ಶಾಲಾ ಅವಧಿಯಲ್ಲಿ ಮಕ್ಕಳಿಗೆ ನೀರು ಕುಡಿಯುವುದನ್ನು ಉತ್ತೇಜಿಸಲು ಕೇರಳ ರಾಜ್ಯದ ಶಾಲೆಗಳಲ್ಲಿ ದಿನಕ್ಕೆ ಎರಡು ಬಾರಿ ‘ವಾಟರ್ ಬೆಲ್’ ಜಾರಿಯಲ್ಲಿದೆ. ಕರ್ನಾಟಕದ ಶಾಲೆಗಳಲ್ಲೂ ಅನುಷ್ಠಾನಕ್ಕೆ ಚಿಂತನೆ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ವಾಟರ್ ಬೆಲ್ ಜಾರಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.
ಕೇರಳ ಶಾಲೆಗಳಲ್ಲಿ ಬೆಳಗ್ಗೆ 10:30 ಮತ್ತು ಮಧ್ಯಾಹ್ನ 2:30 ರ ಅವಧಿಯಲ್ಲಿ ವಾಟರ್ ಬೆಲ್ ಆಗುತ್ತದೆ. ಈ ಅವಧಿಯಲ್ಲಿ ಮಕ್ಕಳು ನೀರು ಕುಡಿಯುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಶಾಲೆಗಳಲ್ಲಿ ಮಕ್ಕಳು ಹೆಚ್ಚು ನೀರು ಕುಡಿಯಲು ಉತ್ತೇಜಿಸುವ ಕಾರ್ಯಕ್ರಮ ಇದಾಗಿದ್ದು, ಮಕ್ಕಳು ಹೆಚ್ಚು ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಬಗ್ಗೆ ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು.
ಆಧುನಿಕ ವೈದ್ಯಕೀಯ ಮಾತ್ರವಲ್ಲದೆ ಹಿರಿಯರು ಕೂಡ ಸರ್ವರೋಗಕ್ಕೂ ನೀರೇ ಮದ್ದು ಎಂಬ ಮಾತುಗಳನ್ನು ಆಗಾಗ ಹೇಳುತ್ತಿರುತ್ತಾರೆ. ಹೀಗಾಗಿ ಬಾಲ್ಯದಿಂದಲೇ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದನ್ನು ಜೀವನಶೈಲಿಯಲ್ಲಿ ರೂಢಿಸಿಕೊಳ್ಳುವಂತೆ ಈ ಮೂಲಕ ಶಾಲೆಗಳಲ್ಲಿ ಮಾಡಬಹುದಾಗಿದೆ.