ಗಾಯಗೊಂಡಿರುವ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಆಯುಷ್ ಬದೋನಿ ಅವರನ್ನು ಆಯ್ಕೆ ಮಾಡಲಾಗಿದೆ.
ವಡೋದರದಲ್ಲಿ ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್ ವೇಳೆ ವಾಷಿಂಗ್ಟನ್ ಸುಂದರ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಅನಿವಾರ್ಯವಾಗಿ ಬ್ಯಾಟಿಂಗ್ ಗೆ ಇಳಿದರೂ 17 ಎಸೆತಗಳಲ್ಲಿ 7 ರನ್ ಮಾಡಿ ತಂಡದ ಗೆಲುವಿನಲ್ಲಿ ಮಿಂಚಿದರು.
26 ವರ್ಷದ ವಾಷಿಂಗ್ಟನ್ ಸುಂದರ್ 5 ಓವರ್ ಎಸೆದು 27 ರನ್ ನೀಡಿದ್ದರು. ಪಂದ್ಯದ ಮಧ್ಯದಲ್ಲೇ ಮೈದಾನ ತೊರೆದವರು ಮತ್ತೆ ಅಖಾಡಕ್ಕೆ ಇಳಿದಿರಲಿಲ್ಲ. ಆದರೆ ಬ್ಯಾಟಿಂಗ್ ನಲ್ಲಿ ರಾಣಾಗೆ ಬಡ್ತಿ ನೀಡಿದ್ದರೂ ಅನಿರ್ವಾಯವಾಗಿ ಬ್ಯಾಟಿಂಗ್ ಗೆ ಇಳಿಯಬೇಕಾಯಿತು.
ವಾಷಿಂಗ್ಟನ್ ಸುಂದರ್ ಮುಂದಿನ ಎರಡು ಏಕದಿನ ಪಂದ್ಯಗಳಲ್ಲಿ ಆಡುವುದು ಕಷ್ಟವಾಗಿದ್ದು, ಅವರ ಬದಲು ಆಯುಷ್ ಬದೋನಿ ಅವರನ್ನು ಆಯ್ಕೆ ಸಮಿತಿ ನೇಮಕ ಮಾಡಿದೆ. ಈ ಮೂಲಕ ಆಯುಷ್ ಬದೋನಿ ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
ಭಾರತ ತಂಡಕ್ಕೆ ಆಟಗಾರರ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿದ್ದು, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಗಾಯಗೊಂಡ ರಿಷಭ್ ಪಂತ್ ಹೊರಬಿದ್ದರೆ, ತಿಲಕ್ ವರ್ಮಾ ಶಸ್ತ್ರಚಿಕಿತ್ಸೆ ಕಾರಣ ತಂಡದಿಂದ ಹೊರಗುಳಿಯುವಂತಾಗಿದೆ. ಇದೀಗ ವಾಷಿಂಗ್ಟನ್ ಸುಂದರ್ ಸರಣಿಯಿಂದ ಹೊರಬಿದ್ದಿದ್ದಾರೆ.
ಪಂದ್ಯದ ನಂತರ ಮಾತನಾಡಿದ ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್ ಗಾಯದ ಪ್ರಮಾಣ ಗೊತ್ತಿರಲಿಲ್ಲ. ಆದರೆ ಸಮಸ್ಯೆ ಇದೆ ಎಂಬುದು ಗೊತ್ತಿತ್ತು. ಬ್ಯಾಟಿಂಗ್ ವೇಳೆಯೂ ಉತ್ತಮವಾಗಿ ಚೆಂಡು ಬಾರಿಸುತ್ತಿದ್ದರೂ ಓಡಲು ಕಷ್ಟಪಡುತ್ತಿದ್ದರು ಎಂದು ಹೇಳಿದ್ದರು.


