ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದ ವಧು ಶೃತಿ (32) ಅವರ ಮದುವೆ ನಾಳೆ ತರೀಕೆರೆಯಲ್ಲಿ ನಡೆಯಲು ಎಲ್ಲ ಸಿದ್ಧತೆ ಆಗಿತ್ತು, ಆದರೆ ಇಂದು ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನಾಳೆ ತರೀಕೆರೆ ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಶೃತಿ ಮತ್ತು ತರೀಕೆರೆಯ ದಿಲೀಪ್ ವಿವಾಹ ನಿಗದಿಯಾಗಿತ್ತು. ಎರಡೂ ಕುಟುಂಬಗಳು ಮದುವೆಯ ಸಿದ್ಧತೆಗಳಲ್ಲಿ ತೊಡಗಿದ್ದು, ಗುರುವಾರ ವಧು ಶೃತಿ ಅವರು ಮನೆಯಲ್ಲಿದ್ದಾಗ ಏಕಾಏಕಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಮಗಳ ಮದುವೆಯನ್ನು ಕಂಡು ಸಂತೋಷಿಸಲು ಸಿದ್ಧರಾಗಿದ್ದ ಮನೆಯ ಹಿರಿಯರ ದುಃಖ ಮುಗಿಲು ಮುಟ್ಟಿದೆ. ವರನ ಕುಟುಂಬ ಕೂಡ ಸುದ್ದಿ ಕೇಳಿ ತೀವ್ರ ದುಃಖ ವ್ಯಕ್ತಪಡಿಸಿದೆ.
ಇತ್ತೀಚಿನ ದಿನಗಳಲ್ಲಿ ಯಾವುದೇ ವಯಸ್ಸು, ಲಿಂಗಬೇಧವಿಲ್ಲದೆ ಮಕ್ಕಳು, ಯುವಕ ಯುವತಿಯರು, ವೃದ್ಧರೆನ್ನದೆ ಬಹಳಷ್ಟು ಮಂದಿ ಹಠಾತ್ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಒಂದೆಡೆ ಕೋವಿಡ್ ವ್ಯಾಕ್ಸಿನ್ ಅಡ್ಡಪರಿಣಾಮ ಇರಬಹುದೆಂಬ ಚರ್ಚೆ ನಡೆಯುತ್ತಿದ್ದು, ಮತ್ತೊಂದೆಡೆ ಆಹಾರ ಮತ್ತು ಜೀವನಶೈಲಿ ಕಾರಣ ಎಂದು ಹೇಳಲಾಗುತ್ತಿದೆ.


