ಅಂತ ತೋರಿಸಲು ಹೊರಟಿದ್ದಾರೆ. ಆದರೆ ಕುಮಾರಸ್ವಾಮಿ ಕೂಸು ಬೇರೆ ತರಹ ಇತ್ತು. ಆಗ ದೊಡ್ಡ ಮಟ್ಟದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿರಲಿಲ್ಲ. ನಾವು ಜನರ ವಿರುದ್ಧ ಹೋಗಿರಲಿಲ್ಲ. ಆದರೆ, ಈಗ ಜನರಿಂದ ವಿಪರೀತ ವಿರೊಧ ಬರುತ್ತಿದ್ದರೂ ಇವರು ಬಿಡದಿ ಟೌನ್ ಶಿಪ್ ಮಾಡಲು ಹೊರಟಿದ್ದಾರೆ. ರೈತರನ್ನು ಹೆದರಿಸಿ ಭೂಸ್ವಾಧೀನ ಮಾಡಿಕೊಳ್ಳಲು ಹೊರಟಿರೋದು ಗೂಂಡಾ ವರ್ತನೆಯ? ಅಥವಾ ಟೆರಿರಿಸ್ಟ್ ವರ್ತನೆಯಾ? ಎಂದು ಸಚಿವರು ಖಾರವಾಗಿ ಪ್ರಶ್ನೆ ಮಾಡಿದರು.
ಬಿಡದಿ ಭಾಗದ ರೈತರ ಹೋರಾಟಕ್ಕೆ ನನ್ನ ಬೆಂಬಲ ಕೋರಿದ್ದಾರೆ. ಭಾನುವಾರ ಸಂಜೆ ಅನೇಕ ರೈತರು,ಹೆಣ್ಣು ಮಕ್ಕಳು ನನ್ನನ್ನು ಭೇಟಿಯಾಗಿ ದುಃಖ ತೋಡಿಕೊಂಡರು. ನನ್ನನ್ನ ರಾಜಕೀಯವಾಗಿ ಬೆಳೆಸಿದ ಜನರು ಅವರು. ಹೀಗಾಗಿ ಅವರಿಗೆ ಬೆಂಬಲ ಕೋಡೋದು ನನ್ನ ಕರ್ತವ್ಯ ಎಂದು ಸಚಿವರು ಹೇಳಿದರು.


