ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳ ಜಾಮೀನು ರದ್ದುಗೊಳಿಸಿ ಖಡಕ್ ವಾರ್ನ್ ಮಾಡಿದೆ. ಕೂಡಲೇ ಎಲ್ಲಾ ಆರೋಪಿಗಳು ಶರಣಾಗಬೇಕು ಎಂದು ಸೂಚಿಸಿದೆ. ದರ್ಶನ್‌ಗೆ ಜೈಲಿನಲ್ಲಿ ವಿಐಪಿ ಟ್ರೀಟ್‌ಮೆಂಟ್ ಕೊಟ್ಟರೆ ಹುಷಾರ್ ಎಂದು ಜೈಲಾಧಿಕಾರಿಗಳಿಗೆ ಕೋರ್ಟ್ ಎಚ್ಚರಿಕೆ ಕೊಟ್ಟಿದೆ. ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ನೀಡಿದೆ.
ಆರೋಪಿಗಳಿಗೆ ವಿಐಪಿ ಟ್ರೀಟ್‌ಮೆಂಟ್ ನೀಡಲಾಗುತ್ತಿದೆ ಎಂದು ತಿಳಿದ ದಿನವೇ ಜೈಲು ಸೂಪರಿಂಟೆಂಡೆಂಟ್ ಮತ್ತು ಇತರ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸಾಲಾಗುವುದು, ವಿಐಪಿ ಟ್ರೀಟ್‌ಮೆಂಟ್ ನೀಡುತ್ತಿರುವ ಪೋಟೊ ಅಥವಾ ವೀಡಿಯೊ ನೋಡಿದರೆ ಮೊದಲು ನಿಮ್ಮನ್ನು ಸಸ್ಪೆಂಡ್ ಮಾಡಲಾಗುತ್ತದೆ ಎಂದು ಕೋರ್ಟ್ ಹೇಳಿದೆ.
ತೀರ್ಪಿನ ಪ್ರತಿಯನ್ನು ಎಲ್ಲಾ ಹೈಕೋರ್ಟ್ ಮತ್ತು ರಾಜ್ಯ ಸರ್ಕಾರಗಳಿಗೆ ನೀಡುವಂತೆ ರಿಜಿಸ್ಟ್ರಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ನೀಡಿದೆ ಎಂದು ಸರ್ಕಾರದ ಪರ ವಕೀಲ ಚಿದಾನಂದ್ ಹೇಳಿದ್ದಾರೆ.
ಘೋರ ಕೃತ್ಯ ಎಸಗುವವರಿಗೆ ಇದು ದೊಡ್ಡ ಪಾಠ. ಹೈಕೋರ್ಟ್ ಈ ಪ್ರಕರಣವನ್ನು ಕ್ಷಲ್ಲಕ ಎಂಬಂತೆ ನೋಡಿತ್ತು. ತೀರ್ಪಿನ ಪ್ರತಿಯನ್ನು ಎಲ್ಲಾ ರಾಜ್ಯಗಳಿಗೆ ಹಂಚುವಂತೆ ನ್ಯಾಯಾಲಯ ಹೇಳಿದೆ, ಯಾಕೆಂದರೆ ಸುಪ್ರೀಂ ಕೋರ್ಟ್ ತೀರ್ಪು ದೇಶಕ್ಕೆ ಕಾನೂನಾಗಿದೆ. ಪ್ರಭಾವಿ ವ್ಯಕ್ತಿಗಳು ಅಪರಾಧ ಕೃತ್ಯ ಎಸಗಿದಾಗ ಜೈಲು ಅಧಿಕಾರಿಗಳು ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಕೋರ್ಟ್ ಹೇಳಿದೆ. ಇದಕ್ಕಾಗಿ ತೀರ್ಪು ಪ್ರತಿಯನ್ನು ಎಲ್ಲಾ ರಾಜ್ಯಗಳಿಗೂ ಹಂಚುವಂತೆ ಪೀಠ ಹೇಳಿದೆ ಎಂದರು.
ಈ ಆರೋಪಿಗಳಿಗೆ ಐಷಾರಾಮಿ ವ್ಯವಸ್ಥೆ ನೀಡಿದ್ದು ಗಮನಕ್ಕೆ ಬಂದರೆ ಕಠಿಣ ಕ್ರಮದ ಎಚ್ಚರಿಕೆಯನ್ನೂ ನ್ಯಾಯಾಲಯ ನೀಡಿದೆ. ದರ್ಶನ್ ಬೆನ್ನು ನೋವು ಎಂದು ಜಾಮೀನು ಪಡೆದು ಮಾರನೇ ದಿನವೇ 3 ಗಂಟೆ ಕೂತು ಸಿನಿಮಾ ನೋಡಿದ್ದಾರೆ. ಆರೋಪಿಗಳ ಪರ ವಕೀಲರು ಸಮಯ ಕೇಳಿಲ್ಲ. ಆದ್ದರಿಂದ ಇಂದೇ ಆರೋಪಿಗಳು ಶರಣಾಗಬೇಕಾಗುತ್ತದೆ ಎಂದು ಸರ್ಕಾರದ ಪರ ವಕೀಲರು ಮಾಧ್ಯಮಕ್ಕೆ ತಿಳಿಸಿದ್ದಾರೆ.