ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾರತ 9 ಗುರಿಗಳ ಮೇಲೆ ದಾಳಿ ಮಾಡಿದ್ದು, 100 ಉಗ್ರರನ್ನು ಹತ್ಯೆಗೈದಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಸೋಮವಾರ ಆರಂಭಗೊಂಡ ಅಧಿವೇಶನದಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ವಿಶೇಷ ಚರ್ಚೆಗೆ ಅವಕಾಶ ನೀಡಲಾಗಿದ್ದು, ಪ್ರತಿಪಕ್ಷಗಳು ಗದ್ಧಲ ಸೃಷ್ಟಿಸಿದ್ದರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಾಪ ಮುಂದೂಡಲಾಗಿತ್ತು.
ಮಧ್ಯಾಹ್ನ 2 ಗಂಟೆಗೆ ಕಲಾಪ ಪುನರಾರಂಭಗೊಂಡಾದ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ರಾಜನಾಥ್ ಸಿಂಗ್ ವಿವರಣೆ ನೀಡಿದರು.
ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ 26 ಪ್ರವಾಸಿಗರ ಹತ್ಯೆಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿದ್ದು, ಅತ್ಯಂತ ಯಶಸ್ವಿಯಾಗಿ ಕಾರ್ಯಾಚರಣೆ ನಡೆದಿದೆ ಎಂದರು.
ಪೆಹಲ್ಗಾಮ್ ದಾಳಿ ನಡೆಸಿದ ಉಗ್ರರು ಭಾರತದ ತಾಳ್ಮೆ ಪರೀಕ್ಷಿಸಿತ್ತು. ಉಗ್ರರಿಗೆ ನೆರವು ನೀಡುತ್ತಾ ಬಂದಿರುವ ಪಾಕಿಸ್ತಾನದಲ್ಲಿನ 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಪಾಕಿಸ್ತಾನದ ಪ್ರತಿಯೊಂದು ದಾಳಿಗೂ ತಕ್ಕ ಪ್ರತ್ಯುತ್ತರ ನೀಡಲಾಗಿದೆ ಎಂದು ಅವರು ಹೇಳಿದರು.
ಸದ್ಯಕ್ಕೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಿಲ್ಲಿಸಿದ್ದೇವೆ. ಮತ್ತೆ ಉಗ್ರರು ದುಷ್ಕೃತ್ಯ ಎಸಗಿದರೆ ಮತ್ತೆ ದಾಳಿ ಮಾಡಲಿದ್ದೇವೆ. ಭಾರತೀಯ ಸೇನೆ ಮನೆಗೆ ನುಗ್ಗಿ ಹೊಡೆದಿದೆ. ಈ ಮೂಲಕ ನಮ್ಮ ಶಕ್ತಿ ಏನೆಂದು ತೋರಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.