ತುಮಕೂರು ಜಿಲ್ಲೆಯ ಕೊಡಿಗೇನಹಳ್ಳಿ ಹೋಬಳಿಯ ಪೊಲೇನಳ್ಳಿಯಲ್ಲಿ ನೀರಿನ ವಿಚಾರಕ್ಕೆ ನಡೆದ ಜಗಳ ವ್ಯಕ್ತಿಯ ಕೊಲೆಯಲ್ಲಿ ಅಂತ್ಯ ಕಂಡಿದೆ. ಗೂಡ್ಸ್ ವಾಹನ ಚಲಾಯಿಸಿ ಆನಂದ ಎನ್ನುವ ವ್ಯಕ್ತಿಯನ್ನು ನಾಗೇಶ ಎಂಬಾತ ಕೊಲೆ ಮಾಡಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ನೀರಿನ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳವಾಗಿತ್ತು. ಆನಂದನ ಮನೆಯ ಟ್ಯಾಂಕ್ ತುಂಬಿ ನೀರು ಪೋಲಾಗುತ್ತಿತ್ತು. ಸ್ಥಳಕ್ಕೆ ಬಂದ ನಾಗೇಶನ ತಂದೆ ರಾಮಕೃಷ್ಣ ನೀರು ಪೋಲಾಗುತ್ತಿರುವುದಕ್ಕೆ ಆಕ್ಷೇಪಿಸಿದ್ದಾರೆ. ಆಗ ಎರಡೂ ಕುಟುಂಬಗಳ ಮಧ್ಯೆ ವಾಗ್ವಾದ, ಜಗಳವಾಗಿದೆ.
ಜಗಳ ತಾರಕಕ್ಕೇರಿ ನಾಗೇಶನ ತಾಯಿಯ ಮೇಲೆ ಆನಂದ ಹಲ್ಲೆ ಮಾಡಿದ್ದಾನೆ. ತಾಯಿಯ ಮೇಲಿನ ಹಲ್ಲೆಯ ವಿಚಾರ ತಿಳಿದು ಹೊರಗಡೆ ಕೆಲಸಕ್ಕೆ ಹೋಗಿದ್ದ ನಾಗೇಶ ಗ್ರಾಮಕ್ಕೆ ಬಂದಿದ್ದು, ರಸ್ತೆ ಬದಿ ನಿಂತಿದ್ದ ಆನಂದನಿಗೆ ಗೂಡ್ಸ್ ವಾಹನವನ್ನು ಡಿಕ್ಕಿ ಹೊಡೆಸಿದ್ದಾನೆ. ಆನಂದ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬಳಿಕ ನಾಗೇಶ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಮಹಿಳೆಯನ್ನು ಕಟ್ಟಿ ಹಾಕಿ ಕೊಲೆಗೈದು ಮನೆ ದೋಚಿದ ಕಳ್ಳರು
ಮಹಿಳೆಯನ್ನು ಕಟ್ಟಿ ಹಾಕಿ ಕತ್ತು ಸೀಳಿ ಕೊಲೆ ಮಾಡಿ ಬಾತ್ ರೂಮ್ಗೆ ಹೋಗಿ ಸ್ನಾನ ಮಾಡಿ 40 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ನಗದು ದೋಚಿಕೊಂಡು ಕಳ್ಳರು ಪರಾರಿಯಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
50 ವರ್ಷದ ರೇಣು ಅಗರ್ವಾಲ್ ಕೊಲೆಯಾದ ಮಹಿಳೆ. ಅಗರ್ವಾಲ್ ಮಗನೊಂದಿಗೆ ಕೆಲಸಕ್ಕೆ ತೆರಳಿದ್ದರು. ಬಳಿಕ ಪತ್ನಿಗೆ ಅನೇಕ ಬಾರಿ ಕರೆ ಮಾಡಿದರೂ ಉತ್ತರಿಸದಿದ್ದಾಗ, ಮನೆಗೆ ಬಂದು ಬಾಗಿಲು ತೆರೆದಾಗ ರೇಣು ಮೃತಪಟ್ಟಿರುವುದು ಕಂಡುಬಂದಿದೆ.
ಕಳ್ಳರು ಮನೆಯಲ್ಲಿ ಸ್ನಾನ ಮಾಡಿ ಬೇರೆ ಬಟ್ಟೆ ಧರಿಸಿ ರಕ್ತಸಿಕ್ತ ಬಟ್ಟೆ ಬಿಟ್ಟು ಪರಾರಿಯಾಗಿದ್ದಾರೆ. ಕೊಲೆ ಆರೋಪಿಗಳು ಮನೆಕೆಲಸಗಾರರು ಎಂಬುದು ತಿಳಿದುಬಂದಿದೆ. ಒಬ್ಬ ಅಗರ್ವಾಲ್ ಮನೆಯಲ್ಲಿ ಮತ್ತು ಇನ್ನೊಬ್ಬ ಪಕ್ಕದ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಕೊಲೆ ಮಾಡಿ ರಾಂಚಿಗೆ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.