ಬೆಂಗಳೂರು: ರಾಜ್ಯದ 23 ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್ವಾರು ಮೀಸಲಾತಿ ಪಟ್ಟಿ ಸಿದ್ಧಪಡಿಸಿ ಸಚಿವರ ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ವಿಳಂಬದ ಹಿನ್ನೆಲೆಯಲ್ಲಿ, ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ ಅವಧಿಯನ್ನು ತಮ್ಮ ಐದು ವರ್ಷದ ಅಧಿಕಾರಾವಧಿಗೆ ಪರಿಗಣಿಸಬಾರದು ಹಾಗೂ ಈಗ ಅವಧಿ ಮುಗಿದ ಕಾರಣ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ, ಕೋಲಾರ ನಗರಭೆ ಸೇರಿದಂತೆ ರಾಜ್ಯದ 70ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಹಲವು ಅರ್ಜಿಗಳನ್ನು ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ. ಅಲ್ಲದೆ, 28 ಸ್ಥಳೀಯ ಸಂಸ್ಥೆಗಳ ಕರಡು ಮೀಸಲಾತಿ ಪ್ರಕಟಿಸಲಾಗಿದೆ. ಅಂತಿಮ ಮೀಸಲಾತಿ ಪಟ್ಟಿಯನ್ನು ಬಳಿಕ ಚುನಾವಣಾ ಆಯೋಗಕ್ಕೆ ರವಾನಿಸಲಾಗುವುದು ಎಂದು ವಕೀಲರು ನ್ಯಾಯಪೀಠಕ್ಕೆ ಮಾಹಿತಿ ಒದಗಿಸಿದರು.
ಈ ಅಂಶ ದಾಖಲಿಸಿಕೊಂಡಿರುವ ನ್ಯಾಯಪೀಠ, ಮೀಸಲಾತಿ ಪಟ್ಟಿ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆಗಳಿರಲಿವೆ. ಆದ್ದರಿಂದ ಈ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿತು.
ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ, ಸರ್ಕಾರದ ಪರ ವಕೀಲರು, ”ಕೆಲವು ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಡ್ ಮರುವಿಂಗಡಣೆ ಮಾಡಬೇಕಿತ್ತು. ಆ ಪ್ರಕ್ರಿಯೆ ಮುಗಿಸಲಾಗಿದೆ. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವಾರ್ಡವಾರು ಮೀಸಲಾತಿಯ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಆಕ್ಷೇಪಣೆಗೆ ಕಾಲಾವಕಾಶ ನೀಡಿದ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಿ, ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ನೀಡಲಾಗುವುದು” ಎಂದು ತಿಳಿಸಿದರು.
ಈ ಅಂಶವನ್ನು ದಾಖಲಿಸಿಕೊಂಡಿದ್ಡದ ನ್ಯಾಯಪೀಠ, ”ಚುನಾವಣೆ ನಡೆಸುವ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳನ್ನು ಪ್ರತಿ ವಾರದ ಆಧಾರದಲ್ಲಿ ಮೇಲ್ವಿಚಾರಣೆ ನಡೆಸಲಾಗುವುದು. ಐದು ವರ್ಷದ ಅವಧಿ ಮುಗಿಸಿರುವ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿದಿದೆ.
ಯಾವುದೇ ಹಕ್ಕು ಪ್ರತಿಪಾದಿಸಲು ಅವರಿಗೆ ಹೆಚ್ಚು ಅವಕಾಶ ಇಲ್ಲವಾಗಿದೆ. ಆದರೆ, ಐದು ವರ್ಷದ ಅವಧಿ ನಿಗದಿ, ಮೀಸಲಾತಿ ವಿಳಂಬ, ಆಡಳಿತಾಧಿಕಾರಿಗಳ ನೇಮಕ ಸೇರಿದಂತೆ ಅರ್ಜಿದಾರರು ಎತ್ತಿರುವ ಕಾನೂನು ಪ್ರಶ್ನೆಗಳ ಬಗ್ಗೆ ಅವುಗಳ ಅರ್ಹತೆ ಆಧಾರದಲ್ಲಿ ವಿಚಾರಣೆ ಮುಂದುವರೆಸಲಾಗುವುದು. ಸರ್ಕಾರ 10 ದಿನಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ಅರ್ಜಿದಾರರು ತಮ್ಮ ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಬೇಕು” ಎಂದು ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿತು.


