Wednesday, December 31, 2025
Menu

ಪೊಲೀಸ್‌ ವಿರುದ್ಧ ವಿಜಯಲಕ್ಷ್ಮೀ ಆರೋಪ: ಆಯುಕ್ತರು ಹೇಳಿದ್ದೇನು

darshan wife

“ಪೊಲೀಸರು ಕೇವಲ ಕೆಲವರಿಗಲ್ಲ, ಎಲ್ಲರಿಗಾಗಿಯೂ ಇದ್ದಾರೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವಿರುದ್ಧ ಮಾಡಿದ್ದ ಆರೋಪಕ್ಕೆ ಖಡಕ್‌ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಈಗಾಗಲೇ ಸಿಸಿಬಿ ಹಂತದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ ಆಯುಕ್ತರು, ‘ಈ ಕೇಸ್ ಮಾತ್ರವಲ್ಲ, ಪ್ರತಿಯೊಂದು ಕೇಸ್ ಅನ್ನು ನಾವು ಸಮಾನವಾಗಿ ನೋಡುತ್ತೇವೆ. ಡಿಸಿಪಿ ಹಂತದ ಅಧಿಕಾರಿಗಳೇ ನೇರವಾಗಿ ಈ ತನಿಖೆಯ ಉಸ್ತುವಾರಿ ವಹಿಸಿದ್ದಾರೆ. ಪೊಲೀಸರು ಜನರ ರಕ್ಷಣೆಗಾಗಿ ಇದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ತನಿಖೆ ವಿಳಂಬವಾಗುತ್ತಿದೆ, ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ವಿಜಯಲಕ್ಷ್ಮಿ ಅವರ ಪೋಸ್ಟ್ ಕುರಿತು ಮಾತನಾಡಿ, ಪ್ರಕರಣ ದಾಖಲಾದ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಆದರೆ ಕೆಲವು ಸೈಬರ್ ಅಥವಾ ತಾಂತ್ರಿಕ ಪ್ರಕರಣಗಳಲ್ಲಿ ತಕ್ಷಣಕ್ಕೆ ‘ಲೀಡ್’ ಸಿಗುವುದಿಲ್ಲ. ಲೀಡ್ ಸಿಗಲು ಸಮಯ ಬೇಕಾಗುತ್ತದೆ, ಬೇರೆ ಯಾವುದೇ ಉದ್ದೇಶ ತನಿಖೆಯ ಹಿಂದೆ ಇರುವುದಿಲ್ಲ. ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದರೆ ಅವರ ಮೇಲೂ ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ ಎಂದಿದ್ದಾರೆ.

ದೇಶದಲ್ಲಿ ವ್ಯವಸ್ಥೆ ಮತ್ತು ಕಾನೂನು ಎಲ್ಲರಿಗೂ ಒಂದೇ ಎಂದು ನಾನು ನಂಬಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಅನುಭವವು ಆ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ. ನಾನು ಸಲ್ಲಿಸಿದ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಬೇರೆ ಮಹಿಳೆ ನೀಡಿದ ಮತ್ತೊಂದು ದೂರಿನ ಮೇಲೆ ಒಂದು ದಿನದೊಳಗೆ ಕ್ರಮ ಕೈಗೊಳ್ಳಲಾಗಿದೆ. ನನ್ನ ವಕೀಲರು ನಿರಂತರವಾಗಿ ಪರಿಶೀಲನೆ ನಡೆಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಜಯಲಕ್ಷ್ಮೀ ಆರೋಪಿಸಿದ್ದಾರೆ.

ವಿಜಯಲಕ್ಷ್ಮೀ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ನಗರದ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಐಟಿ ಆಕ್ಟ್ ಹಾಗೂ ಬಿಎನ್ಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹಾಗೂ ನನ್ನ ಕುಟುಂಬದ ಗೌರವಕ್ಕೆ ಧಕ್ಕೆ ತರುವಂತೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲಾಗಿದೆ. ಕೆಲವು ನಕಲಿ ಖಾತೆಗಳನ್ನು ಸೃಷ್ಟಿಸಿ ಉದ್ದೇಶಪೂರ್ವಕವಾಗಿ ಕೆಟ್ಟ ಪದಗಳನ್ನು ಬಳಸಲಾಗಿದೆ. ಇದರಿಂದ ಸಮಾಜದಲ್ಲಿ ನಮಗೆ ಮುಜುಗರ ಉಂಟಾಗುತ್ತಿದೆ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ಬಾರಿ ವಿಜಯಲಕ್ಷ್ಮಿ ಅವರು ಕಚೇರಿಗೆ ಬಂದಾಗ ಆಯುಕ್ತರು ಭೇಟಿಗೆ ಲಭ್ಯವಿರಲಿಲ್ಲ. ಇಂದು ಅವರು ಆಯುಕ್ತರನ್ನು ಭೇಟಿ ಮಾಡಿ ಪ್ರಕರಣದ ವಿವರಗಳನ್ನು ಹಂಚಿಕೊಂಡಿದ್ದಾರೆ. ನಾನು ತಕ್ಷಣವೇ ತನಿಖಾಧಿಕಾರಿಯನ್ನು ಕರೆಸಿ ಮಾತಾಡಿದ್ದೇನೆ ಮತ್ತು ಪ್ರಕರಣದ ಪ್ರಗತಿಯ ಬಗ್ಗೆ ಸೂಚನೆ ನೀಡಿದ್ದೇನೆ ಎಂದು ಆಯುಕ್ತರು ಹೇಳಿದ್ದಾರೆ.

ದಾವಣೆಗೆರೆಯಲ್ಲಿ ನಡೆದ ‘ಡೆವಿಲ್’ ಸಿನಿಮಾದ ಸಕ್ಸಸ್ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಭಾಗವಹಿಸಿ ಪತಿ ದರ್ಶನ್ ಮತ್ತು ನಟನೆಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದರು. ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಅಭಿಮಾನಿ ಗಳಿಗೆ ಸಲಹೆ ನೀಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ನಕಲಿ ಖಾತೆಗಳ ಮೂಲಕ ವಿಜಯಲಕ್ಷ್ಮಿ ಹಾಗೂ ಅವರ ಕುಟುಂಬದ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದರು.

Related Posts

Leave a Reply

Your email address will not be published. Required fields are marked *