ಬಿಕೆನಾರ್: ಏ.22ರ ಪೆಹಲ್ಗಾಮ್ ದಾಳಿಗೆ ಕೇವಲ 22 ನಿಮಿಷದಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಸ್ಥಾನ್ ಬಿಕೆನಾರ್ ನಲ್ಲಿ ಗುರುವಾರ ಬಿಕೆನಾರ್- ಮುಂಬೈ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಉಗ್ರರು 26 ಪ್ರವಾಸಿಗರನ್ನು ಹತ್ಯೆಗೈದಿದ್ದಕ್ಕೆ ಆಪರೇಷನ್ ಸಿಂಧೂರ್ ಮೂಲಕ ಕೇವಲ 22 ನಿಮಿಷದಲ್ಲಿ ಪ್ರತೀಕಾರ ತೀರಿಸಿಕೊಳ್ಳಲಾಗಿದೆ ಎಂದರು.
ಪಾಕಿಸ್ತಾನದಲ್ಲಿ ಉಗ್ರರ 9 ಪ್ರಮುಖ ನೆಲೆಗಳನ್ನು ಕೇವಲ 22 ನಿಮಿಷದಲ್ಲಿ ದಾಳಿ ಮಾಡಿ ನೆಲಸಮಗೊಳಿಸುವ ಮೂಲಕ ಪ್ರತೀಕಾರ ಕೈಗೊಳ್ಳಲಾಗಿದೆ. ಭಾರತದ ಶಕ್ತಿ ಏನೆಂದು ಜಗತ್ತು ಹಾಗೂ ನಮ್ಮ ದೇಶ ಕೂಡ ನೋಡಿತು ಎಂದು ಅವರು ಹೇಳಿದರು.
ಪಾಕಿಸ್ತಾನ ಉಗ್ರರಿಗೆ ನೀಡುತ್ತಿರುವ ಸಹಕಾರ ನಿಲ್ಲಿಸುವವರೆಗೂ ಯಾವುದೇ ಮಾತುಕತೆ ನಡೆಸುವುದಿಲ್ಲ. ಪೆಹಲ್ಗಾಮ್ ದಾಳಿಯಿಂದ ನನ್ನ ರಕ್ತ ಮಾತ್ರ ಕುದಿಯಲಿಲ್ಲ. ನರ ನಾಡಿಗಳು ಕುದಿಯಿತು ಎಂದು ಮೋದಿ ಹೇಳಿದರು.
ಉಗ್ರರ ವಿರುದ್ಧದ ಹೋರಾಟದಲ್ಲಿ ಇಡೀ ದೇಶ ಒಂದಾಗಿತ್ತು. ಉಗ್ರರು ಪೆಹಲ್ಗಾಮ್ ದಾಳಿ ಮೂಲಕ 140 ಕೋಟಿ ಜನರನ್ನು ಕೆಣಕಿದರು. ನಾವು ಉಗ್ರರ ಹೃದಯಕ್ಕೆ ಹೊಡೆದಿದ್ದೇವೆ. ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಲು ನಮ್ಮ ಭಾರತೀಯ ಸೇನೆಗೆ ಪೂರ್ಣ ಅಧಿಕಾರ ನೀಡಿದ್ದೆವು ಎಂದು ಅವರು ವಿವರಿಸಿದರು.