Menu

ಜೆಡಿಯು-ಟಿಡಿಪಿಯಲ್ಲಿ ವಕ್ಫ್ ಬೇಗುದಿ: ಏನು-ಎತ್ತ

ವಕ್ಫ್ ಆಸ್ತಿಗಳ ಸಂರಕ್ಷಣೆ ಸಂಬಂಧ ಎನ್‌ಡಿಎ ಸರ್ಕಾರ ಮಂಡಿಸಿದ್ದ ವಿಧೇಯಕ ಎರಡೂ ಸದನಗಳ ಒಪ್ಪಿಗೆ ಪಡೆದಿದೆ. ರಾಷ್ಟ್ರಪತಿಯ ಅಂಕಿತವನ್ನೂ ಪಡೆದಿದೆ. ಆಡಳಿತಾರೂಢ ಬಿಜೆಪಿ ಮತ್ತು ಮಿತ್ರಪಕ್ಷಗಳು ಈ ವಿಧೇಯಕವನ್ನು ಸ್ವಾಗತಿಸಿದ್ದರೆ, ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಧರ್ಮದ ಬೇರುಗಳನ್ನು ಅಲುಗಾಡಿಸುವ ರೀತಿಯಲ್ಲಿ ಮೋದಿ ಸರ್ಕಾರ ಸಂವಿಧಾನ ವಿರೋಧಿ ನೀತಿಯನ್ನು ತಾಳಿದೆ ಎಂದು ಸದನದ ಒಳಗೆ ಮತ್ತು ಹೊರಗೆ ಕಟು ಟೀಕೆ ಮಾಡಿವೆ.

ಬಿಜೆಪಿ ಪಕ್ಷಕ್ಕೆ ಲೋಕ ಸಭೆಯಲ್ಲಿ ಸ್ಪಷ್ಟ ಬಹುಮತ ವಿಲ್ಲದಿದ್ದರೂ ತೆಲುಗುದೇಶಂ ಮತ್ತು ಜೆಡಿಯು ನೆರವಿನೊಂದಿಗೆ ಈ ವಿಧೇಯಕವು ಸಂಸತ್ ಪರೀಕ್ಷೆಯಲ್ಲಿ ಉತ್ತೀರ್ಣವಾಗಿರುವುದು ದಿಟ. ಆದರೆ ಇದು ಎನ್‌ಡಿಎ ಮಿತ್ರಕೂಟದ ಮೇಲೆ ರಾಜಕೀಯ ಪ್ರಭಾವವನ್ನು ಬೀರುವುದು ಖಂಡಿತ.

ಈಗಾಗಲೇ ಜೆಡಿಯು ಸಂಸದರಲ್ಲಿ ತಮ್ಮ ಪಕ್ಷವು ವಿಧೇಯಕಕ್ಕೆ ಬೆಂಬಲವಾಗಿ ನಿಂತಿದ್ದಕ್ಕೆ ಈ ಪಕ್ಷದ ಕೆಲ ಸಂಸದರೀಗ ತೀವ್ರ ಅಸಮಾಧಾನ ತಾಳಿದ್ದಾರೆ. ಲೋಕಸಭೆಯಲ್ಲಿ ಒಟ್ಟು ಹದಿನಾರು ಮಂದಿ ಸಂಸದರನ್ನು ಹೊಂದಿರುವ ಜೆಡಿಯು ಇದೇ ವಿಷಯವನ್ನು ಮುಂದಿಟ್ಟುಕೊಂಡು ಪಕ್ಷದ ನೇತಾರ ನಿತೀಶ್‌ಕುಮಾರ್ ಅವರಿಗೆ ಸೆಡ್ಡು ಹೊಡೆದರೆ, ಇದು ಮೋದಿ ಸರ್ಕಾರದ ಮೇಲೆ ರಾಜಕೀಯವಾಗಿ ಗಂಭೀರ ಪರಿಣಾಮ ಬೀರುವು ಸಾಧ್ಯತೆಗಳು ದಟ್ಟವಾಗಿವೆ. ಬಿಹಾರ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮತಗಳನ್ನು ಕಳೆದು ಜೆಡಿಯು ಇಲ್ಲಿ ತನ್ನ ರಾಜಕೀಯ ಭವಿಷ್ಯವನ್ನು ಭದ್ರಗೊಳಿಸಲು ಸಾಧ್ಯವೇ? ಈ ವಿಚಾರದಲ್ಲಿ ಪಕ್ಷದ ಪ್ರಮುಖ ನಾಯಕರು ಮತ್ತು ಸಂಸದರ ಆಲೋಚನೆಗಳು ತುಸು ಭಿನ್ನವಾದಲ್ಲಿ ಬಿಹಾರ ಮತ್ತು ಮೋದಿ ಸರ್ಕಾರದ ಮುಂದಿನ ಕೆಲ ಚಿತ್ರಣಗಳೇ ಬದಲಾಗುವುದು ಖಚಿತ.

ಹಾಗೆಯೇ ತೆಲುಗುದೇಶಂ ಪಕ್ಷದಲ್ಲಿಯೂ ಇದೇ ರಾಜಕೀಯ ಒಳಬೇಗುದಿ ಈಗಷ್ಟೆ ಶುರುವಾಗಿದೆ. ವಕ್ಫ್ ವಿಧೇಯಕಕ್ಕೆ ಚಂದ್ರಬಾಬು ನಾಯ್ಡು ಬೆಂಬಲವನ್ನು ನೀಡಬಾರದಿತ್ತು ಎಂಬ ಅಭಿಪ್ರಾಯವೀಗ ಪಕ್ಷದ ಒಳಗೆ ಕೇಳಿ ಬರತೊಡಗಿದೆ. ಟಿಡಿಪಿ ಈ ನಿರ್ಧಾರದಿಂದ ಆಂಧ್ರದಲ್ಲಿ ಮುಂದಿನ ದಿನಗಳಲ್ಲಿ ಮುಸ್ಲಿಂ ಮತ ಬ್ಯಾಂಕ್‌ ಗಳನ್ನು ಕಳೆದುಕೊಳ್ಳುವ ಭೀತಿ ಇದೆ.  ಇದು ಪರೋಕ್ಷವಾಗಿ ಜಗನ್ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ನಾಯ್ಡು ತೀರ್ಮಾನ ತೆಗೆದುಕೊಂಡಿದ್ದು ಸರಿಯಲ್ಲ ಎಂಬ ಮಾತುಗಳೀಗ ಆಂಧ್ರದ ತೆಲುಗುದೇಶಂ ಪಾರ್ಟಿಯ ವಲಯದಲ್ಲಿ ದಟ್ಟವಾಗಿದೆ. ರಾಜಕೀಯ ಸನ್ನಿವೇಶಗಳಿಗೆ ಅನುಗುಣವಾಗಿ ಇಂದು ಟಿಡಿಪಿ ಎನ್‌ಡಿಎ ಒಕ್ಕೂಟದಲ್ಲಿದ್ದರೂ ಪಕ್ಷದ ಪ್ರಣಾಳಿಕೆ ಮತ್ತು ಸೈದ್ಧಾಂತಿಕವಾಗಿ ಟಿಡಿಪಿ ವಕ್ಫ್ ವಿಧೇಯಕಕ್ಕೆ ನಿಜವಾಗಿಯೂ ಬೆಂಬಲವನ್ನು ನೀಡಲು ಸಾಧ್ಯವೇ ಎಂಬುದು ಗಂಭೀರ ಸಂಗತಿ.

ಒಟ್ಟಿನಲ್ಲಿ ಟಿಡಿಪಿ ಮತ್ತು ಜೆಡಿಯು ವಿಧೇಯಕದ ವಿಚಾರವಾಗಿ ಸಂಸತ್ ಒಳಗೆ ಮೋದಿ ಸರ್ಕಾರದ ನಿಲುವನ್ನು ಬೆಂಬಲಿಸಿದರೂ, ಮುಸ್ಲಿಂ ಸಮುದಾಯಕ್ಕೆ ಈ ಎರಡೂ ಪಕ್ಷಗಳ ನೇತಾರರು ನೀಡುವ ಸಮಜಾಯಿಷಿ ಏನು ಎಂಬುದೀಗ ಪ್ರಶ್ನೆ. ವಿಧೇಯಕದ ವಿರುದ್ಧ ಧ್ವನಿ ಎತ್ತಿರುವ ಡಿಎಂಕೆ ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ತೀರ್ಮಾನಿಸಿದೆ. ಇದು ದೇಶದ ಸಂವಿಧಾನ ವಿರೋಧಿಯೋ ಅಥವಾ ಸಂಸತ್ ನಿರ್ಣಯವೇ ಪರಮೋಚ್ಚವೋ ಎಂಬುದನ್ನು ತೀರ್ಮಾನಿಸುವ ನ್ಯಾಯಿಕ ಕಾಲ ಬಹಳ ದೂರವಿದೆ.

Related Posts

Leave a Reply

Your email address will not be published. Required fields are marked *