Menu

ಭಾರತದಲ್ಲಿ ‘ವೆಗೋವಿ’ ಬಿಡುಗಡೆ: ಏನು, ಎತ್ತ

ಸೆಮಾಗ್ಲುಟೈಡ್‌ನಿಂದ ತಯಾರಾಗುವ ಜನಪ್ರಿಯ ತೂಕ ಇಳಿಕೆ ಔಷಧ ‘ವೆಗೋವಿ’ಯನ್ನು ಡ್ಯಾನಿಶ್ ಔಷಧ ಕಂಪನಿ ನೊವೊ ನಾರ್ಡಿಸ್ಕ್  ಭಾರತದಲ್ಲಿ ಬಿಡುಗಡೆ ಮಾಡಿದೆ. ಭಾರತದಲ್ಲಿ ದೀರ್ಘಕಾಲೀನ ತೂಕ ನಿರ್ವಹಣೆ ಮತ್ತು ಹೃದಯಾಘಾತದ ಅಪಾಯ ತಗ್ಗಿಸಲು ಅನುಮೋದನೆಗೊಂಡ ಮೊದಲ ಔಷಧ ಇದು ಎನ್ನಲಾಗಿದೆ.

ವೆಗೋವಿ ವಾರಕ್ಕೊಮ್ಮೆ ನೀಡಲಾಗುವ ಪ್ರಿಸ್ಕ್ರಿಪ್ಶನ್ ಇಂಜೆಕ್ಷನ್ ಆಗಿದ್ದು, ನೈಸರ್ಗಿಕ ಹಾರ್ಮೋನ್ ಜಿಎಲ್‌ಪಿ-1 (ಗ್ಲುಕಾಗನ್-ಲೈಕ್ ಪೆಪ್ಟೈಡ್-1) ಅನ್ನು ಅನುಕರಿಸುತ್ತದೆ. ಇದು ಹಸಿವು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಜೈವಿಕ ಕಾರ್ಯವಿಧಾನಗಳಿಂದ ಕಡಿಮೆ ಕ್ಯಾಲರಿಯ ಆಹಾರವನ್ನು ಅನುಸರಿಸಲು ನೆರವಾಗುತ್ತದೆ. ಆಹಾರ ಮತ್ತು ವ್ಯಾಯಾಮದೊಂದಿಗೆ ಸಂಯೋಜಿಸಿದಾಗ, ಒಂದು ವರ್ಷದಲ್ಲಿ (68 ವಾರಗಳು) ಸರಾಸರಿ 15% ತೂಕ ಇಳಿಕೆ ಸಾಧ್ಯವಾಗಿದ್ದು, ಮೂರನೇ ಒಂದು ಭಾಗದಷ್ಟು ಮಂದಿ 20% ವರೆಗೆ ತೂಕ ಕಳೆದುಕೊಂಡಿದ್ದಾರೆ ಎಂದು ಕ್ಲಿನಿಕಲ್ ಟ್ರಯಲ್‌ ತಿಳಿಸಿದೆ.

ನೊವೊ ನಾರ್ಡಿಸ್ಕ್‌ನ ಟೈಪ್ 2 ಡಯಾಬಿಟಿಸ್ ಔಷಧ ಓಜೆಂಪಿಕ್‌ನಲ್ಲಿಯೂ (ಭಾರತದಲ್ಲಿ ಲಭ್ಯವಿಲ್ಲ) ಬಳಸಲಾಗುತ್ತದೆ. ಓಜೆಂಪಿಕ್‌ಗಿಂತ ವೆಗೋವಿಯು ತೂಕ ನಿರ್ವಹಣೆಗಾಗಿ 2.4 ಮಿಗ್ರಾಂಗಿಂತ ಹೆಚ್ಚಿನ ಡೋಸ್‌ನ ಸೆಮಾಗ್ಲುಟೈಡ್‌ನ್ನು ಬಳಸುತ್ತದೆ. ವೆಗೋವಿಯು ಹೃದಯಾಘಾತ, ಸ್ಟ್ರೋಕ್, ಮತ್ತು ಹೃದಯ ಸಂಬಂಧಿ ಸಾವಿನ ಅಪಾಯವನ್ನು 20% ಕಡಿಮೆಗೊಳಿಸುತ್ತದೆ ಎಂದು ಕ್ಲಿನಿಕಲ್ ಟ್ರಯಲ್‌ಗಳು ತೋರಿಸಿವೆ.

ವೆಗೋವಿಯನ್ನು ವಾರಕ್ಕೊಮ್ಮೆ ಸ್ವಯಂ-ನಿರ್ವಹಿತ ಫ್ಲೆಕ್ಸ್‌ಟಚ್ ಪೆನ್‌ನಿಂದ ಚುಚ್ಚಿಕೊಳ್ಳಲಾಗುತ್ತದೆ, ಇದು ಸಿರಿಂಜ್‌ಗಳ ಅಗತ್ಯವಿಲ್ಲದೆ ಬಳಕೆಗೆ ಸುಲಭವಾಗಿದೆ. ಐದು ಡೋಸೇಜ್ ಸಾಮರ್ಥ್ಯಗಳಲ್ಲಿ ಲಭ್ಯವಿದೆ. ರೋಗಿಗಳು 0.25 ಮಿಗ್ರಾಂನಿಂದ ಆರಂಭಿಸಿ, ವೈದ್ಯರ ಮಾರ್ಗದರ್ಶನದಲ್ಲಿ ಕ್ರಮೇಣ 2.4 ಮಿಗ್ರಾಂಗೆ ಡೋಸ್‌ನ್ನು ಹೆಚ್ಚಿಸುತ್ತಾರೆ. ಈ ಔಷಧವನ್ನು ಹೊಟ್ಟೆ, ತೊಡೆ, ಅಥವಾ ಮೇಲ್ಭಾಗದ ಕೈಗೆ ಚುಚ್ಚಿಕೊಳ್ಳಬಹುದು, ಪ್ರತಿ ಬಾರಿ ಚುಚ್ಚುವ ಸ್ಥಳವನ್ನು ಬದಲಾಯಿಸಬೇಕು.

2023ರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್ ಅಧ್ಯಯನದ ಪ್ರಕಾರ, ಭಾರತವು ವಿಶ್ವದ ಮೂರನೇ ಅತಿ ಹೆಚ್ಚು ಬೊಜ್ಜು ಜನಸಂಖ್ಯೆಯನ್ನು ಹೊಂದಿದೆ, 254 ಮಿಲಿಯನ್ ಜನರು (29%) ಅಧಿಕ ತೂಕ ಅಥವಾ ಬೊಜ್ಜಿನಿಂದ ಬಳಲುತ್ತಿದ್ದಾರೆ. ಬೊಜ್ಜು ಕಾರಣಕ್ಕೆ ಹೃದಯರೋಗ, ಕೆಲವು ಕ್ಯಾನ್ಸರ್‌ಗಳು, ಟೈಪ್ 2 ಡಯಾಬಿಟಿಸ್ ಉಂಟಾಗುತ್ತವೆ. ವೆಗೋವಿಯ ಲಭ್ಯತೆಯು ಈ ಆರೋಗ್ಯ ಸವಾಲನ್ನು ಎದುರಿಸಲು ಮಹತ್ವದ ದಾರಿ ತೋರುತ್ತದೆ.

ವೆಗೋವಿಯ ಸಾಮಾನ್ಯ ದುಷ್ಪರಿಣಾಮಗಳೆಂದರೆ ವಾಕರಿಕೆ, ಕಿಬ್ಬೊಟ್ಟೆಯ ನೋವು, ಟೈಪ್-2 ಡಯಾಬಿಟಿಸ್ ರೋಗಿಗಳಲ್ಲಿ ಕಡಿಮೆ ರಕ್ತಸಕ್ಕರೆ, ಗ್ಯಾಸ್, ಹೊಟ್ಟೆ ಕಿರಿಕಿರಿ ಅಥವಾ ಗಂಟಲು ಕೆರತ ಕಾಣಿಸಿಬಹುದು. ಹಾಗಾಗಿ ಈ ಔಷಧವನ್ನು ವೈದಕೀಯ ಮೇಲ್ವಿಚಾರಣೆಯಲ್ಲೇ ತೆಗೆದುಕೊಳ್ಳುವುದು ಕಡ್ಡಾಯ. ವೆಗೋವಿಯ ಸೆಮಾಗ್ಲುಟೈಡ್‌ಗೆ ಪೇಟೆಂಟ್ 2026ರಲ್ಲಿ ಮುಕ್ತಾಯಗೊಳ್ಳಲಿದ್ದು, ಸನ್ ಫಾರ್ಮ, ಸಿಪ್ಲಾ, ಡಾ. ರೆಡ್ಡೀಸ್, ಮತ್ತು ಲುಪಿನ್‌ನಂತಹ ಭಾರತೀಯ ಕಂಪನಿಗಳು ಜನೆರಿಕ್ ಆವೃತ್ತಿಗಳನ್ನು ತಯಾರಿಸಲು ಸಿದ್ಧತೆ ನಡೆಸಿವೆ.

Related Posts

Leave a Reply

Your email address will not be published. Required fields are marked *