ಆರಂಭಿಕ ಜಾನ್ ಕ್ಯಾಂಪ್ ಬೆಲ್ ಮತ್ತು ಶಾಯಿ ಹೋಪ್ ಅವರ ಶತಕಗಳ ನೆರವಿನಿಂದ ಹೋರಾಟ ನಡೆಸಿದ ವೆಸ್ಟ್ ಇಂಡೀಸ್ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಸೋಲಿನಿಂದ ಪಾರಾಗಿದ್ದು, ಭಾರತ 2-0ಯಿಂದ ಕ್ಲೀನ್ ಸ್ವೀಪ್ ಸಾಧನೆಯ ಹೊಸ್ತಿಲಲ್ಲಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 270 ರನ್ ಹಿನ್ನಡೆ ಅನುಭವಿಸಿದ್ದ ವೆಸ್ಟ್ ಇಂಡೀಸ್ ತಂಡ ಮೂರನೇ ದಿನವಾದ ಸೋಮವಾರ ಚಹಾ ವಿರಾಮದ ನಂತರ ಎರಡನೇ ಇನಿಂಗ್ಸ್ ನಲ್ಲಿ 390 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಗೆಲ್ಲಲು 121 ರನ್ ಗುರಿ ಪಡೆದಿದ್ದ ಭಾರತ ದಿನದಾಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದ್ದು, ಕೈಯಲ್ಲಿ 9 ವಿಕೆಟ್ ಹೊಂದಿರುವ ಭಾರತ ಎರಡು ದಿನಗಳ ಆಟದಲ್ಲಿ 58 ರನ್ ಗಳಿಸಬೇಕಾಗಿದೆ.
2 ವಿಕೆಟ್ ಗೆ 173 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ವೆಸ್ಟ್ ಇಂಡೀಸ್ ಜಾನ್ ಕ್ಯಾಂಪ್ ಬೆಲ್ ಮತ್ತು ಶಾಯಿ ಹೋಪ್ ಅವರ ಶತಕಗಳ ನೆರವಿನಿಂದ ಹೋರಾಟ ನಡೆಸಿತು.
ಕ್ಯಾಂಪ್ ಬೆಲ್ 199 ಎಸೆತಗಳಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 115 ರನ್ ಬಾರಿಸಿ ಔಟಾದರೆ, ಶಾಯಿ ಹೋಪ್ 214 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 103 ರನ್ ಸಿಡಿಸಿದರು. ಇವರಿಬ್ಬರು ಮೂರನೇ ವಿಕೆಟ್ ಗೆ 177 ರನ್ ಜೊತೆಯಾಟದಿಂದ ಹೋರಾಟ ನಡೆಸಿದರು.
ಇವರಿಬ್ಬರ ನಿರ್ಗಮನದ ನಂತರ ನಾಯಕ ರೋಸ್ಟನ್ ಚೇಸ್ 72 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 40 ರನ್ ಬಾರಿಸಿದರೆ, ಜಸ್ಟಿನ್ ಗ್ರೇವೆಸ್ 85 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 50 ರನ್ ಬಾರಿಸಿ ಔಟಾಗದೇ ಉಳಿದಿದ್ದೂ ಅಲ್ಲದೇ ಆತಿಥೇಯ ಭಾರತಕ್ಕೆ 100ಕ್ಕೂ ಅಧಿಕ ರನ್ ಗುರಿ ನೀಡುವಲ್ಲಿ ಯಶಸ್ವಿಯಾದರು.
ಭಾರತದ ಪರ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಜಸ್ ಪ್ರೀತ್ ಬುಮ್ರಾ ತಲಾ 3 ವಿಕೆಟ್ ಪಡೆದರು. ಮೊಹಮದ್ ಸಿರಾಜ್ 2 ವಿಕೆಟ್ ಗಳಿಸಿದರು.