ಮನಸ್ಸಿನ ಕೊಳಕನ್ನು ಹೊರಗೆ ಹಾಕಿರುವ ನಿನಗೆ ರಕ್ಷಣೆ ಯಾಕೆ ಕೊಡಬೇಕು ಎಂದು ಯೂಟ್ಯೂಬರ್ ರಣವೀರ್ ಅಲ್ಲಾಬಾದಿಯಾಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ.
ಇಂಡಿಯಾ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದಲ್ಲಿ ಪೋಷಕರು ಸೆಕ್ಸ್ ಮಾಡುವುದನ್ನು ನೋಡಿದ್ದಿಯಾ ಎಂದು ಕೀಳುಮಟ್ಟದ ಜೋಕ್ ಮಾಡಿ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ಯೂಟ್ಯೂಬರ್ ರಣವೀರ್ ಅಲ್ಲಾಬಾದಿಯಾ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ತನಗೆ ಹಾಗೂ ತಮ್ಮ ಕುಟುಂಬಕ್ಕೆ ಮಹಾರಾಷ್ಟ್ರ ಮತ್ತು ಒಡಿಶಾ ಪೊಲೀಸರಿಂದ ಭದ್ರತೆ ಬೇಕು ಹಾಗೂ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಮ್ಮನ್ನು ಬಂಧಿಸದಂತೆ ತಡೆ ನೀಡಬೇಕು ಎಂದು ಕೋರಿ ರಣವೀರ್ ಅಲ್ಲಾಬಾದಿಯಾ ವಿರುದ್ಧ ಮೂರನೇ ದೂರು ದಾಖಲಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ನಿಮಗೆ ಸಾಮಾಜಿಕ ಮೌಲ್ಯಗಳ ಬಗ್ಗೆ ಎಷ್ಟು ಗೊತ್ತು? ಸಾಮಾಜಿಕ ಮೌಲ್ಯಗಳನ್ನು ಎಷ್ಟು ಅನುಸರಿಸಿದ್ದೀರಿ? ಜನಪ್ರಿಯ ವ್ಯಕ್ತಿ ಎಂಬ ಕಾರಣಕ್ಕೆ ಏನು ಬೇಕಾದರೂ ಬಹಿರಂಗವಾಗಿ ಮಾತನಾಡಬಹುದಾ ಎಂದು ಖಾರವಾಗಿ ಪ್ರಶ್ನಿಸಿತು.
ನೀವು ಆಸ್ಟ್ರೇಲಿಯಾದ ಪ್ರದರ್ಶನಗಳನ್ನು ನಕಲಿ ಮಾಡುತ್ತಿದ್ದೀರಿ ಎಂಬುದು ನಮಗೆ ಗೊತ್ತಿದೆ. ಅಲ್ಲಿ ಕೂಡ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಆದರೂ ನೀವು ಇಂತಹ ಕೀಳುಮಟ್ಟದ ಹೇಳಿಕೆ ನೀಡಿರುವುದು ನಿಮಗೆ ಸರಿ ಎನಿಸುತ್ತದೆಯೇ ಎಂದು ಪ್ರಶ್ನಿಸಿತು.
ಪ್ರಕರಣದ ಕುರಿತು ಸರ್ಕಾರದ ನಿಲುವು ಬಗ್ಗೆ ಪ್ರಶ್ನೆ ಕೇಳಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಸುಪ್ರೀಂಕೋರ್ಟ್, ವಿಚಾರಣೆ ನಡೆಯುತ್ತಿರುವುದರಿಂದ ರಣವೀರ್ ವಿರುದ್ಧ ಯಾವುದೇ ಹೊಸ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚಿಸಲಾಯಿತು. ಒಂದು ವೇಳೆ ಪ್ರಕರಣ ಅಥವಾ ಎಫ್ ಐಆರ್ ದಾಖಲಾದರೂ ಬಂಧಿಸುವಂತಿಲ್ಲ ಎಂದು ಹೇಳಿತು.