Menu

ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರ

1995ರ ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆಗೆ ಬಿಜೆಪಿ ನೇತೃತ್ವ ಎನ್‌ಡಿಎ ಸರ್ಕಾರ ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡ ಬಳಿಕ ಶುಕ್ರವಾರ ನಸುಕಿನಲ್ಲಿ ರಾಜ್ಯಸಭೆಯಲ್ಲೂ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಮಸೂದೆ ಪರ ೧೨೮, ವಿರುದ್ಧ ೯೫ ಮತಗಳು ಬಂದಿವೆ.

ರಾಜ್ಯಸಭೆಯಲ್ಲಿ ಮಸೂದೆಯ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆದಿದ್ದು, ಆಡಳಿತಾರೂಢ ಎನ್‌ಡಿಎ ಸದಸ್ಯರು ಮಸೂದೆ ಪರವಾಗಿಯೂ ಮತ್ತು ಪ್ರತಿಪಕ್ಷ ಸದಸ್ಯರು ಮಸೂದೆ ವಿರುದ್ಧವಾಗಿಯೂ ವಾದ ಮಂಡಿಸಿದ್ದರು.

ವಕ್ಫ್ ತಿದ್ದುಪಡಿ ಮಸೂದೆ-2025ನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ಮಂಡಿಸಿದ್ದರು. ಈ ಮಸೂದೆಯನ್ನು ಸಂಸತ್ತಿ ನಲ್ಲಿ ಮಂಡಿಸುವ ಮೊದಲು ನಾವು ರಾಜ್ಯ ಸರ್ಕಾರಗಳು, ಅಲ್ಪಸಂಖ್ಯಾತ ಆಯೋಗಗಳು ಮತ್ತು ವಕ್ಫ್ ಮಂಡಳಿಗಳೊಂದಿಗೆ ಸಮಾಲೋಚಿಸಿದ್ದೇವೆ ಎಂದು ಹೇಳಿದ್ದರು.

ಮಸೂದೆಯು ಮುಸ್ಲಿಂ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ ಎಂಬ ಆರೋಪಗಳನ್ನು ತಳ್ಳಿಹಾಕಿದರು ಮತ್ತು ಮುಸ್ಲಿಮೇತರರು ವಕ್ಫ್ ಮಂಡಳಿಯ ವ್ಯವಹಾರ ಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅದರ ನಿರ್ವಹಣೆ ಮತ್ತು ಫಲಾನುಭವಿಗಳು ಪ್ರತ್ಯೇಕವಾಗಿ ಮುಸ್ಲಿಮರಾಗಿಯೇ ಉಳಿಯುತ್ತಾರೆ ಎಂದು ಪ್ರತಿಪಾದಿಸಿದರು.

ಮತದಾನಕ್ಕೆ ಕೆಲವೇ ಗಂಟೆಗಳ ಮೊದಲು, ನವೀನ್ ಪಟ್ನಾಯಕ್ ಅವರ ಬಿಜು ಜನತಾದಳವು ತನ್ನ ಏಳು ಮೇಲ್ಮನೆ ಸಂಸದರಿಗೆ, ಅವರು ಬಯಸಿದ ಯಾವುದೇ ಪಕ್ಷಕ್ಕೆ ಮತ ಚಲಾಯಿಸಬಹುದು ಎಂದು ಹೇಳಿತ್ತು.

ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಮಸೂದೆಯನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಬಾರದು ಎಂದು ಹೇಳಿದರು. ಸರ್ಕಾರ ಮಾಡುತ್ತಿರುವುದು ಒಳ್ಳೆಯದಲ್ಲ. ಇದು ದೇಶದಲ್ಲಿ ವಿವಾದಗಳಿಗೆ ಕಾರಣವಾಗುತ್ತದೆ. ವಿವಾದಗಳಿಗೆ ಬೀಜ ಬಿತ್ತುತ್ತಿದ್ದೀರಿ, ಇದನ್ನು ಹಿಂತೆಗೆದುಕೊಳ್ಳುವಂತೆ ನಾನು ಗೃಹ ಸಚಿವರಲ್ಲಿ ಮನವಿ ಮಾಡುತ್ತೇನೆ. ದೋಷಗಳನ್ನು ಸರಿಪಡಿಸುವುದರಿಂದ ಏನು ಹಾನಿ ಎಂದು ಪ್ರಶ್ನಿಸಿದರು.

Related Posts

Leave a Reply

Your email address will not be published. Required fields are marked *