ಕೆಲವೊಂದು ಪ್ರೇಮಿಗಳು ಲೋಕದ ಪರಿವೆ ಇಲ್ಲದೆ ಕಿಸ್ಸಿಂಗ್-ರೊಮ್ಯಾನ್ಸ್ ಎಂದು ಅತಿರೇಕವಾಗಿ ವರ್ತಿಸುತ್ತಿರುವುದರಿಂದ ಬೇಸತ್ತ ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರು ಕೈಗೊಂಡ ಕ್ರಮ ವೈರಲ್ ಆಗ್ತಿದೆ.
ಕ್ಯಾಬ್ ಚಾಲಕ ” ನೋ ರೊಮ್ಯಾನ್ಸ್, ಇದು ಕ್ಯಾಬ್ ಓಯೋ ಅಲ್ಲ, ನಡುವೆ ಅಂತರವಿರಲಿ,” ಎಂದು ತನ್ನ ಕ್ಯಾಬ್‌ನಲ್ಲಿ ವಾರ್ನಿಂಗ್ ಬೋರ್ಡ್ ಅಳವಡಿಸಿ ಸುದ್ದಿಯಾಗಿದ್ದಾರೆ. ಈ ವಾರ್ನಿಂಗ್ ಬೋರ್ಡ್ ಪೋಟೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೆಲವು ಪ್ರೇಮಿಗಳು ಎಲ್ಲೆಂದರಲ್ಲಿ ಅತಿರೇಕವಾಗಿ ವರ್ತಿಸುವುದರಿಂದ ಇತರರಿಗೂ ಮುಜುಗರವುಂಟಾಗುತ್ತದೆ. ಕ್ಯಾಬ್‌ನಲ್ಲೂ ನಡೆಯುವ ಇಂತಹ ಘಟನೆಗಳಿಂದ ಬೇಸತ್ತು ಕ್ಯಾಬ್ ಡ್ರೈವರ್ ಹಾಕಿರುವ ಎಚ್ಚರಿಕೆ ಫಲಕ ಬಹಳಷ್ಟು ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು ತಮ್ಮ ರೆಡ್ಡಿಟ್ ಖಾತೆಯಲ್ಲಿ ಕ್ಯಾಬ್‌ನಲ್ಲಿದ್ದ ಈ ಎಚ್ಚರಿಕೆ ಫಲಕದ ಪೋಟೊ ಶೇರ್ ಮಾಡಿಕೊಂಡಿದ್ದು, “ಇಂದು ಬೆಂಗಳೂರಿನ ಕ್ಯಾಬ್ ಒಂದರಲ್ಲಿ ಇದನ್ನು ನೋಡಿದೆ” ಎಂದು ಬರೆದುಕೊಂಡಿದ್ದಾರೆ. ಎಚ್ಚರಿಕೆ ಫಲಕ ಫೋಟೋದಲ್ಲಿ “ಎಚ್ಚರಿಕೆ!! ನೋ ರೊಮ್ಯಾನ್ಸ್; ಇದು ಕ್ಯಾಬ್. ಖಾಸಗಿ ಸ್ಥಳ ಅಥವಾ ಓಯೋ ಅಲ್ಲ. ಆದ್ದರಿಂದ ದಯವಿಟ್ಟು ಇಲ್ಲಿ ಅಂತರವನ್ನು ಕಾಯ್ದುಕೊಳ್ಳಿ ಮತ್ತು ಶಾಂತವಾಗಿ ವರ್ತಿಸಿ” ಎಂಬ ಬರಹ ಇದೆ.
ಈ ಪೋಸ್ಟ್‌ಗೆ ಹಲವು ಕಾಮೆಂಟ್ಸ್ ಬಂದಿವೆ. ಒಬ್ಬ ಬಳಕೆದಾರರು ʼಇದರಲ್ಲಿ ತಪ್ಪೇನಿಲ್ಲʼ ಎಂದಿದ್ದರೆ ಮತ್ತೊಬ್ಬ ಬಳಕೆದಾರರು ʼಮೊದಲು ದೆಹಲಿ ಮೆಟ್ರೋದಲ್ಲಿ ಇಂತಹ ಎಚ್ಚರಿಕೆ ಫಲಕಗಳನ್ನು ಹಾಕಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು,ʼಇದು ತುಂಬಾ ತಮಾಷೆಯಾಗಿದೆ, ಆದ್ರೂ ಈ ಕ್ಯಾಬ್ ಡ್ರೈವರ್ ಪ್ರೇಮಿಗಳ ಕಾಟದಿಂದ ಎಷ್ಟು ನೊಂದಿರಬೇಡ ಎಂದು ಹೇಳಿದ್ದಾರೆ.