Menu

ನಮ್ಮ ದುಡ್ಡಿನಲ್ಲಿ ಅಣೆಕಟ್ಟು ಕಟ್ಟಿ ಬೇರೆಯವರಿಗೆ ನೀರು ಹರಿಸುತ್ತಿದ್ದೇವೆ: ಹೆಚ್.ಡಿ. ಕುಮಾರಸ್ವಾಮಿ ಬೇಸರ

ಬೆಂಗಳೂರು: ನಮ್ಮ ನೀರು ನಮ್ಮ ಹಕ್ಕು ಎಂದು ಹೇಳುತ್ತಾ ನಮ್ಮ ತೆರಿಗೆ ಹಣದಲ್ಲಿ ಅಣೆಕಟ್ಟುಗಳನ್ನು ಕಟ್ಟಿ ತಮಿಳುನಾಡಿಗೆ ನೀರು ಹರಿಸುತ್ತಾ ನಾವು ನೀರಗಂಟಿ ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅತೀವ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಕಾವೇರಿ ನದಿ ರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಕಾವೇರಿ ನದಿ ನೀರಿನ ಹಂಚಿಕೆ ಕುರಿತ ಕಾರ್ಯಗಾರ, ವಿಚಾರ ಸಂಕಿರಣ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾವೇರಿ ವಿಷಯದಲ್ಲಿ ನಮಗೆ ಅನ್ಯಾಯ ಆಗಿದೆ. ರಾಜ್ಯ ಬಹಳಷ್ಟು ಹಿಂದಕ್ಕೆ ಹೀಗಿದೆ. ಯಾವಾಗಲೂ ನಮ್ಮ ರಾಜ್ಯಕಿಂತ ನೆರೆ ರಾಜ್ಯಕ್ಕೆ ಅನುಕೂಲ ಆಗುತ್ತಿದೆ. ಕನ್ನಡಿಗರಲ್ಲಿ ಒಗ್ಗಟ್ಟು ಇಲ್ಲ. ನೀರಿನ ವಿಷಯದಲ್ಲಿಯೂ ಅದೇ ಆಗುತ್ತಿದೆ ಎಂದ ಅವರು; ಅವರು ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಕಾಂಗ್ರೆಸ್ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು.

ತಮಿಳುನಾಡಿನ ಡಿಎಂಕೆ ಜತೆ ನಮ್ಮ ಸಂಬಂಧ ರಾಜಕೀಯಕ್ಕೆ ಮಾತ್ರ ಸೀಮಿತ. ಡಿಎಂಕೆ ಜತೆ ಮೇಕೆದಾಟು ವಿಷಯ ಮಾತನಾಡುವುದಕ್ಕೆ ರಾಜಕೀಯ ಒಪ್ಪಂದ ಮಾಡಿಕೊಂಡಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಇಲ್ಲಿ ನೋಡಿದರೆ ಮೇಕೆದಾಟು ಪಾದಯಾತ್ರೆ ಮಾಡಿ ನಮ್ಮ ನೀರು ನಮ್ಮ ಹಕ್ಕು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.

ನಮ್ಮಲ್ಲಿ ಒಗ್ಗಟ್ಟು ಬರದಿದ್ದರೆ ಕಾವೇರಿ ವಿಷಯದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನ ದಟ್ಟಣೆಯಿಂದ ಮುಂದೆ ಇಡೀ ಕನ್ನಂಬಾಡಿ ಕಟ್ಟೆಯ ನೀರೆಲ್ಲವನ್ನು ಕೊಟ್ಟರೂ ರಾಜಧಾನಿಗೆ ಕುಡಿಯುವ ನೀರು ಸಾಕಾಗದ ಪರಿಸ್ಥಿತಿ ಬರಬಹುದೇನೋ? ಮುಂದೆ ಈ ರೀತಿಯ ನೀರಿನ ಸಂಕಷ್ಟ ಬರುತ್ತದೆ ಎನ್ನುವ ದೂರದೃಷ್ಟಿಯಿಂದ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ನಾವು ಮುಂದಾಗಿದ್ದೇವೆ. ಮಂಡ್ಯದಲ್ಲಿ ಗೆಲ್ಲಿಸಿದರೆ ಐದು ನಿಮಿಷದಲ್ಲಿ ಯೋಜನೆಗೆ ಕೇಂದ್ರದ ಅನುಮತಿ ಕೊಡಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಕೊಡಿಸಲಿ ಎಂದು ಡಿಕೆ ಶಿವಕುಮಾರ್ ಹೇಳುತ್ತಿದ್ದಾರೆ. ಅದಕ್ಕಿಂತ ಮೊದಲು ಅವರು ಮಾಡಬೇಕಾದ ಕೆಲಸ ಒಂದಿದೆ, ಅವರ ಮಿತ್ರಪಕ್ಷವೇ ಆಡಳಿತ ನಡೆಸುತ್ತಿರುವ ತಮಿಳುನಾಡಿನ ಒಪ್ಪಿಗೆ ಕೊಡಿಸಲಿ, ಆಮೇಲೆ ನಮ್ಮ ಬಗ್ಗೆ ಮಾತನಾಡಲಿ ಎಂದು ಕೇಂದ್ರ ಸಚಿವರು ಹೇಳಿದರು.

ಸಂಸತ್ ನಲ್ಲಿ ಕಾವೇರಿ ವಿಷಯ ಪ್ರಸ್ತಾಪ ಆದಾಗ ನಾನು ನೋಡುತ್ತಿದ್ದೇನೆ. ಆ ನದಿಯ ವಿಷಯ ಪ್ರಸ್ತಾಪವಾದರೆ ತಮಿಳುನಾಡಿನ ಎಲ್ಲಾ ಸಂಸದರು ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಒಟ್ಟಾಗಿಬಿಡುತ್ತಾರೆ. ಆದರೆ, ನಮ್ಮಲ್ಲಿ ಏನಾಗುತ್ತಿದೆ? ಎಲ್ಲಕ್ಕೂ ರಾಜಕೀಯ ತರುತ್ತೇವೆ, ಜಾತಿ ತರುತ್ತೇವೆ. ಇದೇ ನಮಗೆ ಮುಳುವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಒಗ್ಗಟ್ಟಾಗದಿದ್ದರೆ ನ್ಯಾಯ ಸಿಗಲ್ಲ:

ಈಗ ಡಿಸಿಎಂ ಅವರು ಉಲ್ಟಾ ಹೊಡೆಯುತ್ತಿದ್ದಾರೆ. ಡಿಎಂಕೆ ಜತೆ ಕೇವಲ ರಾಜಕೀಯ ಒಪ್ಪಂದ ಮಾತ್ರ ಮಾಡಿಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ನಮ್ಮ ನೀತಿ, ಧೋರಣೆ ಹೀಗೆ ಇರಬಾರದು. ನೆಲ ಜಲ ಭಾಷೆ ವಿಷಯ ಬಂದಾಗ ರಾಜಕೀಯ, ಭಿನ್ನಾಭಿಪ್ರಾಯ ಎಲ್ಲವನ್ನೂ ಬದಿಗೊತ್ತಬೇಕು. ಇಲ್ಲವಾದರೆ ನಮ್ಮ ರಾಜ್ಯಕ್ಕೆ ನ್ಯಾಯ ಸಿಗಲ್ಲ. 93 ವರ್ಷಗಳ ಇಳಿ ವಯಸ್ಸಿನಲ್ಲಿಯೂ ದೇವೇಗೌಡರು ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಸದನದಲ್ಲಿ ವೀಲ್ ಚೇರ್ ಮೇಲೆ ಬಂದು ಹೋರಾಟ ಮಾಡುತ್ತಿದ್ದಾರೆ ಎಂಬುದನ್ನು ಯಾರು ಮರೆಯಬಾರದು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಕಾವೇರಿ ಬಗ್ಗೆ ಹಿಂದೆ ರಾಜ್ಯದಲ್ಲಿ ನಡೆದಿರುವ ಹೋರಾಟ, ತ್ಯಾಗವನ್ನು ಮರೆಯುತ್ತಿದ್ದೇವೆ. ಚನ್ನಬಸಪ್ಪ, ಹೆಚ್.ಎನ್. ನಂಜೇಗೌಡ, ದೇವೇಗೌಡರು ನಡೆಸಿದ ಹೋರಾಟಗಳನ್ನು ನಾವು ನೆನಪಿಸಿಕೊಳ್ಳಬೇಕು. ಮುಂಚೂಣಿಯಲ್ಲಿ ನಿಂತು ರಾಜ್ಯಕ್ಕೆ ನ್ಯಾಯ ದೊರಕಿಸಿಕೊಟ್ಟವವರು ಇವರು ಎಂದು ಕೇಂದ್ರ ಸಚಿವರು ಹೇಳಿದರು.

ನಿನ್ನಿಂದಲೇ ನ್ಯಾಯ ಸಿಗುತ್ತದೆ:

ನಮ್ಮ ತಂದೆ ಅವರು ಯಾವಾಗಲೂ ನನಗೆ ಹೇಳುತ್ತಿರುತ್ತಾರೆ. ರಾಜ್ಯಕ್ಕೆ ಆಗಿರುವ ನೀರಾವರಿ ಅನ್ಯಾಯಕ್ಕೆ ನಿನ್ನ ಒಬ್ಬನಿಂದಲೇ ಈಪರಿಹಾರ, ನ್ಯಾಯ ಸಿಗುತ್ತದೆ ಎಂದು ಅನೇಕ ಸಲ ಹೇಳಿದ್ದಾರೆ. ನಾನು ದೇವರಲ್ಲಿ ಅಚಲ ನಂಬಿಕೆ ಇಟ್ಟಿದ್ದೇನೆ. ನನ್ನ ಕನಸು ಈಡೇರುತ್ತದೆ ಎಂದು ಅವರು ಯಾವಾಗಲೂ ಹೇಳುತ್ತಿರುತ್ತಾರೆ ಎಂಬ ಮಾತನ್ನೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

Related Posts

Leave a Reply

Your email address will not be published. Required fields are marked *