Saturday, December 13, 2025
Menu

ಯಾರೇ ವಿರೋಧಿಸಿದರೂ ಟನಲ್ ರಸ್ತೆ ಮಾಡಿಯೇ ಮಾಡುತ್ತೇವೆ: ಡಿಕೆ ಶಿವಕುಮಾರ್

dcm

ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸಾಕಷ್ಟು ಅಧ್ಯಯನ ನಡೆಸಿದ ನಂತರ ಟನಲ್ ರಸ್ತೆ ಉತ್ತಮ ಆಯ್ಕೆಯಾಗಿದೆ. ಯಾರು ಎಷ್ಟೇ ವಿರೋಧಿಸಿದರೂ ಟನಲ್ ರಸ್ತೆಗಳನ್ನು ಮಾಡಿಯೇ ಸಿದ್ದ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಕುರಿತು ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳ ಪ್ರತಿನಿಧಿಗಳೊಂದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶನಿವಾರ ಸಂವಾದ ನಡೆಸಿ ಮಾತನಾಡಿದರು.

ಬಹಳ ಉತ್ಸಾಹದಿಂದ ಬೆಂಗಳೂರು ನಗರದ ಇಲಾಖೆ ಜವಾಬ್ದಾರಿ ವಹಿಸಿಕೊಂಡೆ. ಬೆಂಗಳೂರಿನಲ್ಲಿ ಬದಲಾವಣೆ ತರಬೇಕು, ನನ್ನ ಕೆಲಸಗಳ ಮೂಲಕ ನನ್ನ ಹೆಸರು ಶಾಶ್ವತವಾಗಿ ಉಳಿಯಬೇಕು, ಶಾಶ್ವತ ಹೆಜ್ಜೆ ಗುರುತು ಬಿಟ್ಟು ಹೋಗುವ ಆಸೆ ನನಗೆ ಇದೆ. ಬೆಂಗಳೂರಿನ ಸಮಸ್ಯೆ ನಿವಾರಿಸಿ, ನಗರದ ಸ್ವರೂಪ ಬದಲಿಸಲು, ಅನೇಕ ಯೋಜನೆ ಕೈಗೊಂಡಿದ್ದೇವೆ ಎಂದರು.

ಸುದೀರ್ಘ ಅಧ್ಯಯನ ಮಾಡಿ 2 ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇನೆ, 130 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಅನ್ನು 26 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದೇವೆ. ಯಾರು ಏನೇ ಟೀಕೆ ಮಾಡಿದರೂ ನಾವು ಈ ಯೋಜನೆ ಮಾಡೇ ಮಾಡುತ್ತೇವೆ. ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು ಈ ಯೋಜನೆ ಮುಂದುವರಿಸುವಂತೆ ನನಗೆ ತಿಳಿಸಿದ್ದಾರ ಎಂದು ಅವರು ಹೇಳಿದರು.

ರಸ್ತೆ ಅಗಲೀಕರಣಕ್ಕೆ ನಾವು ಯಾವುದೇ ಕಟ್ಟಡ ಕೆಡವಲು ಆಗುವುದಿಲ್ಲ. 2013ರ ಕಾಯ್ದೆ ಅನುಸಾರ ಆಸ್ತಿ ಮೌಲ್ಯದ ದುಪ್ಪಟ್ಟು ಪರಿಹಾರ ನೀಡಬೇಕು. ಈಗ ಬೆಂಗಳೂರಿನ ಆಸ್ತಿ ಮೌಲ್ಯ ಹೆಚ್ಚಾಗಿದೆ. ಟನಲ್ ಯೋಜನೆ ಜೊತೆಗೆ 40 ಕಿ.ಮೀ ಡಬಲ್ ಡೆಕ್ಕರ್ ಮೆಲ್ಸೇತುವೆ, ಭಾರತದಲ್ಲಿ ಅತಿ ದೊಡ್ಡ ಡಬಲ್ ಡೆಕ್ಕರ್ ಆಗಲಿದೆ. 117 ಕಿ.ಮೀ ಹೊಸ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 300 ಕಿ.ಮೀ ನಷ್ಟು ಬಫರ್ ರಸ್ತೆ ನಿರ್ಮಾಣ ಮಾಡುತ್ತಿದ್ದೇವೆ ಎಂದು ಅವರು ನುಡಿದರು.

50×80 ವಿಸ್ತೀರ್ಣದವರೆಗಿನ ನಿವೇಶನದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವವರಿಗೆ ಕಟ್ಟಡ ನಕ್ಷೆ ಸುಲಭವಾಗಿ ಅನುಮತಿ ಸಿಗುವಂತೆ ಮಾಡಲು ನಂಬಿಕೆ ನಕ್ಷೆ ಯೋಜನೆ ಜಾರಿಗೆ ತಂದಿದ್ದೇವೆ. ಪ್ರೀಮಿಯಮ್ ಎಫ್ಎಆರ್ ಜಾರಿಗೆ ತರಲಾಗಿದೆ. ಇ ಖಾತಾ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ. ಹೀಗೆ ಬೆಂಗಳೂರಿನ ಪ್ರಗತಿಗೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕೆ ಸಮಯದ ಅಗತ್ಯವಿದೆ. ಒಂದೇ ದಿನದಲ್ಲಿ ಮ್ಯಾಜಿಕ್ ಮಾಡಲು ಆಗುವುದಿಲ್ಲ. ಇದಕ್ಕೆ ನಿರಂತರ ಪರಿಶ್ರಮ, ಬದ್ಧತೆ, ತಾಳ್ಮೆ ಇರಬೇಕು ಎಂದು ಅವರು ಹೇಳಿದರು.

ಈ ಸರ್ಕಾರ ಅಪಾರ್ಟ್ಮೆಂಟ್ ನಿವಾಸಿಗಳು ಹಾಗೂ ಮನೆ ಖರೀದಿದಾರರ ಪರವಾಗಿ ನಿಲ್ಲುತ್ತದೆ. ಈ ಕಾರಣಕ್ಕೆ ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ ವಿಧೇಯಕ 2025ಕ್ಕೆ ಸಂಬಂಧಿಸಿದಂತೆ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಯಾರೆಲ್ಲಾ ಈ ಸಂವಾದ ಕಾರ್ಯಕ್ರಮದಲ್ಲಿ ನಿಮ್ಮ ಸಲಹೆ ನೀಡಲು ಸಾಧ್ಯವಾಗಿಲ್ಲವೋ ಅವರುಗಳು gbasuggesion@gmail.com ಗೆ ನಿಮ್ಮ ಮೇಲ್ ಮಾಡಬಹುದಾಗಿದೆ. 10 ದಿನಗಳಲ್ಲಿ ನಿಮ್ಮ ಸಲಹೆ ಕಳುಹಿಸಿ. ನಾನು ಎಲ್ಲವನ್ನು ಪರಿಶೀಲಿಸುತ್ತೇನೆ. ನಿಮ್ಮ ಸಲಹೆ, ಸಮಸ್ಯೆಗಳನ್ನು ನಾನು ಆಲಿಸಿದ್ದೇನೆ. ನಿಮ್ಮ ಸಲಹೆಗಳು ಅತ್ಯುತ್ತಮವಾಗಿವೆ. ನಿಮ್ಮ ಸಮಸ್ಯೆಗಳ ಬಗ್ಗೆ ಅರಿವಿದೆ. ನಾನೂ ಅಪಾರ್ಟ್ ಮೆಂಟ್ ಗಳನ್ನು ಹೊಂದಿದ್ದೇನೆ. ನಿಮ್ಮ ಜೊತೆ ನಿಂತು, ಸಮಸ್ಯೆ ಪರಿಹರಿಸಲು ಬದ್ಧನಾಗಿದ್ದೇನೆ. ಈ ಸರ್ಕಾರ ನನ್ನದಲ್ಲ, ನಿಮ್ಮದು ಎಂದು ತಿಳಿಸಿದರು.

ಜಿಬಿಎ ಚುನಾವಣೆಯಲ್ಲಿ ನಿಮ್ಮ ಸಹಾಯ ಬಯಸುತ್ತೇನೆ:

“ನಾನು ನಿಮಗೆ ಸಹಾಯ ಮಾಡುವುದರ ಜೊತೆಗೆ ನಿಮ್ಮ ಸಹಾಯವನ್ನು ಮತಗಳ ಮೂಲಕ ಬಯಸುತ್ತೇನೆ. ಜಿಬಿಎ ಚುನಾವಣೆಯಲ್ಲಿ ನೀವು ನಮ್ಮ ಜತೆ ನಿಲ್ಲಿ ಎಂದು ಕೋರುತ್ತೇನೆ. ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇನೆ. ಅದಕ್ಕಾಗಿ ಯಾರೂ ಜಾರಿಗೆ ತರದ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದೇನೆ. ನನಗೆ ನಿರಾಸೆ ಮಾಡಬೇಡಿ” ಎಂದು ತಿಳಿಸಿದರು.
ಬೆಂಗಳೂರು ದೊಡ್ಡದಾಗಿ ಬೆಳೆದಿದೆ:

“ಬೆಂಗಳೂರು ಬಹಳ ದೊಡ್ಡದಾಗಿ ಬೆಳೆದಿದ್ದು, ಉತ್ತಮ ಆಡಳಿತ ನೀಡಬೇಕು ಎಂಬ ಉದ್ದೇಶದಿಂದ ಜಿಬಿಎ ರಚನೆ ಮಾಡಿದ್ದೇವೆ. ಅನೇಕ ಪರ ವಿರೋಧದ ನಡುವೆ ಇದನ್ನು ಜಾರಿಗೆ ತಂದಿದ್ದೇವೆ. 25 ವರ್ಷಗಳ ಹಿಂದೆ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಈಗ ಅದು 1.40 ಕೋಟಿಗೆ ಏರಿಕೆಯಾಗಿದೆ. ನಿತ್ಯ 3 ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. ನಗರದಲ್ಲಿ ವಾಹನಗಳ ಸಂಖ್ಯೆ 1.30 ಕೋಟಿ ಇದೆ” ಎಂದರು.

ಬೆಂಗಳೂರಿನ ಜನಸಂಖ್ಯೆಯಲ್ಲಿ 19% ಜನ ಅಪಾರ್ಟ್ಮೆಂಟ್ ನಿವಾಸಿಗಳಾಗಿದ್ದಾರೆ.  ಇಂದು ಇಡೀ ವಿಶ್ವ ಬೆಂಗಳೂರಿನತ್ತ ತಿರುಗಿ ನೋಡುತ್ತಿದೆ ಎಂದು ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ಬೆಂಗಳೂರು ಅತ್ಯುತ್ತಮ ಹವಾಮಾನ, ಸಂಸ್ಕೃತಿ ಹೊಂದಿದೆ. ಬೆಂಗಳೂರಿನಲ್ಲಿ 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಇದ್ದಾರೆ. ಕ್ಯಾಲಿಫೋರ್ನಿಯದಲ್ಲಿ 13 ಲಕ್ಷ ಐಟಿ ವೃತ್ತಿಪರರು ಇದ್ದರೆ ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು ಇದ್ದಾರೆ. ಇದರಲ್ಲಿ ಬಹುತೇಕರು ನಿಮ್ಮ ಅಪಾರ್ಟ್ ಮೆಂಟ್ ನಲ್ಲಿ ಇದ್ದಾರೆ ಎಂದು ಹೇಳಿದರು.

1972ರಲ್ಲಿ ಅಪಾರ್ಟ್ಮೆಂಟ್ ಕಾಯ್ದೆ ಬಂದ ನಂತರ ಮತ್ತೆ ಯಾವುದೇ ಸರ್ಕಾರಗಳು ಅಪಾರ್ಟ್ಮೆಂಟ್ ಗಳಿಗೆ ಶಕ್ತಿ ತುಂಬಲಿಲ್ಲ. ಬೆಂಗಳೂರು ಪೂರ್ವನಿಯೋಜಿತ ನಗರವಲ್ಲ. ಆದರೂ ಭವಿಷ್ಯದ ದೃಷ್ಟಿಯಿಂದ ನಾವು ಉತ್ತಮ ಯೋಜನೆ ರೂಪಿಸಬೇಕು. ಕೆಂಪೇಗೌಡ, ಕೆಂಗಲ್ ಹನುಮಂತಯ್ಯ, ಎಸ್.ಎಂ ಕೃಷ್ಣ ಅವರು ಬೆಂಗಳೂರಿನ ಮೂವರು ಪ್ರಮುಖ ವ್ಯಕ್ತಿಗಳು. ಹೈದರಾಬಾದ್ ನಲ್ಲಿ 30 ಸಾವಿರ ಎಕರೆಯಲ್ಲಿ ಭವಿಷ್ಯದ ನಗರ ನಿರ್ಮಾಣ ಮಾಡುಟ್ಟುದ್ದಾರೆ. ನಮ್ಮಲ್ಲಿ ಬಿಡದಿ, ನಂದಗುಡಿ ಹಾಗೂ ಸೋಲೂರಿನಲ್ಲಿ ನೂತನ ನಗರ ನಿರ್ಮಾಣ ಮಾಡುತ್ತಿದ್ದೇವೆ. ಬೆಂಗಳೂರಿನ ಮೇಲಿರುವ ಒತ್ತಡ ಇಳಿಸಬೇಕು. ನಾವು ಬೆಂಗಳೂರಿಗೆ ಬರುವ ಜನರು ಹಾಗೂ ಜನರ ವಾಹನ ಖರೀದಿ ತಡೆಯಲು ಆಗುವುದಿಲ್ಲ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *