ಬೆಂಗಳೂರು: 2023ರ ಚುನಾವಣೆ ವೇಳೆ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತ ಕಳ್ಳತನ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಶಾಸಕ, ಅವರ ಮಗ ಮತ್ತು ಆಪ್ತ ಸಹಾಯಕ ಸೇರಿದಂತೆ 7 ಮಂದಿಯ ವಿರುದ್ಧ ಎಸ್ ಐಟಿ ಚಾರ್ಜ್ ಶೀಟ್ ಸಲ್ಲಿಸಿದೆ.
ವಿಶೇಷ ತನಿಖಾ ತಂಡ ಬೆಂಗಳೂರಿನ ಮೊದಲ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ 22,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, 5,994 ಮತದಾರರ ಹೆಸರನ್ನು ತೆಗೆದುಹಾಕಿರುವ ಬಗ್ಗೆ ದೋಷಾರೋಪ ಮಾಡಿದೆ.
ಆರೋಪ ಪಟ್ಟಿಯಲ್ಲಿ ನಾಲ್ಕು ಬಾರಿ ಆಯ್ಕೆ ಆಗಿದ್ದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಅವರ ಮಗ ಹರ್ಷಾನಂದ ಗುತ್ತೇದಾರ್, ಅವರ ಆಪ್ತ ಕಾರ್ಯದರ್ಶಿ ತಿಪ್ಪೇರುದ್ರ, ಕಲಬುರಗಿ ಮೂಲದ ಮೂವರು ಡೇಟಾ ಸೆಂಟರ್ ನಿರ್ವಾಹಕರಾದ ಅಕ್ರಮ್ ಪಾಷಾ, ಮುಕರಾಮ್ ಪಾಷಾ ಮತ್ತು ಮೊಹಮ್ಮದ್ ಅಶ್ಫಾಕ್ ಹಾಗೂ ಪಶ್ಚಿಮ ಬಂಗಾಳದ ಬಾಪಿ ಅದ್ಯಾ ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ ಎಂದು ಎಸ್ಐಟಿ ಮೂಲಗಳಿಂ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಆದ್ಯ ಎಂಬುವರನ್ನು ಮೊದಲಿಗೆ ಬಂಧನ ಮಾಡಲಾಗಿತ್ತು. ಈ ಆದ್ಯ ಒಟಿಪಿ ಬೈಪಾಸ್ ಸೌಲಭ್ಯವನ್ನು ಒದಗಿಸಲು ಅಮೆರಿಕ ಮೂಲದ ವೇದಿಕೆಯೊಂದಿಗೆ ಸಂಪರ್ಕ ಹೊಂದಿದ್ದ ಒಟಿಪಿ ಬಜಾರ್ ಎಂಬ ವೆಬ್‌ಸೈಟ್ ಅನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ನಡುವೆ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಕೂಡಾ ಮಾಡಲಾಗಿದೆ.
ನಿರೀಕ್ಷಣಾ ಜಾಮೀನಿನ ಮೇಲೆ ಹೊರಗಿರುವ ಗುತ್ತೇದಾರ್: ವಿಶೇಷ ನ್ಯಾಯಾಲಯವು ಈ ಹಿಂದೆ ಗುತ್ತೇದಾರ್ ಹಾಗೂ ಅವರ ಪುತ್ರ ಮತ್ತು ತಿಪ್ಪೇರುದ್ರ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು ಎಂದು ಮೂಲಗಳು ತಿಳಿಸಿವೆ.
2023 ಫೆಬ್ರವರಿ ತಿಂಗಳಲ್ಲಿ 6,018 ಮತಗಳ ರದ್ದತಿಗಾಗಿ ಅಕ್ರಮ್ ಪಾಷಾ ಹಾಗೂ ಆತನ ಸಹೋದರರು ಅರ್ಜಿ ಸಲ್ಲಿಸಿದ್ದರು. ಒಟಿಪಿ ಬಳಸಿಕೊಂಡು ಮತಪಟ್ಟಿಯಿಂದ ಹೆಸರು ಡಿಲೀಟ್ ಮಾಡಲಾಗಿತ್ತು ಎಂದು ಎಸ್ಐಟಿ ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಪಟ್ಟಂತೆ ಗುತ್ತೇದಾರ್ ಅವರ ಮನೆ ಹಾಗೂ ಇನ್ನಿತರ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ವಿಚಾರಣೆ ಸಹ ನಡೆಸಿತ್ತು.
ಆರೋಪ ತಳ್ಳಿ ಹಾಕಿದ ಮಾಜಿ ಶಾಸಕರ ಪುತ್ರ: ಎಸ್ಐಟಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ, ಮಾಜಿ ಶಾಸಕರ ಪುತ್ರ ಹರ್ಷಾನಂದ, ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ತಮ್ಮ ತಂದೆಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ.


