Menu

ಮಂಡ್ಯಕ್ಕೆ ಕುಮಾರಸ್ವಾಮಿಯವರ ಕೊಡುಗೆಗಳೇನು: ಸಿಎಂ ಸಿದ್ದರಾಮಯ್ಯ

CM Siddaramaiah

ಅಹಿಂದ ವರ್ಗಗಳ ಸಂಘಟನೆಯಲ್ಲಿ ನನ್ನ ಕೊಡುಗೆಯಿದೆ, ಮಂಡ್ಯಕ್ಕೆ ಕುಮಾರಸ್ವಾಮಿಯವರ ಕೊಡುಗೆಗಳೇನು ಎಂದು ಅವರು ಸ್ಪಷ್ಟಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹಾಸನದಲ್ಲಿ ಮಾಧ್ಯಮದವರೊಂದಿಗೆ ಅವರು  ಮಾತನಾಡಿದರು. ಅಹಿಂದ ವರ್ಗಕ್ಕೆ ಸಿದ್ದರಾಮಯ್ಯನವರ ಕೊಡುಗೆಯ ಬಗ್ಗೆ ಪ್ರಶ್ನೆ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಅಹಿಂದ ವರ್ಗಗಳ ಸಂಘಟನೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದು, ಅವರಿಗೆ ಗ್ಯಾರಂಟಿ ಹಾಗೂ ಅನೇಕ ಭಾಗ್ಯಯೋಜನೆಗಳನ್ನು ನೀಡಿದ್ದೇವೆ. ಕಾರ್ಮಿಕರು, ಬಡವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಸಬಲೀಕರಣಕ್ಕೆ ಗ್ಯಾರಂಟಿ ಸೇರಿದಂತೆ ಅನೇಕ ಯೋಜನೆಗಳಿಂದ ಅನುಕೂಲವಾಗಿದೆ. ಕುಮಾರಸ್ವಾಮಿಯವರು ರೈತರ ಕುಟುಂಬದವರೇ ಹೊರತು, ರೈತವರ್ಗಕ್ಕೆ ಅವರ ಕೊಡುಗೆಗಳೇನಿದೆ? ಎಂದು ಪ್ರಶ್ನಿಸಿದರು.

ಸೆಪ್ಟೆಂಬರ್ ನಿಂದ ನವೆಂಬರ್ 2025ರವೆಗೆ ಕರ್ನಾಟಕಕ್ಕೆ ಜಿಎಸ್ ಟಿ ಸಂಗ್ರಹದಲ್ಲಿ ನಷ್ಟವಾಗಿದೆ. 2017 ರಲ್ಲಿ ಪ್ರಧಾನಿ ಮೋದಿಯವರು ಜಿಎಸ್ ಟಿ ಜಾರಿಗೆ ತಂದು, ಅಂದಿನಿಂದಲೂ ಜನರಿಂದ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಈಗ ಆರ್ಥಿಕ ವರ್ಷದ ಮಧ್ಯದಲ್ಲಿಯೇ ಜಿಎಸ್ ಟಿ ದರವನ್ನು ಕಡಿಮೆ ಮಾಡಿದ ಪರಿಣಾಮ, ರಾಜ್ಯ ಸರ್ಕಾರಗಳಿಗೆ ಜಿಎಸ್ ಟಿ ಸಂಗ್ರಹದಲ್ಲಿ ನಷ್ಟವಾಗಿದೆ. ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಹೊರತುಪಡಿಸಿ, ದೇಶದ ಎಲ್ಲಾ ರಾಜ್ಯಗಳಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಕೊರತೆ ಕಂಡಿದೆ ಎಂದರು.

ಜಿಎಸ್ ಟಿ ದರ ಕಡಿತದಿಂದ ರಾಜ್ಯಕ್ಕಾಗಿರುವ ನಷ್ಟದ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿಯರು ಇದುವರೆಗೂ ಧ್ವನಿ ಎತ್ತಿರುವುದಿಲ್ಲ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಕೇಂದ್ರ ವಿತ್ತಸಚಿವರು 5300 ಕೋಟಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಈ ಘೋಷಣೆಯಲ್ಲಿ ಹಿಂದಿನ ಸರ್ಕಾರದವರು ತಮ್ಮ ಆಯವ್ಯಯದಲ್ಲಿಯೂ ಉಲ್ಲೇಖಿಸಿದರು. ಆದರೆ ಇದುವರೆಗೆ ಕೇಂದ್ರದಿಂದ ಈ ಅನುದಾನವನ್ನು ಬಿಡುಗಡೆ ಮಾಡಿಲ್ಲ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ರಾಜ್ಯದ ಪ್ರಮುಖ ಯೋಜನೆಗೆ ಇದುವರೆಗೆ ಅನುಮತಿ ದೊರೆತಿಲ್ಲ. ಇದರಿಂದ ಮಂಡ್ಯ ಜನರಿಗೆ ಅನ್ಯಾಯವಾಗಿದೆ ಎಂದು ಹೇಳಿದರು.

ಟೀಕೆಗಳು ಸತ್ತುಹೋಗುತ್ತವೆ ಸಾಧನೆಗಳು ಉಳಿಯುತ್ತವೆ ಎಂದು ಹೇಳಬೇಕಾಗುತ್ತದೆ ಎಂದರು. ಜಿ.ಎಸ್. ಟಿ ನಲ್ಲಿ ನಮಗೆ ಈ ವರ್ಷ ಸುಮಾರು 12 ಸಾವಿರ ಕೋಟಿ ನಷ್ಟವಾಗಬಹುದೆಂಬ ಅಂದಾಜಿದೆ. 1 ಲಕ್ಷದ 26 ಕೋಟಿ ತೆರಿಗೆ ಬರಲಿದೆ ಎಂದು ಅಂದಾಜು ಮಾಡಿದ್ದೆವು. ಈಗ 12 ಸಾವಿರ ಕೋಟಿ ಅದರಲ್ಲಿ ಕಡಿಮೆಯಾಗಲಿದೆ. 88 ಸಾವಿರ ಕೋಟಿ ತಲುಪಲು ಕಷ್ಟವಾಗಲಿದೆ. ಇದನ್ನು ಏಕೆ ಪ್ರಶ್ನಿಸುವುದಿಲ್ಲ. ಕರ್ನಾಟಕದ ಮಂಡ್ಯದಿಂದ ಸಂಸದರಾಗಿದ್ದಾರಲ್ಲ. ಸಿದ್ದರಾಮಯ್ಯ ಅವರು ಅಹಿಂದಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಸಂಸತ್ತಿನಲ್ಲಿ ಎಂದಾದರೂ ಈ ಬಗ್ಗೆ ಮಾತನಾಡಿದ್ದಾರೆಯೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಟೀಕೆ ಮಾಡಲೆಂದೇ ಮಾತನಾಡುವುದಲ್ಲ. ನಾವು ಏನು ಮಾಡಿದ್ದೇವೆ ಎಂದು ಹೇಳುತ್ತೇವೆ. ಗ್ಯಾರಂಟಿ ಯೋಜನೆಗಳಿಗೆ 1ಲಕ್ಷದ 8135 ಕೋಟಿ ವೆಚ್ಚ ಮಾಡಿದ್ದೇವೆ. ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಹಾಕಿಲ್ಲ ಎಂದು ಹೇಳಲಿ ನೋಡೋಣ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಜಾರಿ ಮಾಡಿದರೆ ಕರ್ನಾಟಕ ರಾಜ್ಯ ದಿವಾಳಿಯಾಗಲಿದೆ ಎಂದಿದ್ದರು ಎಂದರು.

ಮಹಿಳಾ ಮೀಸಲಾತಿ ಜಾರಿಯಾಗಿಲ್ಲದಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿ ನಮ್ಮ ಸರ್ಕಾರ ಮೊದಲಿನಿಂದಲೂ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳಾ ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿಸು ವವರಲ್ಲಿ ನಾವು ಮುಂಚೂಣಿಯಲಿದ್ದೇವೆ. ಮೀಸಲಾತಿ ಕೊಡಬೇಕು ಎಂದರೆ ತಕ್ಷಣ ಕೊಡಬೇಕು. ಕೇಂದ್ರ ಸರ್ಕಾರ ಇದನ್ನು ಏಕೆ ಮುಂದೂಡಬೇಕು ಎಂದು ಪ್ರಶ್ನಿಸಿದರು.

ವಿರೋಧ ಪಕ್ಷಗಳನ್ನು ಅವಿಶ್ವಾಸ ನಿರ್ಣಯ ತರಲಿ, ನಾವು ಎದುರಿಸಲು ತಯಾರಿದ್ದೇವೆ. ನಾವು ತೆರೆದ ಪುಸ್ತಕ ಇದ್ದಂತೆ. ನಮ್ಮದು ಪಾರದರ್ಶಕ ಸರ್ಕಾರ. ಎಲ್ಲವನ್ನು ಎದುರಿಸಲು ತಯಾರಿದ್ದೇವೆ.  ಮಾನವ – ವನ್ಯಜೀವಿ ಸಂಘರ್ಷವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮಾನವ – ವನ್ಯಜೀವಿ ಸಂಘರ್ಷ ವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಾಧ್ಯಮಗಳವರ ಪ್ರಶ್ನೆಗಳಿಗೆ ಉತ್ತರಿಸಿದರು.

ಸಿದ್ದರಾಮಯ್ಯ ಇಲ್ಲದೇ ಕಾಂಗ್ರೆಸ್ ಇಲ್ಲ ಎಂದು ಮಾಜಿ ಸಚಿವ ಕೆ. ಎನ್.ರಾಜಣ್ಣ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ಅವರು ಹೇಳಿಕಿದ್ದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಚಿಕ್ಕಮಗಳೂರಿನಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆಯಾಗಿರುವ ಬಗ್ಗೆ ಮಾತನಾಡಿ ಈ ಬಗ್ಗೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ರಕ್ಷಣಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು. ನವೆಂಬರ್ ಕ್ರಾಂತಿಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಮ್ಮ ಪಕ್ಷದ ವರಿಷ್ಠರು ನಿರ್ಧಾರ ಮಾಡಿದಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.

Related Posts

Leave a Reply

Your email address will not be published. Required fields are marked *