ಬೆಂಗಳೂರು: ದುಬಾರಿ ಟ್ಯಾಂಕರ್ ನೀರು ಅವಲಂಬಿಸಿರುವವರಿಗೆ ಸಿಹಿಸುದ್ದಿ ನೀಡಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತಿಂಗಳಾಂತ್ಯದಲ್ಲಿ ನೀವಿದ್ದಲ್ಲೇ ಮೊಬೈಲ್‌ನಲ್ಲಿ ಕಾವೇರಿ ನೀರು ಟ್ಯಾಂಕರ್ ಬುಕ್ ಮಾಡುವ ಅಪ್ಲಿಕೇಶನ್ ಜಾರಿ ಮಾಡಲು ಮುಂದಾಗಿದೆ.
ಬೇಸಿಗೆ ಶುರುವಾಗುತ್ತಲೇ ರಾಜ್ಯದ ಕೆಲ ಭಾಗದಲ್ಲಿ ನೀರಿಗಾಗಿ ಹಾಹಾಕಾರ ಹೆಚ್ಚಾಗಿದೆ. ಬೆಳಗಾಗುತ್ತಲೇ ನೀರಿಗಾಗಿ ಜಗಳ, ಕಿತ್ತಾಟ ಆಗಾಗ ಕಂಡುಬರುತ್ತಲೇ ಇದೆ. ಇನ್ನೂ ಕೆಲ ದಿನಗಳ ಹಿಂದೆ ಚಾಮರಾಜಪೇಟೆಯ ಆನಂದಪುರದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜರುಗಿತ್ತು.
ಸುಡು ಬಿಸಿಲಿಗೆ ನೀರಿನ ಅಭಾವ ಇರುವ ಹಿನ್ನೆಲೆ ಟ್ಯಾಂಕರ್ ಅವಲಂಬಿಸಿಕೊಂಡು ದಿನನಿತ್ಯ ನೀರು ಬಳಕೆ ಮಾಡುವ ಜನರಿದ್ದಾರೆ.ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಟ್ಯಾಂಕರ್ ಮಾಲೀಕರು ಹೆಚ್ಚೆಚ್ಚು ದರ ವಿಧಿಸಿ, ಸಾಮಾನ್ಯರ ಬಳಿ ಹಣ ಪೀಕುತ್ತಿದ್ದಾರೆ. ಹೀಗಾಗಿ ಟ್ಯಾಂಕರ್ ಮಾಫಿಯಾಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಪೈಪ್‌ಲೈನ್ ಮುಖಾಂತರ ಕಾವೇರಿ ನೀರು ಪೂರೈಕೆಯಾಗದ ಪ್ರದೇಶದ ಜನರಿಗೆ ಜಲಮಂಡಲಿಯ ಹೊಸ ಅಪ್ಲಿಕೇಶನ್ ಪರಿಚಯಿಸಲು ಮುಂದಾಗಿದೆ.
ಟ್ಯಾಂಕರ್ ಬುಕ್ಕಿಂಗ್‌ಗೆ ಅವಕಾಶ:
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಅಣತಿಯಂತೆ ಈ ಹೊಸ ಯೋಜನೆ ಜಾರಿಗೆ ತರಲಾಗುತ್ತಿದೆ. ಜಲಮಂಡಳಿ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಅಪ್ಲಿಕೇಶನ್‌ನ ಲಿಂಕ್ ದೊರೆಯಲಿದೆ. ಟ್ಯಾಂಕರ್ ನೀರಿಗಾಗಿ ಬುಕಿಂಗ್ ವ್ಯವಸ್ಥೆ ಇರಲಿದೆ. ಬೆಂಗಳೂರು ವ್ಯಾಪ್ತಿ ನೀರು ಒದಗಿಸಲು 200 ಟ್ಯಾಂಕರ್ ಜಿಪಿಎಸ್ ಆಧಾರಿತ ಟ್ಯಾಂಕರ್ ಕೊಂಡುಕೊಳ್ಳಲಾಗಿದೆ. ಜೊತೆಗೆ ನೀವು ಕಾಯ್ದಿರಿಸಿದ ಟ್ಯಾಂಕರ್ ಎಲ್ಲಿದೆ ಎಂದು ಓಲಾ ಉಬರ್ ಆಟೋಗಳಂತೆ ಟ್ರ್ಯಾಕ್ ಮಾಡಬಹುದಾಗಿದೆ.
ಏನೆಲ್ಲ ವಿಶೇಷತೆ ಇದೆ:
ಮೊದಲಿಗೆ ನೀರಿಗಾಗಿ ಟ್ಯಾಂಕರ್ ಬುಕ್ ಮಾಡಿದ ತಕ್ಷಣ ಗ್ರಾಹಕನಿಗೆ ಒನ್ ಟೈಂ ಪಾಸ್‌ವರ್ಡ್ (ಓಟಿಪಿ) ಬರುತ್ತದೆ. ಅದನ್ನು ಚಾಲಕನಿಗೆ ತಿಳಿಸಬೇಕು. ಓಟಿಪಿ ಜನರೇಟ್ ಆದ ನಂತರವಷ್ಟೇ ನೀರು ಪೂರೈಕೆ ಮುಂದಿನ ಪ್ರಕ್ರಿಯೆ ಶುರುವಾಗುತ್ತದೆ. ಟ್ಯಾಂಕರ್‌ನಲ್ಲಿ ಎನೇಬಲ್ಡ್ ಆಟೋಮ್ಯಾಟಿಕ್ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ಅಳವಡಿಸಿದ್ದು, ನೀರು ಟ್ಯಾಂಕರ್‌ಗೆ ಎಷ್ಟು ತುಂಬಬೇಕು ಎನ್ನುವುದನ್ನು ಅಂದಾಜಿಸುವ ವಿಶೇಷತೆಯನ್ನು ಹೊಂದಿದೆ. ಆ ಮಾದರಿಯಲ್ಲೇ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲಾಗಿದೆ.
ಡಿಜಿಟಲ್ ಪೇ:
ಟ್ಯಾಂಕರ್ ನೀರು ಪೂರೈಕೆಯಾಗುವುದು ಖಚಿತಗೊಂಡ ನಂತರ ಆನ್‌ಲೈನ್‌ನಲ್ಲೇ ಎಷ್ಟು ಹಣ ಪಾವತಿಸಬೇಕು ಎಂಬ ಮಾಹಿತಿ ಒದಗಿಸಲಾಗುತ್ತದೆ. ಡಿಜಿಟಲ್ ರೂಪದಲ್ಲೇ ನೇರವಾಗಿ ಜಲಮಂಡಳಿಗೆ ಪೇ ಮಾಡಬಹುದಾಗಿದೆ.
ಜೊತೆಗೆ ಗ್ರಾಹಕನ ನಿಖರವಾದ ವಿಳಾಸ ಅಪ್ಲಿಕೇಶನ್‌ನಲ್ಲಿ ತುಂಬುವ ಅವಕಾಶ ಇರಲಿದೆ. ಮಾರ್ಚ್ ತಿಂಗಳಾಂತ್ಯದಲ್ಲಿ ಜನ ಸಾಮಾನ್ಯರ ಬಳಕಗೆ ಸಿಗಲಿದೆ ಎಂದು ಜಲಮಂಡಲಿಯ ಅಧಿಕಾರಿಯೊಬ್ಬರು ಹೇಳಿದರು