UPI ಬಳಕೆದಾರರ ಬ್ಯಾಲೆನ್ಸ್, ವಹಿವಾಟು ಪರಿಶೀಲನೆ ಮತ್ತು ಖಾತೆ ಪಟ್ಟಿ ಪ್ರವೇಶದ ಮೇಲೆ ಹೊಸ ನಿರ್ಬಂಧಗಳು ಜಾರಿಗೊಳ್ಳಲಿವೆ. ಎನ್‌ಪಿಸಿಐ ವ್ಯವಸ್ಥೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಈ ಬದಲಾವಣೆಗಳನ್ನು ಆಗಸ್ಟ್ 1ರಿಂದ ಜಾರಿಗೊಳಿಸುತ್ತಿದೆ.
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಎಲ್ಲಾ ಬ್ಯಾಂಕ್‌ಗಳು ಮತ್ತು ಪಾವತಿ ಅಪ್ಲಿಕೇಶನ್‌ಗಳಿಗೆ ಹೊಸ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್‌ಗಳ (ಎಪಿಐ) ಬಳಕೆಯ ನಿಯಮಗಳನ್ನು ಹೊರತರುತ್ತದೆ. ಯುಪಿಐ ಬಳಕೆದಾರರು ಕೆಲವು ನಿರ್ಬಂಧಗಳನ್ನು ಎದುರಿಸಬೇಕಾಗಬಹುದು. UPI ಅಪ್ಲಿಕೇಶನ್‌ನಲ್ಲಿ ದಿನಕ್ಕೆ 50 ಬಾರಿ ಮಾತ್ರ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ಸಾಧ್ಯವಾಗುತ್ತದೆ. ಎರಡು ಅಪ್ಲಿಕೇಶನ್‌ಗಳನ್ನು ಬಳಸಿದರೆ, ಪ್ರತಿಯೊಂದರಲ್ಲೂ 50 ಬ್ಯಾಲೆನ್ಸ್ ಚೆಕ್ ಮಾಡಬಹುದು. ಅದನ್ನು ಮೀರಿ ಅಪ್ಲಿಕೇಶನ್ ಬ್ಯಾಲೆನ್ಸ್ ಮಾಹಿತಿ ನೀಡುವುದಿಲ್ಲ. ನೆಟ್‌ವರ್ಕ್ ಸಮಸ್ಯೆ ಅಥವಾ ತಾಂತ್ರಿಕ ದೋಷದಿಂದಾಗಿ ಪಾವತಿ ವಿಫಲವಾದರೆ ಅಪ್ಲಿಕೇಶನ್ ಬಳಸಿ ಪದೇ ಪದೆ ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಸಿಸ್ಟಮ್ ಲೋಡ್ ಕಡಿಮೆ ಮಾಡಲು ಎನ್‌ಪಿಸಿಐ ಪುನರಾವರ್ತಿತ ಸ್ಟೇಟಸ್ ಚೆಕ್ ಅನ್ನು ನಿರ್ಬಂಧಿಸುತ್ತದೆ. ಅಕೌಂಟ್ ಲಿಸ್ಟ್‌ಗೆ 25 ಬಾರಿ ಮಾತ್ರವೇ ಎಂಟ್ರಿ ಅವಕಾಶವಿರುತ್ತದೆ.
ನಿಮ್ಮ ಮೊಬೈಲ್ ಸಂಖ್ಯೆಗೆ ಯಾವ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಲಾಗಿದೆ ಎಂದು ಪರಿಶೀಲಿಸಲು ಬಯಸಿದರೆ ಪ್ರತಿ ಅಪ್ಲಿಕೇಶನ್‌ಗೆ ದಿನಕ್ಕೆ 25 ಬಾರಿ ಮಾತ್ರ ಇದನ್ನು ಮಾಡಬಹುದು. ಬ್ಯಾಂಕ್ ಅನ್ನು ಆಯ್ಕೆ ಮಾಡಿ ಒಪ್ಪಿಗೆ ನೀಡಿದರೆ ಮಾತ್ರ ವಿನಂತಿಯು ಕಾರ್ಯ ನಿರ್ವಹಿಸುತ್ತದೆ.
ಎಲ್ಲಾ ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಪೂರೈಕೆದಾರರು ಬಳಕೆಯನ್ನು ಮೇಲ್ವಿಚಾರಣೆ ಮಾಡುವಂತೆ ಎನ್‌ಪಿಸಿಐ ನಿರ್ದೇಶಿಸಿದೆ. ಉಲ್ಲಂಘಿಸುವವರು ದಂಡ, ಬಳಕೆಯ ನಿರ್ಬಂಧಗಳು ಅಥವಾ ಹೊಸ ಬಳಕೆದಾರರನ್ನು ಸೇರಿಸಿಕೊಳ್ಳುವುದನ್ನು ನಿಷೇಧಿಸಬಹುದು. ಎಲ್ಲಾ ಪಾವತಿ ಸೇವಾ ಪೂರೈಕೆದಾರರು ಆಗಸ್ಟ್ 31, 2025 ರೊಳಗೆ ಸಿಸ್ಟಮ್ ಆಡಿಟ್ ಅಂಡರ್ಟೇಕಿಂಗ್ ಸಲ್ಲಿಸಬೇಕು ಎಂದು ಎನ್‌ಪಿಸಿಐ ಹೇಳಿದೆ.