Menu

ಕೊಟ್ಟ ಮಾತಿನಂತೆ ನಡೆದಾಗ ಮಾತ್ರ ನಾಯಕರೆನಿಸಿಕೊಳ್ಳುತ್ತೇವೆ: ಡಿಕೆ ಶಿವಕುಮಾರ್

ನಮಗೆ ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ಸಿಗುತ್ತಿಲ್ಲ. ಪಾಪ, ಬೊಮ್ಮಾಯಿ ಅವರ ಸಮಯದಲ್ಲಿ ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಘೋಷಣೆ ಮಾಡಿತು. ಆದರೆ ಇವತ್ತಿನವರೆಗೂ ಆ ಹಣ ಬಿಡುಗಡೆಯಾಗಿಲ್ಲ. ಬೊಮ್ಮಾಯಿ , ನಿರ್ಮಲಾ ಸೀತಾರಾಮನ್ ಹಾಗೂ ಮೋದಿ  ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ನಾನು ಈ ಹಿಂದೆ ‘ವರ್ಡ್ ಪವರ್ ಈಸ್ ವರ್ಲ್ಡ್ ಪವರ್’ ಎಂದು ಹೇಳಿದ್ದೆ. ಕೊಟ್ಟ ಮಾತು ಉಳಿಸಿಕೊಳ್ಳಬೇಕು. ನುಡಿದಂತೆ ನಡೆಯಬೇಕು. ಆಗ ನಾವು ನಾಯಕರು ಎಂದು ಕರೆಸಿಕೊಳ್ಳಲು ಸಾಧ್ಯ. ರಾಜಕಾರಣದಲ್ಲಿ ನಾವು ಎಷ್ಟು ದಿನ ಇರುತ್ತೇವೆ ಎಂಬುದು ಮುಖ್ಯವಲ್ಲ, ಇದ್ದಷ್ಟು ದಿನ ನಾವು ಹೇಗೆ ನಡೆದುಕೊಳ್ಳುತ್ತೇವೆ, ಏನು ಮಾಡುತ್ತೇವೆ ಎಂಬುದು ಮುಖ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.

ಹಾವೇರಿಯಲ್ಲಿ  ನಡೆದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಉದ್ಘಾಟನಾ ಕಾರ್ಯಕ್ರಮ ಹಾಗೂ ವಿವಿಧ ಇಲಾಖೆಗಳ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನಿಮಗೆ ಐದು ಗ್ಯಾರಂಟಿ ಯೋಜನೆ ನೀಡುವುದಾಗಿ ಹೇಳಿದ್ದೆವು. ನೀವು ನಮಗೆ 6 ಶಾಸಕರನ್ನು ಕೊಟ್ಟಿದ್ದಕ್ಕೆ ನಾವು ಪ್ರತಿ ವರ್ಷ 54 ಸಾವಿರ ಕೋಟಿ ವೆಚ್ಚ ಮಾಡಿ ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ಈ ಯೋಜನೆಗಳ ಜಾರಿ ಸಾಧ್ಯವೇ ಎಂದು ಬೊಮ್ಮಾಯಿ ಅವರು, ಯಡಿಯೂರಪ್ಪ ಅವರು ಕೇಳಿದರು. ಒಂದು ಕಾಳು ಕಮ್ಮಿ ಕೊಟ್ಟರೂ ಒಪ್ಪುವುದಿಲ್ಲ ಎಂದರು.  ಬೆಲೆ ಏರಿಕೆ ಸಮಸ್ಯೆ ಹೊರೆ ಇಳಿಸಲು ಈ ಯೋಜನೆ ನೀಡಿದೆವು. ಇಂತಹ ತೀರ್ಮಾನವನ್ನು ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಮಾಡಲಿಲ್ಲ ಎಂದರು.

ಹಾವೇರಿ ಜನ ನಮಗೆ ಆರು ಶಾಸಕರನ್ನು ನೀಡಿದ್ದು, ನಮಗೆ ಶಕ್ತಿ ತುಂಬಿದ್ದೀರಿ. ನಿಮಗೆ ಸಾಷ್ಟಾಂಗ ನಮನ ಸಲ್ಲಿಸುತ್ತೇನೆ. ಬಹಳ ಪ್ರೀತಿಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಈ ಭಾಗದ ಶಾಸಕರು ಸೇರಿ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳಿಂದ ಮುಂದಿನ ದಿನಗಳಲ್ಲಿ ಈ ಜಿಲ್ಲೆ ಬರಗಾಲದ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಹೊರಬರಲಿದೆ. ಅನೇಕ ಕೆರೆ ತುಂಬಿಸಿ, ಕುಡಿಯುವ ನೀರು ಪೂರೈಕೆ, ಶಾಲೆ ನಿರ್ಮಾಣ ಎಲ್ಲವನ್ನು ಗಮನಿಸುತ್ತಿದ್ದೇವೆ. ಇದರೊಂದಿಗೆ ಈ ಜಿಲ್ಲೆಗೆ ಹೊಸರೂಪ ನೀಡಲು ನಮ್ಮ ಶಾಸಕರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ನೀರಾವರಿ ಯೋಜನೆಗಳ ಜಾರಿಗೆ ಎಲ್ಲಾ ಪಕ್ಷಗಳು ಒಟ್ಟಾಗಬೇಕಿದೆ

ಎಲ್ಲಾ ಪಕ್ಷಗಳೂ ರಾಜಕಾರಣವನ್ನು ಪಕ್ಕಕ್ಕಿಟ್ಟು, ನಮ್ಮ ರಾಜ್ಯದ ಜನರು ಹಾಗೂ ರೈತರ ಹಿತ ಕಾಪಾಡಲು ಒಗ್ಗಟ್ಟಾಗಿ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕೋಣ ಎಂದು  ಕರೆ ನೀಡಿದರು.

ಇತ್ತೀಚೆಗೆ ನಾನು ದೆಹಲಿಗೆ ಹೋಗಿ ಬೇಡ್ತಿ ಹಾಗೂ ವರದಾ ನದಿ ಜೋಡಣೆ ವಿಚಾರದಲ್ಲಿ ಒಪ್ಪಂದಕ್ಕೆ ಸಹಿ ಹಾಕಿ ಬಂದಿದ್ದೇನೆ. ಬೊಮ್ಮಾಯಿ ಅವರ ಮುಂದಾಳತ್ವದಲ್ಲಿ ಪ್ರಧಾನಮಂತ್ರಿಗಳ ಭೇಟಿಗೆ ಸಮಯ ನಿಗದಿ ಮಾಡಿ. ನಾವೂ ಬರುತ್ತೇವೆ. ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಸೂಚನೆ ಹೊರಡಿಸುವ ಬಗ್ಗೆ ಮನವಿ ಮಾಡೋಣ. ಅಗತ್ಯವಿದ್ದರೆ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಹಿಂಪಡೆಯೋಣ. ಇನ್ನು ಮಹದಾಯಿ ವಿಚಾರದಲ್ಲಿ ನ್ಯಾಯಾಧಿಕರಣ ತೀರ್ಪಿನ ಅನ್ವಯ ನೀರಿನ ಬಳಕೆಗೆ ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯಿಂದ ಒಪ್ಪಿಗೆ ಸಿಕ್ಕರೆ ನೀವು ಮಾಡಿಕೊಂಡು ಬಂದಿರುವ ಹೋರಾಟಕ್ಕೆ ಮುಕ್ತಿ ಸಿಗುತ್ತದೆ. ಈ ಯೋಜನೆ ಸಂಬಂಧ ನಾವು ಈಗಾಗಲೇ ಟೆಂಡರ್ ಕರೆದಿದ್ದೇವೆ. ಗೋವಾ ರಾಜ್ಯದ ರಾಜಕಾರಣ ಬದಿಗಿಟ್ಟು ನಮ್ಮ ರಾಜ್ಯದ ಶಕ್ತಿಯನ್ನು ಪ್ರದರ್ಶಿಸಿ, ರೈತರು ಹಾಗೂ ಜನರ ಬದುಕಿನ ಬಗ್ಗೆ ಆಲೋಚಿಸೋಣ. ನಾವು ರಾಜಕೀಯವನ್ನು ಮುಂದಿನ ಎರಡೂವರೆ ವರ್ಷಗಳ ಬಳಿಕ ಮಾಡೋಣ. ಈಗ ರಾಜ್ಯದ ಜನರಿಗಾಗಿ ಕೃಷ್ಣ, ಮಹದಾಯಿ, ಕಾವೇರಿ ವಿಚಾರವಾಗಿ ಒಂದಾಗಿ ಕೆಲಸ ಮಾಡೋಣ ಎಂದು ಹೇಳಿದರು.

ನಮ್ಮ ರಾಜ್ಯದಲ್ಲಿ 70 ಮೆಡಿಕಲ್ ಕಾಲೇಜುಗಳಿದ್ದು, ದೇಶದಲ್ಲಿ ನಮ್ಮ ರಾಜ್ಯ ದೊಡ್ಡ ಸಾಧನೆ ಮಾಡಿದೆ. ಈ ಸಾಧನೆಯನ್ನು ಎಲ್ಲರೂ ಸೇರಿ ಮಾಡಿದ್ದೇವೆ. 70 ಕಾಲೇಜುಗಳಿಂದ 13,945 ಮೆಡಿಕಲ್ ಸೀಟ್ ಗಳಿದ್ದು, ಪ್ರತಿ ವರ್ಷ ಸಾವಿರಾರು ವೈದ್ಯರು ತಯಾರಾಗುತ್ತಿದ್ದಾರೆ.  3405 ದಂತ ವೈದ್ಯರು, 1 ಸಾವಿರ ಸ್ನಾತಕೋತ್ತರ ಪದವಿದರರು, 44 ಸಾವಿರ ನರ್ಸಿಂಗ್ ಪದವೀಧರರು  ತಯಾರಾಗುತ್ತಿದ್ದಾರೆ. 9500 ಮಂದಿ ಆಯುರ್ವೇದ ವೈದ್ಯರು ತಯಾರಾಗುತ್ತಿದ್ದಾರೆ. ಆ ಮೂಲಕ ನಮ್ಮ ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ಸಿಬ್ಬಂದಿ ತಯಾರಾಗುತ್ತಿದ್ದು ಭಾರತದಲ್ಲೇ ಪ್ರಮುಖ ಪಾತ್ರ ವಹಿಸಿದೆ. ಇದೇ ಕರ್ನಾಟಕದ ಶಕ್ತಿ ಎಂದರು.

ವಿಶ್ವದ ಸಿಲಿಕಾನ್ ಸಿಟಿ ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇಂಜಿನಿಂಯರಿಂಗ್ ವೃತ್ತಿಪರರಿದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಇಂಜಿನಿಯರ್ ವೃತ್ತಿಪರರು ಇದ್ದಾರೆ. ನಮ್ಮ ರಾಜ್ಯ ಇಂಜಿನಿಯರ್ ಹಾಗೂ ವೈದ್ಯರನ್ನು ತಯಾರು ಮಾಡುತ್ತಿದೆ. ನಿಮ್ಮಲ್ಲಿ ಬಹುತೇಕರು ರೈತರಿದ್ದೀರಿ. ನಿಮಗೆ ಶಕ್ತಿ ನೀಡಲು ನಾವು ಅನೇಕ ಯೋಜನೆ ಕೈಗೊಂಡಿದ್ದೇವೆ. ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಅವರದೇ ಆದ ಲೆಕ್ಕಾಚಾರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರಿಗೆ ಪರಿಹಾರವಾಗಿ ಎಕರೆಗೆ 25 ಲಕ್ಷ ದರ ನಿಗದಿ ಮಾಡಲಾಗಿತ್ತು. ನಮ್ಮ ಸರ್ಕಾರದ ಸಚಿವರು ಸೇರಿ ಇತ್ತೀಚೆಗೆ ಸಭೆ ಮಾಡಿ ರೈತರಿಗೆ 35-40 ಲಕ್ಷ ಪ್ರತಿ ಎಕರೆಗೆ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

“ಈ ಹಿಂದೆ ರೈತರ ಪಂಪ್ ಸೆಟ್ ಗಳಿಗೆ 10 ಹೆಚ್ ಪಿ ವಿದ್ಯುತ್ ಉಚಿತ ನೀಡುತ್ತಾ ಬಂದಿದ್ದೇವೆ. ಇದಕ್ಕಾಗಿ ಸರ್ಕಾರ ಪ್ರತಿ ವರ್ಷ 20 ಸಾವಿರ ಕೋಟಿ ವೆಚ್ಚ ನೀಡುತ್ತಿದೆ. ನಮ್ಮ ಸರ್ಕಾರ ವಿವಿಧ ಕಾರ್ಯಕ್ರಮಗಳ ಮೂಲಕ ಸಬ್ಸಿಡಿ ರೂಪದಲ್ಲಿ ರಾಜ್ಯದ ಜನರ ಜೇಬಿಗೆ ಪ್ರತಿ ವರ್ಷ 1 ಲಕ್ಷ ಕೋಟಿ ಹಣವನ್ನು ಹಾಕುತ್ತಿದೆ. ಇನ್ನು ನಮ್ಮ ಸರ್ಕಾರ ರಾಜ್ಯದಲ್ಲಿ 500 ಕೆಪಿಎಸ್ ಶಾಲೆ ನಿರ್ಮಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ. ನಮ್ಮ ರಾಜ್ಯದಲ್ಲಿ ಸುಮಾರು 8 ಸಾವಿರ ಕೋಟಿ ಹಣ ಸಿಎಸ್ಆರ್ ನಿಧಿ ಮೂಲಕ ಸಂಗ್ರಹವಾಗುತ್ತದೆ. ಈ ಹಣವನ್ನು ಬಳಸಿಕೊಂಡು ಈ ನಿಧಿಯನ್ನು ಶಾಲೆಗಳ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಗ್ರಾಮೀಣ ಭಾಗದ ಮಕ್ಕಳು ವಿದ್ಯಾಭ್ಯಾಸಕ್ಕೆ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಪ್ರತಿ ಮೂರು ಪಂಚಾಯ್ತಿಗೆ ಸೇರಿ ಒಂದು ಕೆಪಿಎಸ್ ಶಾಲೆ ನಿರ್ಮಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಸಿಗುವ ಶಿಕ್ಷಣ ಗ್ರಾಮೀಣ ಭಾಗದ ಮಕ್ಕಳಿಗೂ ಸಿಗಬೇಕು ಎಂಬುದು ನಮ್ಮ ಉದ್ದೇಶ. ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಲು ನಮ್ಮ ಸರ್ಕಾರ ಮುಂದಾಗಿದೆ” ಎಂದರು.

ನರೇಗಾ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾಕೆ ಈ ನಿರ್ಧಾರಕ್ಕೆ ಬಂದಿದೆ ಗೊತ್ತಿಲ್ಲ. ಇಷ್ಟು ದಿನ ಈ ಯೋಜನೆಯಲ್ಲಿ 90% ಅನುದಾನ ನೀಡುತ್ತಿದ್ದ ಕೇಂದ್ರ ಈಗ ಇದರ ಪಾಲನ್ನು 60:40 ಅನುಪಾತಕ್ಕೆ ಇಳಿಸಿದೆ. ಈ ಯೋಜನೆಯನ್ನು ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. ಈ ಬಗ್ಗೆ ನಾವು ಜನರಿಗೆ ಮನವರಿಕೆ ಮಾಡಬೇಕು. ನಮ್ಮ ಸರ್ಕಾರ ಉದ್ಯೋಗ, ಆಹಾರ, ಆರೋಗ್ಯ ಭದ್ರತೆ ನೀಡಿದೆ. ರೈತರಿಗೆ ಭೂಮಿ, ಬ್ಯಾಂಕುಗಳ ರಾಷ್ಟ್ರೀಕರಣ, ಮಧ್ಯಾಹ್ನ ಬಿಸಿಯೂಟ, ಸ್ತ್ರೀಶಕ್ತಿ, ಅನ್ನಭಾಗ್ಯ ಯೋಜನೆ ಸೇರಿದಂತೆ ಜನಪರ ಕಾರ್ಯಕ್ರಮಗಳನ್ನು ನೀಡಿರುವುದು ಕಾಂಗ್ರೆಸ್ ಸರ್ಕಾರ ಮಾತ್ರ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ಈ ಜಿಲ್ಲೆಯ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡುತ್ತಿರುವ ಈ ಆರು ಶಾಸಕರನ್ನು ಮತ್ತೆ ವಿಧಾನಸೌಧಕ್ಕೆ ಕಳುಹಿಸಬೇಕು ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *