“ಟನಲ್ ರಸ್ತೆ ಯೋಜನೆ ಅತ್ಯುತ್ತಮ ಆಲೋಚನೆ, ನಾವು ನಿಮ್ಮ ಬೆಂಬಲಿಕ್ಕಿದ್ದೇವೆ, ನೀವು ಮುಂದುವರೆಯಿರಿ”, “ಡಿಕೆ ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ…” ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾರ್ಯವೈಖರಿ, ದೂರದೃಷ್ಟಿ ಯೋಜನೆಗಳನ್ನು ಸಾರ್ವಜನಿಕರು ಮುಕ್ತ ಕಂಠದಿಂದ ಹೊಗಳಿದ ಪರಿ ಇದು.
ಬೆಂಗಳೂರು ನಡಿಗೆ ಅಂಗವಾಗಿ ಕಬ್ಬನ್ ಪಾರ್ಕ್ ನಲ್ಲಿ ಭಾನುವಾರ ನಡೆದ ನಾಗರಿಕರ ಜತೆ ಸಂವಾದದ ವೇಳೆ ಹಲವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾರ್ಯವೈಖರಿಯನ್ನು ಕೊಂಡಾಡಿದರು. ನಾಗರಿಕರೊಬ್ಬರು, “ಸಾರ್, ನೀವು ಕೈಗೆತ್ತಿಕೊಂಡಿರುವ ಟನಲ್ ರಸ್ತೆ ಯೋಜನೆ ಚೆನ್ನಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೊಸ ರಸ್ತೆಗಳು ಬೇಕು. ಟನಲ್ ಯೋಜನೆ ಸಾಕಾರಗೊಳಿಸಿ. ಇದೊಂದು ಅತ್ಯುತ್ತಮ ಯೋಜನೆ” ಎಂದು ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಡಿಸಿಎಂ ಶಿವಕುಮಾರ್ ಅವರು, “ನಾನು ಸಹ ಸಾಕಷ್ಟು ಆಲೋಚನೆ ಮಾಡಿದೆ. ರಸ್ತೆ ಅಗಲೀಕರಣಕ್ಕಾಗಿ ಮನೆಗಳನ್ನು ಒಡೆಯಲು ಆಗುವುದಿಲ್ಲ. ಇದಕ್ಕೆ ದುಪ್ಪಟ್ಟು ಪರಿಹಾರ ನೀಡಬೇಕು. ಅದರ ಬದಲು ಸುರಂಗ ಮಾರ್ಗ ರಸ್ತೆಯೇ ಸರಿ ಎಂದು ಯೋಜನೆಗೆ ಮುಂದಾಗಿದ್ದೇನೆ” ಎಂದರು.
“ನಿಮ್ಮ ಆಲೋಚನೆ ಚೆನ್ನಾಗಿದೆ. ಕಳೆದ 30 ವರ್ಷಗಳಿಂದ ನಗರದಲ್ಲಿ ಹೊಸ ರಸ್ತೆಗಳು ಆಗಿಲ್ಲ. ಮುಂಬೈನಲ್ಲಿ ಟನಲ್ ರಸ್ತೆ ಮಾಡುತ್ತಿದ್ದಾರೆ. ಅದಕ್ಕೆ ಯಾರೂ ಸಹ ವಿರೋಧ ಮಾಡುವುದಿಲ್ಲ. ಆದರೆ ಇಲ್ಲಿ ಮಾಡುತ್ತಿದ್ದಾರೆ” ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ನಾಗರಿಕರೊಬ್ಬರು, “ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವುದು ಪುಣ್ಯ ಎಂದು ಹೇಳಬಹುದು. ಏಕೆಂದರೆ ಈ ನಗರದ ಬಗ್ಗೆ ಇವರು ಅಪಾರ ಕಾಳಜಿ ಹೊಂದಿದ್ದಾರೆ. ವಿದೇಶಿಯರು ಬೆಂಗಳೂರಿಗೆ ಬಂದರೆ ಇಲ್ಲಿನ ಸ್ವಚ್ಛತೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದು ಕೆಲಸ ಮಾಡುತ್ತಿದ್ದಾರೆ. ಶಿವಕುಮಾರ್ ಆವರು ಗ್ರಾಮೀಣ ಭಾಗದಿಂದ ಬಂದವರಾದರೂ ಬೆಂಗಳೂರಿನ ಬಗ್ಗೆ ಪ್ರೀತಿ ಹೊಂದಿದ್ದಾರೆ” ಎಂದು ಪ್ರೀತಿಪೂರ್ವಕ ಮಾತುಗಳನ್ನಾಡಿದರು.
ಬೆಂಗಳೂರಿನ ರಸ್ತೆಗಳು ಹೇಗಿರಬೇಕು ಎಂದು ‘ವಿನ್ಯಾಸ ಸ್ಪರ್ಧೆ’ ಏರ್ಪಡಿಸಿದರೆ ಜನರಿಗೆ ಬೇಕಾದಂತಹ ರಸ್ತೆ ಜನರಿಂದಲೇ ದೊರೆಯಲಿದೆ. ಈ ಕಲ್ಪನೆಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ನೆಹೇಶ್ ಎಂಬುವರು ತಮ್ಮ ಆಲೋಚನೆ ಹಂಚಿಕೊಂಡರು. ಇದನ್ನು ಶ್ಲಾಘಿಸಿದ ಡಿಸಿಎಂ ಅವರು “ಆಲೋಚನೆ ತುಂಬಾ ಚೆನ್ನಾಗಿದೆ. ಇವರ ದೂರವಾಣಿ ಸಂಖ್ಯೆಯನ್ನು ಪಡೆಯಿರಿ. ಇವರ ಬಳಿ ಚರ್ಚೆ ಮಾಡೋಣ” ಎಂದು ಅಧಿಕಾರಿಗಳಿಗೆ ಸೂಚಿಸಿದರು.


