ಕೋಲಾರ: ನಾವು ಕಾಂಗ್ರೆಸ್ ಪಕ್ಷದ ಪರ ಆರ್ಮಿ ರೀತಿ ಕೆಲಸ ಮಾಡುವವರೇ ಹೊರತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಆರ್ಮಿ ರೀತಿ ಕೆಲಸ ಮಾಡುವವರಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬರಿಗೆ ಒಂದೇ ಹುದ್ದೆ ಇರಬೇಕು ಎನ್ನುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವನ್ನು ಸಚಿವ ರಾಜಣ್ಣ ಅವರು ಕೇಳಿದ್ದಾರೆ. ನೀವು ಅವರನ್ನೇ ಕೇಳಬೇಕು. ಆ ವಿಚಾರ ಯಾರ ಜತೆ ಹೇಳಿದ್ದಾರೆ ನನಗೆ ಗೊತ್ತಿಲ್ಲ. ನಮ್ಮ ಸರಕಾರವು ೫ ವರ್ಷ ಅಧಿಕಾರ ಪೂರ್ಣಗೊಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.
ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ವಿಚಾರದ ಬಗ್ಗೆ ಅವರನ್ನೇ ಕೇಳಬೇಕು. ನಾನು ಯಾರನ್ನೂ ಕೇಳಿಲ್ಲ. ಅವರು ಹೇಳಿರುವುದಕ್ಕೆ ನಾನು ಹೇಗೆ ಉತ್ತರ ನೀಡಲಿ? ನನ್ನ ವ್ಯಾಪ್ತಿ ಬಿಟ್ಟು ನಾನು ಏನನ್ನೂ ಮಾತನಾಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ವರಿಷ್ಟರನ್ನು ಕೇಳಬೇಕು. ನಿರ್ಧಾರ ಮಾಡುವುದು ಅವರೇ ಆಗಿದ್ದು, ನಾವು ಕೇವಲ ಒಂದು ಭಾಗವಷ್ಟೇ ಎಂದು ತಿಳಿಸಿದರು.
2028ರ ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಕಾಲಾವಕಾಶವಿದ್ದು, ಪಕ್ಷ ಸಂಘಟನೆ ಮತ್ತಷ್ಟು ಆಗಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಅದಾದ ಬಳಿಕ ಸಿಎಂ ವಿಚಾರ ಪ್ರಸ್ತಾಪವಾಗುತ್ತದೆ. ಸದ್ಯಕ್ಕೆ ನನ್ನ ಪ್ರಯತ್ನವಿಲ್ಲ. ಮೂರು ವರ್ಷದ ಬಳಿಕ ನೋಡೋಣ ಎಂದರು.
ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು, ರಾಜ್ಯಕ್ಕೂ ಅನ್ವಯಿಸುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ವಿಚಾರವನ್ನು ರಾಷ್ಟ್ರಾಧ್ಯಕ್ಷರು ಹೇಳಬೇಕು. ನಾನು ಹೇಳಿದರೆ ಹೇಗೆ ಎಂದರು.
ದಲಿತರ ಸಮಾವೇಶದ ಕುರಿತು ಸಚಿವ ರಾಜಣ್ಣ ದೆಹಲಿಯಲ್ಲಿ ಹೇಳಿದ್ದಾರೆ, ಆ ಬಗ್ಗೆ ಚರ್ಚಿಸಿ ಮಾತನಾಡುವೆ ಎಂದ ಅವರು, ಮೈಸೂರಿನ ಗಲಭೆ ಪ್ರಕರಣ ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿದ್ದು, ಸದ್ಯ ತನಿಖೆ ನಡೆಯುತ್ತಿದೆ ಎಂದು ಹೇಳಿದರು.