Saturday, September 20, 2025
Menu

ಎಲ್ಲಾ ಗೊಂದಲ ಸರಿಪಡಿಸಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತೇವೆ: ಡಿಕೆ ಶಿವಕುಮಾರ್

“ಎಲ್ಲಾ ಗೊಂದಲ ಸರಿಪಡಿಸಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಸಾಮಾಜಿಕ ನ್ಯಾಯ ಒದಗಿಸುತ್ತೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.

ರಾಮನಗರದಲ್ಲಿ ನಡೆದ ಮಾಜಿ ಸಿಎಂ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಶಿವಕುಮಾರ್ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಜಾತಿಗಣತಿ ವಿಚಾರವಾಗಿ ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗುತ್ತಿವೆ ಎಂದು ಕೇಳಿದಾಗ, “ಬಿಜೆಪಿ ಹಾಗೂ ಬೇರೆ ಪಕ್ಷದವರು ಷಡ್ಯಂತ್ರ ರೂಪಿಸಿ, ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ. ಜಾತಿಗಳ ಪಟ್ಟಿಯಲ್ಲಿ ಅಕ್ಷರಗಳ ಆಧಾರದ ಮೇಲೆ ಸಮುದಾಯಗಳನ್ನು ಪಟ್ಟಿ ಮಾಡಲಾಗಿದೆ. ಪ್ರತಿ ಮನೆ ಮನೆಗೆ ಹೋಗಿ, ಎಲ್ಲರ ಮಾಹಿತಿ ಸಂಗ್ರಹಿಸುತ್ತೇವೆ.” ಎಂದು ತಿಳಿಸಿದರು.

ಮೇಲ್ಮನೆ ಮಾಜಿ ಸಭಾಪತಿ ಸುದರ್ಶನ್ ಅವರು ತಮ್ಮ ಭಾಷಣದಲ್ಲಿ ನಿಮಗೆ ಕೆಲವು ಸಲಹೆ ನೀಡಿದ್ದಾರಲ್ಲ ಎಂದು ಕೇಳಿದಾಗ, “ಅವರು ಸಲಹೆ ನೀಡಿದ್ದು, ಹಿಂದುಳಿದ ವರ್ಗಗಳ ಆಯೋಗಕ್ಕೆ ನಿಮ್ಮ ಸಲಹೆಯನ್ನು ತಿಳಿಸಿ ಎಂದು ಅವರಿಗೆ ಹೇಳಿದ್ದೇವೆ. ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ನಾವು ಈ ವಿಚಾರವಾಗಿ ಚರ್ಚೆ ಮಾಡುತ್ತೇವೆ” ಎಂದರು.

ಈ ದೇಶದ ಬಡವರು, ಹಿಂದುಳಿದ ವರ್ಗದವರ ಪರವಾಗಿ ಕೆಲಸ ಮಾಡಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ಒಬಿಸಿಗಳ ಏಳಿಗೆಗಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ನಿಮ್ಮ ಜಾತಿಯನ್ನು ಸರಿಯಾದ ರೀತಿಯಲ್ಲಿ ಎಲ್ಲರೂ ಬರೆಸಬೇಕು ಎಂದು ಮನವಿ ಮಾಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್ ಎಂ ರೇವಣ್ಣ, ವಿಧಾನ ಪರಿಷತ್ ಮಾಜಿ ಸ್ಪೀಕರ್ ವಿ ಆರ್ ಸುದರ್ಶನ್, ಎಂಎಲ್ಸಿ ಎಸ್ ರವಿ, ನಗರಸಭೆ ಅಧ್ಯಕ್ಷ ಶೇಷಾದ್ರಿ, ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಅಧ್ಯಕ್ಷ ಗಾಣಕಲ್ ನಟರಾಜ್, ಮಾಜಿ ಶಾಸಕ ರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *