ಜೆಡಿಯು ನಾಯಕ ನಿರಂಜನ್ ಕುಶ್ವಾಹ ಅವರ ಮನೆಯಲ್ಲಿ ಕುಟುಂಬದ ಮೂವರು ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ, ಬಿಹಾರದಲ್ಲಿ ಮತದಾನಕ್ಕೆ ಒಂದು ದಿನ ಬಾಕಿಯಿರುವಾಗ ಜೆಡಿಯು ನಾಯಕನ ಮನೆಯಲ್ಲಿ ಅನುಮಾನಾಸ್ಪದವಾಗಿ ಮೂವರು ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೃತರನ್ನು ನಿರಂಜನ್ ಅವರ ಹಿರಿಯ ಸಹೋದರ ನವೀನ್ ಕುಶ್ವಾಹ, ಅವರ ಪತ್ನಿ ಕಾಂಚನ್ ಮಾಲಾ ಸಿಂಗ್ ಮತ್ತು ಅವರ ಮಗಳು ತನು ಪ್ರಿಯಾ ಎಂದು ಗುರುತಿಸಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಹ್ಯಾಟ್ ಪೊಲೀಸ್ ಠಾಣೆ ಪ್ರದೇಶದ ಬಳಿಯ ಯುರೋಪಿಯನ್ ಕಾಲೋನಿಯಲ್ಲಿ ಈ ಘಟನೆ ಸಂಭವಿಸಿದೆ. ಕುಟುಂಬ ಸದಸ್ಯರು ಅವರನ್ನು ಪೂರ್ಣಿಯಾದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರು. ಚಿಕಿತ್ಸೆಯ ಸಮಯದಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಸೋದರನ ಮಗಳು ತನ್ನು ಪ್ರಿಯಾ ಮೆಟ್ಟಿಲುಗಳಿಂದ ಜಾರಿ ಬಿದ್ದಿದ್ದಾಳೆ, ಸೋದರ ನವೀನ್ ಕುಶ್ವಾಹ ತಮ್ಮ ಮಗಳನ್ನು ರಕ್ಷಿಸಲು ಹೋದಾಗ ಅವರೂ ಬಿದ್ದರು, ಮಗಳು ಮತ್ತು ಗಂಡ ಸತ್ತಿರುವುದನ್ನು ನೋಡಿದ ಅತ್ತಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಜೆಡಿಯು ನಾಯಕ ನಿರಂಜನ್ ಕುಶ್ವಾಹ ಹೇಳಿದ್ದಾರೆ.
ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೃತ ನವೀನ್ ಕುಶ್ವಾಹ ಹಿಂದೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ೨೦೦೯ರಲ್ಲಿ ಬಿಎಸ್ಪಿಯಿಂದ ಪುರ್ನಿಯಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.
ಇದು ಸಹಜ ಸಾವು ಎಂದು ತೋರುತ್ತಿಲ್ಲ. ಅನುಮಾನಾಸ್ಪದವಾಗಿದೆ. ಉನ್ನತ ಮಟ್ಟದಲ್ಲಿ ತನಿಖೆ ಮಾಡಬೇಕು. ಮೂರು ಸಾವುಗಳು ಏಕಕಾಲದಲ್ಲಿ ಹೇಗೆ ಸಂಭವಿಸಿದವು ಎಂದು ಸಂಸದ ಪಪ್ಪು ಯಾದವ್ ಪ್ರಶ್ನಿಸಿದ್ದಾರೆ.


