Thursday, October 30, 2025
Menu

ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಸಿಎಂ ಲೇವಡಿ

“ಶ್ರೀರಾಮುಲು ಅವರು ಕಾಂಗ್ರೆಸ್ ಪಕ್ಷಕ್ಕೆ ಹಣ ನೀಡಿದ್ದು, ಅದನ್ನೇ ನಾವು ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ” ಎಂದು  ಡಿಸಿಎಂ ಡಿಕೆ ಶಿವಕುಮಾರ್‌ ಲೇವಡಿ ಮಾಡಿದರು. ಬಿಹಾರ ಚುನಾವಣೆಗೆ ಸಿಎಂ, ಡಿಸಿಎಂ 300 ಕೋಟಿ ರೂ. ಕಪ್ಪ ಕಾಣಿಕೆ ನೀಡಿದ್ದಾರೆ ಎಂಬ ಶ್ರೀರಾಮುಲು ಹೇಳಿಕೆ ಬಗ್ಗೆ ಕೇಳಿದಾಗ ಹೀಗೆ ತಿರುಗೇಟು ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್  ಪ್ರತಿಕ್ರಿಯೆ ನೀಡಿದರು.”ಬಿಜೆಪಿ ನಾಯಕರಿಗೆ ಬೆಂಗಳೂರು ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ಅವರ ಕಾಲದಲ್ಲಿ ಬೆಂಗಳೂರು ಅಭಿವೃದ್ಧಿಗೆ ಏನು ಮಾಡಿದ್ದಾರೆ?” ಎಂದು  ಪ್ರಶ್ನಿಸಿದರು.

ಟನಲ್ ರಸ್ತೆ ಮಾಡಲು ಬಿಡುವುದಿಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಈ ವಿಚಾರದಲ್ಲಿ ತಾಂತ್ರಿಕ ತಜ್ಞ ಅಲ್ಲ. ಅವರೂ ತಜ್ಞರಲ್ಲ. ಅದಕ್ಕಾಗಿಯೇ ಪ್ರತ್ಯೇಕ ತಾಂತ್ರಿಕ ತಜ್ಞರ ತಂಡವೇ ಇದೆ. ಅವರು ನಗರ ರೈಲು ಯೋಜನೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಅದನ್ನು ಮಾಡಲಿ, ಅದರಲ್ಲಿ ತಪ್ಪೇನು ಇಲ್ಲ. ಇದಕ್ಕೆ ಅಗತ್ಯವಾದ ಅನುದಾನವನ್ನು ಕೇಂದ್ರ ಸರ್ಕಾರದಿಂದ ಕೊಡಿಸಲಿ. ನಮ್ಮದೇ ರಾಜ್ಯದ ಸೋಮಣ್ಣ ಅವರು ಕೇಂದ್ರ ಸಚಿವರಾಗಿದ್ದಾರೆ. ಅವರ ನೆರವು ಪಡೆಯಲಿ, ಏನು ಬೇಕಾದರೂ ಮಾಡಲಿ. ಆವರು ಹೋರಾಟ ಮಾಡುವುದಾದರೆ ಮಾಡಲಿ, ಬೇಡ ಎಂದು ಹೇಳಿದವರು ಯಾರು? ಬಿಜೆಪಿಯಲ್ಲಿ ತೇಜಸ್ವಿ ಸೂರ್ಯ ಹಾಗೂ ಅಶೋಕ್ ಹೊರತಾಗಿ ಉಳಿದ ಯಾವುದೇ ನಾಯಕರು ಮಾತನಾಡುತ್ತಿಲ್ಲ” ಎಂದು ತಿಳಿಸಿದರು.

ಸ್ಟೀಲ್ ಬ್ರಿಡ್ಜ್ ಮಾದರಿಯಲ್ಲೇ ಟನಲ್ ರಸ್ತೆ ಯೋಜನೆ ಮುರಿದು ಬೀಳುತ್ತಾ ಎಂದು ಕೇಳಿದಾಗ, “ನಾವು ನಮ್ಮ ಕೆಲಸ ಮಾಡುತ್ತೇವೆ. ನಮ್ಮ ಆಸಕ್ತಿ ನೋಡಿ ಜನರು ನಮ್ಮ ಪ್ರಯತ್ನಕ್ಕೆ ಬೆಂಬಲ ನೀಡುತ್ತಿದ್ದಾರೆ. ನಮ್ಮ ಕೆಲಸ ಅನುಷ್ಠಾನ ಆಗಲಿದೆ ಎಂಬ ವಿಶ್ವಾಸ ಇದೆ” ಎಂದರು.

ನವೆಂಬರ್ ಕ್ರಾಂತಿ, ಸಿಎಂ ಬದಲಾವಣೆ, ದಲಿತ ಸಿಎಂ ವಿಚಾರವಾಗಿ ಸಚಿವರ ಚರ್ಚೆ ಬಗ್ಗೆ ಕೇಳಿದಾಗ, “ಅನಗತ್ಯ ಮಾತನಾಡಿ ದಣಿವಾಗುವುದು ಬೇಡ ಎಂದು ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮೇಲ್ಮನೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಭೆ ಬಗ್ಗೆ ಮಾತನಾಡಿ, “ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದಲ್ಲಿ ಐದಾರು ಮಂದಿ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. 8-10 ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. ಮುಂದಿನ ಸಭೆಯಲ್ಲಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚೆ ಮಾಡಿ ಅಭಿಪ್ರಾಯ ಪಡೆಯುತ್ತೇವೆ” ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ಇದೇ ತಿಂಗಳು 20ರಂದು ರಾಜ್ಯಕ್ಕೆ ಭೇಟಿ ನೀಡಿ ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆ ಮಾಡಲಿದ್ದಾರೆಯೇ ಎಂದು ಕೇಳಿದಾಗ, ‘ಇನ್ನೂ ದಿನಾಂಕ ಅಂತಿಮವಾಗಿಲ್ಲ. ನಾನು ಮನವಿ ಸಲ್ಲಿಸಿದ್ದೇನೆ. ಕಚೇರಿ ನಿರ್ಮಾಣ ಜಾಗದ ಕಾಗದ ಪತ್ರ ಸಿದ್ಧವಾಗುತ್ತಿದೆ. ಈ ಕಚೇರಿ ನಿರ್ಮಾಣ ವಿಚಾರದಲ್ಲಿ ಸಚಿವರು, ಸಂಸದರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಯಾರ್ಯಾರು ಆಸಕ್ತಿ ತೋರಿದ್ದಾರೆ, ಯಾರು ತೋರಿಲ್ಲ ಎಂದು ವರದಿ ನೀಡುವಂತೆ ಹೈಕಮಾಂಡ್ ನಾಯಕರು ಕೇಳಿದ್ದಾರೆ. ನಾನು ವರದಿ ಸಿದ್ಧಪಡಿಸುತ್ತಿದ್ದು, ಅದನ್ನು ಕಳುಹಿಸಬೇಕು. ಆನಂತರ ಆವರು ದಿನಾಂಕ ನಿಗದಿ ಮಾಡುತ್ತಾರೆ” ಎಂದು ವಿವರಿಸಿದರು.

Related Posts

Leave a Reply

Your email address will not be published. Required fields are marked *